ಕೋಲಾರ: ಇಲ್ಲಿನ ಎಸ್‌ಎನ್‌ಆರ್ ಜಿಲ್ಲಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ವೈದ್ಯಕೀಯ ಆಮ್ಲಜನಕ ನಿರ್ವಹಣೆಯಲ್ಲಿ ಉಂಟಾದ ಲೋಪದಿಂದ 5 ಮಂದಿ ಕೊರೊನಾ ಸೋಂಕಿತರು ಮೃತಪಟ್ಟ ಪ್ರಕರಣ ಸಂಬಂಧ ಜಿಲ್ಲಾ ಶಸ್ತ್ರಚಿಕಿತ್ಸಕ ಸೇರಿದಂತೆ ಇಬ್ಬರು ಅಧಿಕಾರಿಗಳ ತಲೆದಂಡವಾಗಿದೆ.
ಸೋಂಕಿತರ ಸಾವಿನ ಬೆನ್ನಲ್ಲೇ ಸೋಮವಾರ ರಾತ್ರಿ ಆಸ್ಪತ್ರೆಗೆ ದೌಡಾಯಿಸಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಜಿ.ನಾರಾಯಣಸ್ವಾಮಿ ಮತ್ತು ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ (ಆರ್‌ಎಂಒ) ಡಾ.ನಾರಾಯಣಸ್ವಾಮಿ ಅವರ ಅಮಾನತಿಗೆ ಆದೇಶಿಸಿದರು. ಜತೆಗೆ ಅವರ ವಿರುದ್ಧ ಇಲಾಖಾ ತನಿಖೆಗೆ ಸೂಚನೆ ನೀಡಿದರು.
ಪ್ರಕರಣ ಸಂಬಂಧ ಅಹೋರಾತ್ರಿ ವೈದ್ಯಕೀಯ ಸಿಬ್ಬಂದಿಯ ಸಭೆ ನಡೆಸಿದ ಸಚಿವರು, ‘ಬೆಂಗಳೂರಿನಲ್ಲಿ ಸದ್ಯ ಕನಿಷ್ಠ ಒಂದು ವೆಂಟಿಲೇಟರ್ ಪಡೆಯಲು ಹರಸಾಹಸ ಪಡೆಯಬೇಕಿದೆ. ಆದರೆ, ಎಸ್‌ಎನ್‌ಆರ್ ಆಸ್ಪತ್ರೆಗೆ ಪೂರೈಕೆಯಾಗಿರುವ 40 ವೆಂಟಿಲೇಟರ್‌ಗಳಲ್ಲಿ ಒಂದನ್ನೂ ಬಳಕೆ ಮಾಡುತ್ತಿಲ್ಲ. ಇದು ದೊಡ್ಡ ಲೋಪ’ ಎಂದು ಕೆಂಡಾಮಂಡಲರಾದರು.
‘ಜಿಲ್ಲಾ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿಕೆಯಲ್ಲಿ ಕೆಲ ಲೋಪಗಳಾಗಿವೆ. ಸೋಂಕಿತರ ಆರೈಕೆಗಾಗಿ ಅವರ ಕುಟುಂಬ ಸದಸ್ಯರಿಗೆ ಐಸಿಯುನಲ್ಲಿ ಇರಲು ಅವಕಾಶ ನೀಡಿರುವುದು ತಪ್ಪು. ಈ ರೀತಿಯ ವ್ಯವಸ್ಥೆಯನ್ನು ಯಾವುದೇ ಆಸ್ಪತ್ರೆಯಲ್ಲಿ ನೋಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಿಕ್ಷೆ ಆಗಲೇಬೇಕು: ‘ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ಸ್ಥಾನಿಕ ವೈದ್ಯಾಧಿಕಾರಿಯು ನಿವೃತ್ತಿ ಅಂಚಿನಲ್ಲಿದ್ದೇವೆ ಎಂದು ಕರ್ತವ್ಯ ನಿರ್ಲಕ್ಷ್ಯ ತೋರಿದ್ದಾರೆ. ಅವರ ಕಾರ್ಯವೈಖರಿ ಸರಿಯಿಲ್ಲ. ಅವರಿಗೆ ಶಿಕ್ಷೆ ಆಗಲೇಬೇಕು. ಎಲೆಕ್ಟ್ರಿಷಿಯನ್ ಕಡೆಯಿಂದ ಆಸ್ಪತ್ರೆಯ ಆಮ್ಲಜನಕ ವ್ಯವಸ್ಥೆ ನಿರ್ವಹಣೆ ಮಾಡಿಸಿದ್ದರೆ ತಪ್ಪು. ಆ ಬಗ್ಗೆ ಪ್ರತ್ಯೇಕ ತನಿಖೆ ಮಾಡಿಸುತ್ತೇವೆ’ ಎಂದು ಹೇಳಿದರು.
‘ಆಸ್ಪತ್ರೆಗೆ ವೈದ್ಯಕೀಯ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವಾಗಿಲ್ಲ. ಸೋಂಕಿತರು ದೇಹಸ್ಥಿತಿ ಗಂಭೀರವಾಗಿ ಕಡೆ ಅವಧಿಯಲ್ಲಿ ಆಸ್ಪತ್ರೆಗೆ ಬಂದ ಕಾರಣ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಪ್ರತಿ ಸೋಂಕಿತರ ಸಾವಿನ ವರದಿ ತರಿಸಿಕೊಂಡು ಪರಿಶೀಲನೆ ಮಾಡುತ್ತೇನೆ. ಜಿಲ್ಲೆಯ ಕೋವಿಡ್ ಪರಿಸ್ಥಿತಿ ಬಗ್ಗೆ ಪ್ರತಿನಿತ್ಯ ನಾನೇ ನಿಗಾ ವಹಿಸುತ್ತೇನೆ’ ಎಂದರು.
ಸಚಿವರ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಮಂಗಳವಾರ ಜಿಲ್ಲೆಗೆ ಭೇಟಿ ಕೊಟ್ಟು ಕೋವಿಡ್ ಸಂಬಂಧ ಅಧಿಕಾರಿಗಳೊಂದಿಗೆ ಸರಣಿ ಸಭೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.