ADVERTISEMENT

ನಗರಸಭೆ ವಿರುದ್ಧ ಅಪಪ್ರಚಾರ: ಶಾಸಕಿ ರೂಪಕಲಾ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 15:22 IST
Last Updated 21 ನವೆಂಬರ್ 2024, 15:22 IST
ಕೆಜಿಎಫ್‌  ರಾಬರ್ಟಸನ್‌ಪೇಟೆ ಎಂ.ಜಿ.ಮಾರುಕಟ್ಟೆಯಲ್ಲಿ ಎರಡು ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಗುರುವಾರ ಶಾಸಕಿ ಎಂ.ರೂಪಕಲಾ ಚಾಲನೆ ನೀಡಿದರು. ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ, ಆಯುಕ್ತ ಪವನ್‌ಕುಮಾರ್‌ ಇದ್ದಾರೆ
ಕೆಜಿಎಫ್‌  ರಾಬರ್ಟಸನ್‌ಪೇಟೆ ಎಂ.ಜಿ.ಮಾರುಕಟ್ಟೆಯಲ್ಲಿ ಎರಡು ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಗುರುವಾರ ಶಾಸಕಿ ಎಂ.ರೂಪಕಲಾ ಚಾಲನೆ ನೀಡಿದರು. ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ, ಆಯುಕ್ತ ಪವನ್‌ಕುಮಾರ್‌ ಇದ್ದಾರೆ   

ಕೆಜಿಎಫ್‌: ರಾಬರ್ಟಸನ್‌ಪೇಟೆಯ ಎಂ.ಜಿ.ಮಾರುಕಟ್ಟೆ ವರ್ತಕರಿಂದ ಯಾವ ಅಧಿಕಾರಿಯೂ ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ. ಆದರೂ ಕೆಲವು ವರ್ತಕರು ನಗರಸಭೆ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಶಾಸಕಿ ಎಂ.ರೂಪಕಲಾ ಅಸಮಾಧಾನ ವ್ಯಕ್ತಪಡಿಸಿದರು.

ರಾಬರ್ಟಸನ್‌ಪೇಟೆ ಎಂ.ಜಿ.ಮಾರುಕಟ್ಟೆ ಬಳಿ ಎರಡು ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಮಾರುಕಟ್ಟೆ ಅಭಿವೃದ್ಧಿಗೆ ಪ್ರಯತ್ನ ಮಾಡಲಾಗುತ್ತಿದೆ. ಆದರೆ, ಅಂಗಡಿಗಳನ್ನು ವ್ಯಾಪಾರಕ್ಕೆ ಇಟ್ಟಿಲ್ಲ. ನಗರಸಭೆ ಅಧ್ಯಕ್ಷರಾಗಲಿ, ಆಯುಕ್ತರಾಗಲಿ ದಲ್ಲಾಳಿ ಕೆಲಸ ಮಾಡುತ್ತಿಲ್ಲ. ವರ್ತಕರಿಂದ ಒಂದು ಲಕ್ಷ, ಎರಡು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಮಾರುಕಟ್ಟೆ ವರ್ತಕರು ಕಷ್ಟಜೀವಿಗಳು. ವರ್ತಕರನ್ನು ಪ್ರತಿ ಹಂತದಲ್ಲಿ ರಕ್ಷಿಸಿಕೊಂಡು ಬರಲಾಗುತ್ತಿದೆ. ಆದರೆ ನಗರಸಭೆ ಬಗ್ಗೆ ಇದೇ ರೀತಿ ಅಪಪ್ರಚಾರ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಗರಸಭೆ ಸದಸ್ಯ ರಮೇಶ್‌ ಕುಮಾರ್‌ ಮಾತನಾಡಿ, ಕೂಡಲೇ ಕಾಮಗಾರಿಯನ್ನು ಆರಂಭಿಸಲಾಗುವುದು. ನಲವತ್ತೈದು ದಿನಗಳಲ್ಲಿ ಕಾಮಗಾರಿ ಮುಗಿಯಲಿದೆ. ಯಾರಾದರೂ ವರ್ತಕರು ಒತ್ತುವರಿ ಮಾಡಿಕೊಂಡಿದ್ದಲ್ಲಿ ಕೂಡಲೇ ಒತ್ತುವರಿ ತೆರವು ಮಾಡಬೇಕು. ಕಾಮಗಾರಿ ನಡೆಸಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ADVERTISEMENT

ಹಿಂದೆ ಆಡಳಿತಾಧಿಕಾರಿಗಳ ಅವಧಿಯಲ್ಲಿ ಶಿಥಿಲವಾಗಿರುವ ಅಂಗಡಿಗಳನ್ನು ನವೀಕರಣ ಮಾಡಲು ಒಪ್ಪಿಗೆ ನೀಡಲಾಗಿತ್ತು. ದುರಸ್ತಿ ಮಾಡುವಾಗ ಯಾವುದೇ ಶುಲ್ಕವನ್ನು ನಗರಸಭೆ ಪಡೆದುಕೊಳ್ಳುವುದಿಲ್ಲ. ಅನುಮತಿ ಪಡೆದ ಮೂವತ್ತು ದಿನಗಳೊಳಗೆ ಕಾಮಗಾರಿ ಮುಗಿಸಬೇಕು. ಅಂಗಡಿಗಳ ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ ನವೀಕರಣ ಮಾಡಬೇಕು. ಯಾವುದೇ ರೀತಿಯ ಒತ್ತುವರಿಯನ್ನು ಮಾಡಬಾರದು ಎಂದು ಆಯುಕ್ತ ಪವನ್‌ಕುಮಾರ್‌ ಹೇಳಿದರು.

ಸೆಕೆಂಡ್‌ ಮಾರುಕಟ್ಟೆಯಲ್ಲಿ ರಸ್ತೆ ಸಮಸ್ಯೆ ಇದೆ. ಅಂಗಡಿಗಳ ಬಾಡಿಗೆಗೆ ದಂಡ ವಿಧಿಸುವ ಪ್ರಕ್ರಿಯೆಯನ್ನು ಕೈಬಿಡಬೇಕು ಎಂದು ವರ್ತಕರು ಮನವಿ ಮಾಡಿದರು.

ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ, ನಗರಸಭೆ ಸದಸ್ಯರು ಹಾಗೂ ಕಾಂಗ್ರೆಸ್‌ ಮುಖಂಡರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.