ಕೋಲಾರ: ‘ದಲಿತರ ಮೇಲೆ ಪೊಲೀಸ್ ಪ್ರಕರಣಗಳು ದಾಖಲಾಗಲು ಶುರುವಾದ ದಿನದಿಂದ ಚಳವಳಿ ಮೂಲಕ ದಲಿತ ಸಾಹಿತ್ಯ ಹುಟ್ಟುಕೊಂಡಿತು’ ಎಂದು ಸಾಹಿತಿ ಬಿ.ಎಂ.ಪುಟ್ಟಯ್ಯ ಅಭಿಪ್ರಾಯಪಟ್ಟರು.
ಇಲ್ಲಿ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ದಲಿತ ಸಾಂಸ್ಕೃತಿಕ ಚಿಂತನೆ ಕುರಿತ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ದಲಿತ ಸಾಹಿತ್ಯ ಸಾಮಾಜಿಕ ನ್ಯಾಯದ ಕಲ್ಪನೆಯನ್ನು ಬೆಂಬಲಿಸುತ್ತಿದೆ’ ಎಂದು ಹೇಳಿದರು.
‘ಈ ಹಿಂದೆ ನಡೆದ ದಲಿತರೇತರ ಹೋರಾಟದ ಪ್ರಕರಣಗಳು ಈಗಲೂ ಹೃದಯ ತಟ್ಟುತ್ತಿವೆ. ಚಳವಳಿಗಳು ಅನೇಕ ಬಣಗಳಾಗಿ ವಿಂಗಡನೆಯಾಗಿವೆ. ಬಾಬಬುಡನ್ ಗಿರಿ ಪ್ರಕರಣಕ್ಕಾಗಿ ಎಲ್ಲಾ ಸಂಘಟನೆಗಳು ಒಂದೇ ವೇದಿಕೆಯಿಂದ ಹಕ್ಕೋತ್ತಾಯ ಮಾಡುತ್ತವೆ. ಕುಕ್ಕೆ ಸುಬ್ರಮಣ್ಯ ದೇವಾಲಯದಲ್ಲಿ ಮಡೆಮಡೆ ಸ್ನಾನ ನಿಲ್ಲಿಸಲು ಹೋರಾಟ ನಡೆಸಿದವರು ಬಡವರ ಹಾಗೂ ದಲಿತರ ಸಮಸ್ಯೆಗಳ ವಿರುದ್ಧ ಎಂದಾದರೂ ಹೋರಾಟ ನಡೆಸಿದ ಉದಾಹರಣೆ ಇದೆಯೇ?’ ಎಂದು ಪ್ರಶ್ನಿಸಿದರು.
‘ಉಡುಪಿಯಲ್ಲಿ ಸಹ ಭೋಜನ ಬೇಕು. ದಲಿತರಲ್ಲದವರು ದಲಿತ ಕೇರಿಗಳನ್ನು ಪ್ರವೇಶಿಸುವ ಮೂಲಕ ಜಾಗ ಇಲ್ಲದಂತೆ ಮಾಡಲು ಮುಂದಾಗಿದ್ದಾರೆ. ಮಡೆಮಡೆ ಸ್ನಾನ ನಿಲ್ಲಿಸುವುದರ ಜತೆಗೆ ಮಲ ಹೊರುವುದನ್ನು ನಿಲ್ಲಿಸುವುದಕ್ಕೆ ಮುಂದೆ ಬಂದಿದ್ದನ್ನು ನೋಡಲಿಲ್ಲ’ ಎಂದು ವಿಷಾದಿಸಿದರು.
‘ಕೋಲಾರ ಜಿಲ್ಲೆಯ ಹೋರಾಟ ಕವಿಗಳು ಇಡೀ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ದಲಿತರು ಅಕ್ಷರ ಕಲಿಯಲು ಮುಂದಾದರೆ ಪೊಲೀಸ್ ದೂರು ಆಗುತ್ತಿತ್ತು. ಅಲ್ಲಿಂದಲೇ ಚಳವಳಿ ಆರಂಭವಾಯಿತು. ಸಾಮಾಜಿಕ ನ್ಯಾಯದ ಹಕ್ಕೋತ್ತಾಯ ಮಂಡಿಸುವುದು ಚಳವಳಿಯ ಮುಖ್ಯ ಉದ್ದೇಶವಾಗಿತ್ತು’ ಎಂದು ವಿವರಿಸಿದರು.
ಅನ್ನಕ್ಕಾಗಿ ಹೋರಾಟ: ‘ಬುಡಕಟ್ಟು ಸಂಸ್ಕೃತಿ’ ಕುರಿತು ವಿಚಾರ ಮಂಡಿಸಿದ ಸಾಹಿತಿ ಬಾಲಗುರುಮೂರ್ತಿ, ‘ತಳ ಸಮುದಾಯಗಳು ಸೃಷ್ಟಿ ಪೂರಣಗಳ ಮೂಲಕವೇ ಸಮಾಜದಲ್ಲಿ ಗುರುತಿಸಿಕೊಳ್ಳಲು ಮುಂದಾಗುತ್ತವೆ. ಇದಕ್ಕೆ -ವೈದಿಕರ ಮತ್ತು ಜನಪದ ಪೂರಣಗಳು ಮಂಡನೆ ಮಾಡುವ ವಿಚಾರಗಳು ಸಹಕಾರಿಯಾಗುತ್ತವೆ’ ಎಂದರು.
‘ಶೋಷಿತ ಸಮುದಾಯದವರು ಮಕ್ಕಳನ್ನು ಜೀತಕ್ಕೆ ಕಳುಹಿಸುತ್ತಿದ್ದರು. ಆ ಪದ್ಧತಿ ನಿರ್ಮೂಲನೆಯಾಗಲು ಹಂತಹಂತವಾಗಿ ಆದ ಬದಲಾವಣೆಗಳೇ ಕಾರಣ. ಅಂಬೇಡ್ಕರ್‌ವಾದಿಗಳು ಈಗಿನ ಕಾಲಕ್ಕೆ ಬುದ್ಧಿವಂತರಾಗಿದ್ದು, ಹೋರಾಟಗಳೇ ಅವರ ವಿಶ್ವವಿದ್ಯಾಲಯಗಳು’ ಎಂದು ಅಭಿಪ್ರಾಯಪಟ್ಟರು.
‘ಜಾತಿ ವ್ಯವಸ್ಥೆ ಗಟ್ಟಿಯಾಗುತ್ತಿರುವ ಸಂದರ್ಭದಲ್ಲಿ ಬುಡಕಟ್ಟು ಜನ ನೆಮ್ಮದಿಯಿಂದ ಇದ್ದಾರೆ. ರಾಜ್ಯದಲ್ಲಿ ೫೧ ಬುಡಕಟ್ಟುಗಳಿವೆ. ಸೈಮಾನ್ ಕಮಿಷನ್ ಅಡಿ ಮೀಸಲಾತಿ ಕಲ್ಪಿಸುವ ಕುರಿತು ಚರ್ಚೆ ನಡೆಯುತ್ತಲೇ ಇದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಜಾತಿಗಳನ್ನು ಸೇರಿಸುವ ವಿಚಾರದಲ್ಲಿ ಅನೇಕ ಉಪ ಜಾತಿಗಳು ದೂರ ಉಳಿದಿದ್ದು, -ಅನ್ನಕ್ಕಾಗಿ ಹೋರಾಟ ನಡೆಯುತ್ತಲೇ ಇದೆ’ ಎಂದು ಕಳವಳ ವ್ಯಕ್ತಪಡಿಸಿದರು.
ಪರಿಣಾಮ ಬೀರಿತು: ‘೨೦೦೬ರಲ್ಲಿ ಜಾರಿಗೆ ಬಂದ ಅರಣ್ಯ ಕಾಯ್ದೆಯು ಬುಡಕಟ್ಟು ಜನರ ಬದುಕಿನ ಮೇಲೆ ಪರಿಣಾಮ ಬೀರಿತು. ರಾಜ್ಯದ ೫೧ ಬುಡಕಟ್ಟುಗಳಲ್ಲಿ ಯಾವುದೇ ಒಂದು ಸಮುದಾಯ ರಾಜಕೀಯ ಕ್ಷೇತ್ರಕ್ಕೆ ಬರಲು ಸಾಧ್ಯವಾಗಲಿಲ್ಲ. ಬಡತನ, ಅವಮಾನ, ಜಾತಿ ಸಂಗತಿಗಳನ್ನು ಜಾನಪದ ಸಾಹಿತ್ಯದಲ್ಲಿ ಕಾಣಬಹುದು. ಜಾತಿ ಅಹಂಕಾರದ ವಿರುದ್ಧ ಹೋರಾಟ ಮಾಡಿರುವ ದಾಖಲೆಗಳನ್ನು ಮಂಟೆಸ್ವಾಮಿ ಕಾವ್ಯದಲ್ಲಿ ಕಾಣಬಹುದು. ತತ್ವ ಪದಗಳಲ್ಲೂ ದಲಿತ ಪ್ರತಿನಿಧೀಕರಣ ಕಾಣಬಹುದು’ ಎಂದು ಪ್ರತಿಪಾದಿಸಿದರು.
ಸಾಹಿತಿ ಅಣ್ಣಮ್ಮ ‘ದಲಿತ ಸಂಸ್ಕೃತಿಯ ವಿವಿಧ ಆಯಾಮಗಳು’ ಹಾಗೂ ಸಾಹಿತಿ ಅಪ್ಪಗೆರೆ ಸೋಮಶೇಖರ ಅವರು ‘ಜನಪದ ಸಾಹಿತ್ಯದಲ್ಲಿ ದಲಿತ ಪ್ರತಿನಿಧೀಕರಣ’ ಕುರಿತು ವಿಷಯ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.