ADVERTISEMENT

ಭೂ ಮಾಫಿಯಾ ಆಟ ನಡೆಯಲ್ಲ; ಮಟ್ಟ ಹಾಕಲಾಗುವುದು- ವಿ.ಏಡುಕೊಂಡಲು

ಕಾನೂನು ಪ್ರಕಾರ ಒತ್ತುವರಿ ತೆರವು: ಡಿಸಿಎಫ್‌‌ ಏಡುಕೊಂಡಲು ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2023, 4:19 IST
Last Updated 12 ಸೆಪ್ಟೆಂಬರ್ 2023, 4:19 IST
ಕೋಲಾರದ ಅರಣ್ಯ ಇಲಾಖೆ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಡಿಸಿಎಫ್‌ ವಿ.ಏಡುಕೊಂಡಲು ಮಾತನಾಡಿದರು. ಅರಣ್ಯಾಧಿಕಾರಿಗಳಾದ ಸಹನ್‌, ಸುಮಂತ್‌, ಕೆ.ಮಹೇಶ್‌ ಇದ್ದಾರೆ
ಕೋಲಾರದ ಅರಣ್ಯ ಇಲಾಖೆ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಡಿಸಿಎಫ್‌ ವಿ.ಏಡುಕೊಂಡಲು ಮಾತನಾಡಿದರು. ಅರಣ್ಯಾಧಿಕಾರಿಗಳಾದ ಸಹನ್‌, ಸುಮಂತ್‌, ಕೆ.ಮಹೇಶ್‌ ಇದ್ದಾರೆ   

ಕೋಲಾರ: ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಮಲ್ಲಂಪಲ್ಲಿ, ದಳಸನೂರು ಹಾಗೂ ಶ್ರೀನಿವಾಸಪುರಕ್ಕೆ ಸೇರಿದ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಒತ್ತುವರಿ ಮಾಡಲಾಗಿದ್ದ ಜಾಗವನ್ನು ಕಾನೂನು ಪ್ರಕಾರ ತೆರವುಗೊಳಿಸಲಾಗುತ್ತಿದೆ. ಭೂ ಮಾಫಿಯಾ ಆಟ ಹೆಚ್ಚು ದಿನ ನಡೆಯಲ್ಲ, ಅದಕ್ಕೆ ಶೀಘ್ರ ಮಟ್ಟ ಹಾಕಲಾಗುವುದು ಎಂದು ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ವಿ.ಏಡುಕೊಂಡಲು ತಿಳಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್, ಹೈಕೋರ್ಟ್ ತೀರ್ಪು ಮತ್ತು ಅರಣ್ಯ ಇಲಾಖೆ ಕಾಯ್ದೆ ಅನುಸಾರವೇ ಶೇ 100ರಷ್ಟು ತೆರವುಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಅರಣ್ಯ ಭೂಮಿ ಒತ್ತುವರಿ ಆಗಿದೆ ಎಂಬುದು ಖಚಿತವಾದ ಮೇಲೆಯೇ ತೆರವುಗೊಳಿಸಲು ಒತ್ತುವರಿದಾರರಿಗೆ ಸಮಯಾವಕಾಶ ನೀಡಲಾಗಿದೆ. ಪೊಲೀಸ್ ಇಲಾಖೆ, ಕಂದಾಯ ಇಲಾಖೆಯ ಸಹಕಾರದೊಂದಿಗೆ ತೆರವು ಮಾಡಿಸಿ ಸಾರ್ವಜನಿಕರ ಸಂಪತ್ತನ್ನು ಭೂ ಮಾಫಿಯಾದಿಂದ ಸ್ವಾಧೀನಪಡಿಸಿಕೊಳ್ಳುತ್ತಿದ್ದೇವೆ ಎಂದರು.

ADVERTISEMENT

‘ಶ್ರೀನಿವಾಸಪುರದಲ್ಲಿ ನಿಜವಾದ ರೈತರು ಅರಣ್ಯ ಭೂಮಿ ಒತ್ತುವರಿ ಮಾಡಿಲ್ಲ. ರೈತರಲ್ಲಿ ಹೆಸರಲ್ಲಿ ಭೂಗಳ್ಳರು 25 ಎಕರೆ, 50 ಎಕರೆ, 75 ಎಕರೆ ಹಾಗೂ 100 ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡವರೇ ಆಗಿದ್ದಾರೆ. ಇವರು ರೈತರೇ' ಎಂದು ಪ್ರಶ್ನಿಸಿದರು.

'500 ವರ್ಷಗಳಿಂದ ಈ ಪ್ರದೇಶ ಅರಣ್ಯವೇ ಆಗಿದೆ. 150 ವರ್ಷಗಳ ಹಿಂದೆ ಮೈಸೂರಿನ ಮಹಾರಾಜರ ಆಳ್ವಿಕೆಯಲ್ಲಿ ಅರಣ್ಯ ಅಭಿವೃದ್ಧಿಪಡಿಸಿ ಅಧಿಸೂಚನೆ ಹೊರಡಿಸಲಾಗಿದೆ. 2001ರಿಂದ ಭೂ ಮಾಫಿಯಾದ ಕಣ್ಣು ಬಿದ್ದಿದೆ, 2005ರಲ್ಲಿ ಗೋಪಾಲರೆಡ್ಡಿ ಎಂಬುವರು ತಮ್ಮ ಪಟಾಲಂ ಜೊತೆ ಸೇರಿಕೊಂಡು ಅತಿಕ್ರಮಿಸಿ ಕೊಂಡಿದ್ದಾರೆ. ಅಧಿಕಾರಿಗಳೊಂದಿಗೆ ಶಾಮೀಲಾಗಿ ನಕಲಿ ದಾಖಲೆ ಸೃಷ್ಟಿಸಿದ್ದಾರೆ ಹೊರತು ಇದು ಯಾರೊಬ್ಬರ ವೈಯಕ್ತಿಕ ಸ್ವತ್ತು ಆಗಿರಲಿಲ್ಲ' ಎಂದು ತಿಳಿಸಿದರು.

‘ಪಾಳ್ಯದಲ್ಲಿ ಗೋಪಾಲರೆಡ್ಡಿ ಹಾಗೂ ಇತರ 14 ಜನ ಒತ್ತುವರಿದಾರರು 2007ರಲ್ಲಿ 20 ಎಕರೆಗೂ ಅಧಿಕ ಜಾಗದಲ್ಲಿ ಅಕ್ರಮವಾಗಿ ಮರ, ಗಿಡ ಕತ್ತರಿಸಿದ್ದರು. ಈ ಸಂಬಂಧ ಅತಿಕ್ರಮಣ ಪ್ರವೇಶ ಮಾಡದಂತೆ ಹಾಗೂ ಕತ್ತರಿಸಿರುವ ಮರಗಳಿಗೆ ಪರಿಹಾರ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿತ್ತು. ಹಾಗಿದ್ದರೂ ಪ್ರಭಾವ ಬಳಸಿ ಮತ್ತೆ ಪ್ರವೇಶಿಸಿದ್ದರು. ಅವರು ಅತಿಕ್ರಮಿಸಿದ್ದ ಪ್ರದೇಶವನ್ನು ಅರಣ್ಯ ಇಲಾಖೆಯು 2007ರಿಂದ ಐದು ಬಾರಿ ಕಾನೂನಿನ ಪ್ರಕಾರವೇ ತೆರವುಗೊಳಿಸಿದೆ. ಅಂಥ ಜಾಗದಲ್ಲಿ ನ್ಯಾಯಾಲಯ ಅದೇಶ ಧಿಕ್ಕರಿಸಿ, ಇಲಾಖೆಯ ಅಧಿಕಾರಿಗಳ ಮೇಲೆ ಹಲ್ಲೆ ಮಾಡುತ್ತಾರೆ. ಅರಣ್ಯ ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ. ಇವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಮತ್ತು ಅರಣ್ಯ ಇಲಾಖೆಗೆ ಆಗಿರುವ ನಷ್ಟವನ್ನ ಭರಿಸಲಾಗುವುದು’ ಎಂದು ಹೇಳಿದರು.

'ಒತ್ತುವರಿ ಜಮೀನಿನ ಬೆಳೆ ತೆಗೆಯುವವರೆಗೆ ಕೆಲವರು ಸಮಯಾವಕಾಶ ಕೇಳುತ್ತಿದ್ದಾರೆ. 30 ಎಕರೆ ಮಾವು ಹೊರತುಪಡಿಸಿದರೆ ಒತ್ತುವರಿ ಪ್ರದೇಶದಲ್ಲಿ ಅಂತಹ ಬೆಳೆ ಯಾವುದೂ ಇಲ್ಲ. ಈ ಹಿಂದಿನಿಂದಲೂ ಹಲವಾರು ಬಾರಿ ಇಲಾಖೆಯ ಕಾಯ್ದೆಗಳ ಕುರಿತು ಸೂಚನೆ ನೀಡಲಾಗಿತ್ತು. ಆದರೆ, ಒಂದು ಬೆಳೆ ಫಸಲು ಬಂದ ಬೆನ್ನ ಹಿಂದೆಯೇ ಮತ್ತೊಂದು ಬೆಳೆ ಹಾಕುತ್ತಿದ್ದರಿಂದ ಹಿಂದಿನ ಅಧಿಕಾರಿಗಳಿಗೆ ಒತ್ತುವರಿ ತೆರವಿಗೆ ಅಡ್ಡಿಯಾಗಿತ್ತು. ಈ ನಾಟಕ ಹಲವಾರು ವರ್ಷಗಳಿಂದ ಮುಂದುವರಿದಿದೆ. ಹೀಗಾಗಿ, ಈ ಬಾರಿ ಕಾರ್ಯಾಚರಣೆ ನಡೆಸುವುದು ಅನಿವಾರ್ಯವಾಗಿತ್ತು‌’ ಎಂದು ತಿಳಿಸಿದರು.

'ಸಾರ್ವಜನಿಕರ ಸಂಪತ್ತನ್ನು ಭವಿಷ್ಯದ ಪೀಳಿಗೆಗೆ ಉಳಿಸುವುದು ನಮ್ಮ ಮುಖ್ಯ ಉದ್ದೇಶ. ಇದರಲ್ಲಿ ನಮ್ಮ ವೈಯಕ್ತಿಕ ಆಸಕ್ತಿ ಯಾವುದೂ ಇಲ್ಲ. ನಮ್ಮ ಮೇಲೆ ಯಾರ ಒತ್ತಡವೂ ಇಲ್ಲ’ ಎಂದರು.

'ಅರಣ್ಯ ಭೂಮಿಯನ್ನು ಕೆಲವು ಪ್ರತಿಷ್ಠರಿಂದ ತೆರವು ಮಾಡಿದ್ದರಿಂದ ರೈತರು ಹರ್ಷಪಡಿಸಿ ಅರಣ್ಯ ಇಲಾಖೆಯನ್ನು ಅಭಿನಂದಿಸುತ್ತಿದ್ದಾರೆ. ಅರಣ್ಯ ಭೂಮಿಯನ್ನು ಅಕ್ರಮವಾಗಿ ಪಡೆದಿದ್ದ ಭೂ ಮಾಫಿಯಾವನ್ನು ತೆರವು ಮಾಡಿಸಬೇಕೆಂಬ ಒತ್ತಾಯವು ಇತ್ತು. ಆದರೆ, ತೆರವಿಗೆ ಹೋದರೆ ಕೆಲವು ರೈತರನ್ನು ಮುಂದೆ ಮಾಡಿ ತೆರವು ಮಾಡಿಸಲು ಅಡ್ಡಿಪಡಿಸುತ್ತಿದ್ದರು. ಇದು ನಿರಂತರವಾಗಿ ಮುಂದುವರಿದಿತ್ತು. ಇದಕ್ಕೆ ಅಂಕುಶ ಹಾಕಲು ಈ ಸಮಯವು ಸೂಕ್ತವೆಂದು ನಿರ್ಧರಿಸಿ ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೆತ್ತಿಕೊಂಡಿತು' ಎಂದು ತಿಳಿಸಿದರು.

ಬಂಗಾರಪೇಟೆ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಕೋಲಾರ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಮಂತ್, ಶ್ರೀನಿವಾಸಪುರ ರೇಂಜ್‌ ಅರಣ್ಯಾಧಿಕಾರಿ ಕೆ.ಮಹೇಶ್ ಇದ್ದರು.

Highlights - ಒತ್ತುವರಿ ತೆರವು ಕಾರ್ಯಾಚರಣೆ ವೆಚ್ಚ ಒತ್ತುವರಿದಾರರ ಮೇಲೆ–ಡಿಸಿಎಫ್‌ ಒಂದು ಇಂಚು ಅರಣ್ಯ ಜಮೀನು ಒತ್ತುವರಿ ಆಗಿದ್ದರೂ ಬಿಡಲ್ಲ ಯಾರೇ ಪ್ರಭಾವಿ ಇದ್ದರೂ ಬಿಡಲ್ಲ; ಕಾನೂನು ಪ್ರಕಾರವೇ ಕ್ರಮ

Quote - ಮೀಸಲು ಅರಣ್ಯ ಎಂದಾದ ಮೇಲೆ ಯಾವುದೇ ಕಂದಾಯ ದಾಖಲೆ ಸೃಷ್ಟಿಸಿದರೂ ಪ್ರಯೋಜನವಿಲ್ಲ. ಒತ್ತುವರಿ ಮಾಡಿಕೊಂಡರೂ ಅದು ನಿಲ್ಲಲ್ಲ. ಈ ಸಂಬಂಧ‌ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ ವಿ.ಏಡುಕೊಂಡಲು ಉಪ ಅರಣ್ಯ ಸಂರಕ್ಷಣಾಧಿಕಾರಿ ಕೋಲಾರ ಜಿಲ್ಲೆ

Cut-off box - ಒತ್ತುವರಿದಾರರಿಗೆ ಎಚ್ಚರಿಕೆ ‘ಜಿಲ್ಲೆಯಲ್ಲಿ ಸುಮಾರು 4500 ಎಕರೆ ಅರಣ್ಯ ಇಲಾಖೆ ಜಮೀನು ಒತ್ತುವರಿ ಆಗಿದೆ. ಯಾವುದೇ ಪ್ರಭಾವಿ ವ್ಯಕ್ತಿ ಒತ್ತುವರಿ ಮಾಡಿಕೊಂಡಿದ್ದರೂ ಬಿಡುವುದಿಲ್ಲ. ನಾನು ಯಾರ ಹೆಸರು ತೆಗೆಯಲ್ಲ. ಒಂದು ತಿಂಗಳು ಒಂದು‌ ವರ್ಷ ಎರಡು ವರ್ಷ ತಡವಾಗಬಹುದು. ಆದರೆ ಒತ್ತುವರಿ ತೆರವು ಕಾರ್ಯಾಚರಣೆಯಿಂದ ತಪ್ಪಿಸಿಕೊಳ್ಳಲು ಕಾನೂನು ಪ್ರಕ್ರಿಯಿಯಿಂದ ನುಸುಳಿಕೊಳ್ಳಲು ಸಾಧ್ಯವೇ ಇಲ್ಲ. ನಾನು ವರ್ಗಾವಣೆ ಆದರೂ ಮತ್ತೊಬ್ಬರು ಬಂದು ತೆರವು ಮಾಡಿಯೇ ತೀರುತ್ತಾರೆ’ ಎಂದು ಒತ್ತುವರಿದಾರರಿಗೆ ಏಡುಕೊಂಡಲು ಖಡಕ್‌ ಎಚ್ಚರಿಕೆ ನೀಡಿದರು. 'ಇದು ಪ್ರಾರಂಭ ಅಷ್ಟೇ; ಇತರೆ ತಾಲ್ಲೂಕುಗಳಲ್ಲೂ ಒತ್ತುವರಿ ಆಗಿದೆ. ಎಲ್ಲವನ್ನೂ ಹಂತ ಹಂತವಾಗಿ ಕೈಗೆತ್ತಿ ಕೊಳ್ಳಲಾಗುವುದು ತೇರಹಳ್ಳಿ ಬೆಟ್ಟ ಸೇರಿದಂತೆ ವಿವಿಧಡೆ ಒತ್ತುವರಿ ಮಾಡಿರುವುದನ್ನು ತೆರವು ಮಾಡಲಾಗುವುದು’ ಎಂದರು.

Cut-off box - 1035 ಎಕರೆ ಒತ್ತುವರಿ ತೆರವು ‘ಶ್ರೀನಿವಾಸಪುರ ತಾಲ್ಲೂಕಿನಲ್ಲಿ 15 ದಿನಗಳಿಂದ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಗೆ ಸೇರಿದ 1035 ಎಕರೆ ಭೂಮಿಯನ್ನು ಒತ್ತುವರಿ ತೆರವು ಮಾಡಲಾಗಿದೆ’ ಎಂದು ಏಡುಕೊಂಡಲು ಮಾಹಿತಿ ನೀಡಿದರು.

Cut-off box - ‘ಮಾವಿನ ಗಿಡ ಕತ್ತರಿಸದಿದ್ದರೆ ಮತ್ತೆ ಹಕ್ಕು ಸ್ಥಾಪಿಸುತ್ತಾರೆ’ ಮರ ರಕ್ಷಣೆ ಮಾಡಬೇಕಾದ ಅರಣ್ಯ ಇಲಾಖೆಯೇ ಮಾವಿನ ಗಿಡ ಕತ್ತರಿಸುತ್ತಿದೆಯಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಏಡುಕೊಂಡಲು ‘ಮಾವಿನ ಗಿಡ ತೆರವುಗೊಳಿಸದಿದ್ದರೆ ಕೆಲ ವರ್ಷಗಳ ಬಳಿಕ ಮತ್ತೆ ಅದರ ಮೇಲೆ ಹಕ್ಕು ಸ್ಥಾಪಿಸಲು ಬರುತ್ತಾರೆ. ಸರ್ಕಾರಕ್ಕೆ ಬೇರೆ ಕೆಲಸ ಇಲ್ಲವೇ. ಮಾವು ವಾಣಿಜ್ಯ ಬೆಳೆ. ಇದರಿಂದ ಅರಣ್ಯ ಇಲಾಖೆಗೆ ಯಾವುದೇ ಪ್ರಯೋಜನ ಇಲ್ಲ. ಹೀಗಾಗಿ ತೆರವುಗೊಳಿಸಲಾಗುತ್ತಿದೆ’ ಎಂದು ಸ್ಪಷ್ಟಪಡಿಸಿದರು. ‘ಮರ ಕತ್ತರಿಸಿ ಮತ್ತೆ ಸಮೃದ್ಧ ಅರಣ್ಯ ಬೆಳೆಸುತ್ತೇವೆ. ವಿವಿಧ ಪ್ರಭೇದದ ಗಿಡ ನೆಡುತ್ತಿದ್ದೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.