ಕೋಲಾರ: ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್‌ನ ವಿವಿಧ ಶಾಖೆಗಳಲ್ಲಿ ನಡೆದಿರುವ ಹಣ ದುರುಪಯೋಗ, ವಂಚನೆ ದೂರಿನ ಸಂಬಂಧ ಮೂವರು ವ್ಯವಸ್ಥಾಪಕರನ್ನು ಅಮಾನತುಗೊಳಿಸಲಾಗಿದೆ.
ಕೋಲಾರ ಶಾಖೆ ಅಮರೇಶ್ ಎಂ., ಕೆಜಿಎಫ್ ಶಾಖೆ ವ್ಯವಸ್ಥಾಪಕರಾಗಿದ್ದ ಗಿರೀಶ್ ಜಿ.ಎನ್. ಹಾಗೂ ಚಿಂತಾಮಣಿ ಶಾಖೆ ವ್ಯವಸ್ಥಾಪಕರಾಗಿದ್ದ ನಾಗರಾಜ್ ಜಿ. ಅಮಾನತುಗೊಂಡವರು. ಒಟ್ಟು ₹9.87ಕೋಟಿ ಅವ್ಯವಹಾರ ನಡೆದಿರುವುದು ಗೊತ್ತಾಗಿದೆ. ಚಂಚಿಮಲೆಯ ಮುನೀಶ್ ಎಂಬುವರ ದೂರಿನ ಮೇಲೆ ಬ್ಯಾಂಕ್‌ನ ಆಂತರಿಕ ಪರಿವೀಕ್ಷಣಾಧಿಕಾರಿಗಳು ವಿಚಾರಣೆ ನಡೆಸಿ ನೀಡಿದ ವರದಿಯಲ್ಲೂ ಹಣ ದುರುಪಯೋಗವಾಗಿರುವ ಉಲ್ಲೇಖವಿದೆ.
ಡಿಸಿಸಿ ಬ್ಯಾಂಕ್‌ನ ಚಿಂತಾಮಣಿ ಶಾಖೆಯಲ್ಲಿ ₹2.24ಕೋಟಿ ವಂಚನೆ ಹಾಗೂ ಅವ್ಯವಹಾರ ಆರೋಪ ಸಂಬಂಧ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಬಿ.ಎನ್.ಶೀಲಾ ವಿರುದ್ಧವೂ ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣದಲ್ಲಿ ನಾಗರಾಜ್ ಜಿ. ಹಾಗೂ ಮಾಜಿ ಮೇಲ್ವಿಚಾರಕ ಸಂತೋಷ್ ಕೆ. ಪ್ರಮುಖ ಆರೋಪಿಗಳು. ಇವರಲ್ಲದೇ, ಬೊಮ್ಮೆಪಲ್ಲಿ, ಅಂಕಾಲಮಡುಗು, ಯನಮಲಪಾಡಿ ವ್ಯವಸಾಯ ಸೇವಾ ಸಹಕಾರ ಸಂಘಗಳ ಕಾರ್ಯನಿರ್ವಹಣಾಧಿಕಾರಿಗಳ ವಿರುದ್ಧವೂ ಎಫ್‌ಐಆರ್ ದಾಖಲಾಗಿತ್ತು.
ಸ್ವಸಹಾಯ ಸಂಘಗಳ ಸಾಲವನ್ನು ವಸೂಲಾತಿ ಆಧಾರದ ಮೇಲೆ ಬಡ್ಡಿ ಸಹಾಯಧನ ಪಡೆಯಲು ಅವಕಾಶವಿದೆ. ಚಿಂತಾಮಣಿ ಶಾಖೆ ಅಧಿಕಾರಿಗಳು ಸರ್ಕಾರದಿಂದ ಬರಬೇಕಾದ ಬಡ್ಡಿ ಬಾಬತ್ತು ಎಂಬ ನಕಲಿ ಖಾತೆ ಸೃಷ್ಟಿಸಿ, ವಸೂಲಾತಿ ತೋರಿಸಿ 2021ರ ಅ.29ರಿಂದ 2022ರ ಫೆ.4ರ ಅವಧಿಯಲ್ಲಿ ₹2.24 ಕೋಟಿ ಬಡ್ಡಿ ತೆಗೆದುಕೊಂಡಿದ್ದಾರೆ. ಇದು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದು, ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ಬ್ಯಾಂಕ್‌ನ ಆಂತರಿಕ ಪರಿವೀಕ್ಷಣಾಧಿಕಾರಿ ವರದಿಯಲ್ಲೂ ಈ ಅಂಶದ ಉಲ್ಲೇಖವಿದೆ ಎಂದು ದೂರು ದಾಖಲಾಗಿತ್ತು.
‘ಚಿಂತಾಮಣಿ ಶಾಖೆಯಲ್ಲಿ ಬೇನಾಮಿ ಸ್ವಸಹಾಯ ಸಂಘಗಳನ್ನು ರಚಿಸಿ ಸಾಲವನ್ನು ಪಡೆದು, ಆ ಸಂಘಗಳ ವಸೂಲಿಗೆ ಬ್ಯಾಂಕ್‌ನ ಬಂಡವಾಳವನ್ನು ಬಳಸಿ ದುರುಪಯೋಗಪಡಿಸಿಕೊಂಡಿದ್ದಾರೆ’ ಎಂದು ತಳಗವಾರದ ಟಿ.ಎಸ್.ಪ್ರತಾಪ್ ಕುಮಾರ್ ಎಂಬುವರು ದೂರು ನೀಡಿದ್ದರು.
‘ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಬ್ಯಾಂಕ್‌ನ ಸಿಇಒ ಶೀಲಾ ಕ್ರಮ ವಹಿಸಿಲ್ಲ. ಪ್ರಕರಣ ಬೆಳಕಿಗೆ ಬಂದ ತಕ್ಷಣ ಪೊಲೀಸ್ ಠಾಣೆಗೆ ದೂರು ನೀಡಿಲ್ಲ. ಪ್ರಕರಣದಲ್ಲಿ ಭಾಗಿಯಾದ ನೌಕರರನ್ನು ಅಮಾನತು ಮಾಡದೆ ಸಾಕ್ಷ್ಯ ನಾಶ ಮಾಡಲು ಸಹಕರಿಸಿ ನಬಾರ್ಡ್ ನಿಯಮ ಉಲ್ಲಂಘಿಸಿದ್ದಾರೆ. ನಂತರ ನೋಟಿಸ್ ನೀಡಿದ್ದು, ಹಣ ವಾಪಾಸಾಗಿಲ್ಲ’ ಎಂದೂ ದೂರಿದ್ದರು.
ಕೋಲಾರ ಶಾಖೆಯಲ್ಲಿ 2017ರಿಂದ 2021ನೇ ಸಾಲಿನವರೆಗೆ ₹1.5ಕೋಟಿ ದುರುಪಯೋಗ ನಡೆದಿದೆ ಎಂಬುದಾಗಿ ಚಂಚಿಮಲೆ ಮುನೀಶ್ ದೂರು ನೀಡಿದ್ದರು. ಬ್ಯಾಂಕ್‌ನ ಆಂತರಿಕ ಪರಿವೀಕ್ಷಣಾ ತಂಡ ಈ ಸಂಬಂಧ ವರದಿ ಸಲ್ಲಿಸಿದೆ. ಈ ಪ್ರಕರಣದಲ್ಲಿ ಶಾಖೆ ವ್ಯವಸ್ಥಾಪಕ ಅಮರೇಶ್ ಅವರನ್ನು ಅಮಾನತುಗೊಳಿಸಲಾಗಿದೆ. ಕೆಜಿಎಫ್ ಶಾಖೆಯಲ್ಲಿ 2020ರಿಂದ 2022ರ ಅವಧಿಯಲ್ಲಿ ನಡೆದಿದೆ ಎನ್ನಲಾದ ₹4.17ಕೋಟಿ ಅವ್ಯವಹಾರ ಸಂಬಂಧ ವ್ಯವಸ್ಥಾಪಕ ಗಿರೀಶ್ ಅವರನ್ನು ಅಮಾನತುಗೊಳಿಸಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಗುಂಡಿಬಂಡೆ ಶಾಖೆಯಲ್ಲಿ 2023–24ನೇ ಸಾಲಿನಲ್ಲಿ ₹1.96 ಕೋಟಿ ಅವ್ಯವಹಾರ ನಡೆದಿರುವ ಸಂಬಂಧ ನೌಕರರಾದ ಸುವರ್ಣಮೂರ್ತಿ ಹಾಗೂ ಅನಿಲ್ ಕುಮಾರ್ ಮೇಲೆ ಎಫ್‌ಐಆರ್ ದಾಖಲಾಗಿದೆ. ಅವರನ್ನೂ ಹಿಂದೆ ಅಮಾನತುಗೊಳಿಸಲಾಗಿತ್ತು.
ಹಣಕಾಸಿನ ಅವ್ಯವಹಾರ ಸಂಬಂಧ ಪ್ರತಿಕ್ರಿಯೆ ಪಡೆಯಲು ಡಿಸಿಸಿ ಬ್ಯಾಂಕ್‌ನ ಆಡಳಿತಾಧಿಕಾರಿ ಬಿ.ಕೆ.ಸಲೀಂ ಅವರ ಮೊಬೈಲ್ ಸಂಖ್ಯೆಗೆ ಕರೆಮಾಡಲಾಯಿತು. ಅವರು ಕರೆ ಸ್ವೀಕರಿಸಲಿಲ್ಲ. ಸಿಇಒ ಶೀಲಾ ಪ್ರತಿಕ್ರಿಯಿಸಿ, ಮೂವರನ್ನು ಅಮಾನತುಗೊಳಿಸಿರುವುದನ್ನು ಖಚಿತಪಡಿಸಿದರು.
‘ಡಿಸಿಸಿ ಬ್ಯಾಂಕ್‌ನಲ್ಲಿ ಕಳೆದ 10 ವರ್ಷಗಳಿಂದ ದೊಡ್ಡಮಟ್ಟದಲ್ಲಿ ಅವ್ಯವಹಾರ ನಡೆದಿದೆ. ಹಲವರನ್ನು ರಕ್ಷಿಸಲಾಗಿದೆ. ಇದರಿಂದ ಬ್ಯಾಂಕ್‌ಗೆ ಭಾರಿ ಆರ್ಥಿಕ ನಷ್ಟ ಉಂಟಾಗಿದೆ. ನಬಾರ್ಡ್ ಹಾಗೂ ಆರ್‌ಬಿಐ ಸುತ್ತೋಲೆ ಉಲ್ಲಂಘಿಸಲಾಗಿದೆ. ಶೀಲಾ ಹಾಗೂ ಸಲೀಂ ಕರ್ತವ್ಯಲೋಪ ಎಸಗಿದ್ದಾರೆ’ ಎಂದು ದೂರುದಾರ ಮುನೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಒಟ್ಟು ₹9.87 ಕೋಟಿ ಅವ್ಯವಹಾರ ಆರೋಪ ಚಿಂತಾಮಣಿ ಶಾಖೆಯಲ್ಲಿ ₹2.24ಕೋಟಿ ವಂಚನೆ ದೂರು, ಎಫ್‌ಐಆರ್ ಬ್ಯಾಂಕ್‌ನ ಆಂತರಿಕ ಪರಿವೀಕ್ಷಣಾಧಿಕಾರಿಗಳ ವರದಿಯಲ್ಲಿ ಉಲ್ಲೇಖ
ಡಿಸಿಸಿ ಬ್ಯಾಂಕ್‌ನ ಹಣ ದುರುಪಯೋಗ ಪ್ರಕರಣದಲ್ಲಿ 16 ನೌಕರರು ಭಾಗಿಯಾಗಿದ್ದು ಕೇವಲ ಮೂವರನ್ನು ಅಮಾನತುಗೊಳಿಸಿದ್ದಾರೆ. ಸಿಇಒ ಆಡಳಿತಾಧಿಕಾರಿ ವೈಫಲ್ಯ ಎದ್ದು ಕಾಣುತ್ತಿದೆಮುನೀಶ್ ಡಿ. ದೂರುದಾರ ಕೋಲಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.