ADVERTISEMENT

ಬಕ್ರೀದ್‌: ಟಗರು, ಕುರಿ ವ್ಯಾಪಾರ ಜೋರು

​ಪ್ರಜಾವಾಣಿ ವಾರ್ತೆ
Published 15 ಜೂನ್ 2024, 6:44 IST
Last Updated 15 ಜೂನ್ 2024, 6:44 IST
ಬಂಗಾರಪೇಟೆ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಶುಕ್ರವಾರ ಕುರಿಸಂತೆ ನಡೆಯಿತು
ಬಂಗಾರಪೇಟೆ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಶುಕ್ರವಾರ ಕುರಿಸಂತೆ ನಡೆಯಿತು   

ಬಂಗಾರಪೇಟೆ: ಬಕ್ರೀದ್‌ ಹಬ್ಬಕ್ಕೆ ದಿನಗಣನೆ ಶುರುವಾಗಿದ್ದು, ಬಂಗಾರಪೇಟೆ ಸಂತೆಯಲ್ಲಿ ಟಗರು ಹಾಗೂ ಕುರಿಗಳ ವ್ಯಾಪಾರ ಶುಕ್ರವಾರ ಜೋರಾಗಿತ್ತು.

ಪಟ್ಟಣದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಶುಕ್ರವಾರ ಸಂತೆ ಜರುಗಿತು. ಕಳೆದ ವಾರಕ್ಕಿಂತ ಈ ಬಾರಿ, ಕುರಿ, ಟಗರು ಹಾಗೂ ಮೇಕೆಗಳ ಸಂಖ್ಯೆ ಹೆಚ್ಚಿತ್ತು. ಮಾರಾಟಗಾರರು ಹಾಗೂ ಖರೀದಿದಾರರು ಎಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.

ಜೂನ್ 18ರಂದು ಬಕ್ರೀದ್ ಹಬ್ಬವಿದ್ದು, ಹಬ್ಬಕ್ಕೆ ಅಗತ್ಯವಿರುವ ಟಗರು-ಕುರಿಗಳನ್ನು ಖರೀದಿಸಲು ಮುಸ್ಲಿಂ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಬಂದಿದ್ದರು. ಕುರಿಗಾರರು ಹಾಗೂ ವ್ಯಾಪಾರಿಗಳ ಜೊತೆ ಮಾತುಕತೆ ನಡೆಸಿ, ತಮ್ಮಿಷ್ಟದ ಕುರಿ– ಟಗರು ಖರೀದಿಸಿ ವಾಹನಗಳಲ್ಲಿ ಕೊಂಡೊಯ್ದರು.

ADVERTISEMENT

ಆರು ತಿಂಗಳ ಮರಿಯಿಂದ ಹಿಡಿದು ಎರಡು-ಮೂರು ವರ್ಷಗಳ ಕುರಿಗಳು ಹಾಗೂ ಟಗರುಗಳು ಸಂತೆಯಲ್ಲಿದ್ದವು. ಕನಿಷ್ಠ ₹ 5 ಸಾವಿರದಿಂದ ಗರಿಷ್ಠ ₹ 70 ಸಾವಿರವರೆಗೂ ಬೆಲೆ ನಿಗದಿಪಡಿಸಲಾಗಿತ್ತು. ಖರೀದಿದಾರರು, ಚೌಕಾಶಿ ವ್ಯಾಪಾರ ಮಾಡುತ್ತಿದ್ದ ದೃಶ್ಯಗಳು ಕಂಡುಬಂದವು.

ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ಇತರೆ ಜಿಲ್ಲೆಗಳಿಂದ ಗ್ರಾಹಕರು ಮಾರುಕಟ್ಟೆಗೆ ಬಂದಿದ್ದರು. ತಮಿಳುನಾಡು, ಆಂಧ್ರಪ್ರದೇಶದ ಗ್ರಾಹಕರೂ ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಬೂದಿಕೋಟೆ ಹೋಬಳಿಯ ಗುಲ್ಲಹಳ್ಳಿ ಗ್ರಾಮ ಸಿದ್ದಪ್ಪ ಎಂಬುವವರು ತಮ್ಮ ಟಗರನ್ನು ₹ 70 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಿದರು. ಸಣ್ಣ ಮರಿ ತಂದು ಸಾಕಿದ್ದೆವು. ಈಗ, ಮಾರುಕಟ್ಟೆಗೆ ತಂದು ಮಾರಿದ್ದೇವೆ. ವಾಹನದಿಂದ ಇಳಿಸುತ್ತಿದ್ದಂತೆ ಟಗರು ಖರೀದಿಸಲು ಗ್ರಾಹಕರು ಮುಗಿಬಿದ್ದರು. ಎರಡು ವರ್ಷದ ಟಗರು, ಸುಮಾರು 60 ಕೆ.ಜಿ. ತೂಕವಿತ್ತು' ಎಂದು ಅವರು ತಿಳಿಸಿದರು.

ಈ ಬಾರಿ ಕುರಿ, ಟಗರು ಹಾಗೂ ಮೇಕೆಗಳ ಸಂಖ್ಯೆ ಹೆಚ್ಚಿತ್ತು. ಅಂದುಕೊಂಡಷ್ಟು ಬೆಲೆ ಸಿಗಲಿಲ್ಲವೆಂದು ಕುರಿಗಾರರು ಬೇಸರ ವ್ಯಕ್ತಪಡಿಸಿದರು.

ಬಂಗಾರಪೇಟೆ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಶುಕ್ರವಾರ ನಡೆದ ಟಗರು–ಕುರಿ ಸಂತೆ
ಬಕ್ರೀದ್ ಹಬ್ಬಕ್ಕೆ ಕುರಿ ಟಗರಿಗೆ ಬೇಡಿಕೆ ಹೆಚ್ಚು. ಪ್ರತಿ ವರ್ಷವೂ ಬಂಗಾರಪೇಟೆ ಮಾರುಕಟ್ಟೆಗೆ ಬಂದು ಖರೀದಿಸಿಕೊಂಡು ಹೋಗುತ್ತಿದ್ದೇವೆ. ಇಲ್ಲಿ ದರವೂ ಕಡಿಮೆ
-ರಾಮಾಸ್ವಾಮಿ ಕೃಷ್ಣಗಿರಿ ತಮಿಳುನಾಡು
ವರ್ಷಗಟ್ಟಲೇ ಕುರಿ ಸಾಕಿದ್ದೇವೆ. ಇದೀಗ 20 ಕುರಿಗಳನ್ನು ತಂದಿದ್ದೇವೆ. ಒಂದು ಕುರಿಗೆ ₹ 20 ಸಾವಿರದಿಂದ ₹25 ಸಾವಿರ ಹೇಳುತ್ತಿದ್ದೇವೆ. ಆದರೆ ಗ್ರಾಹಕರು ಕಡಿಮೆ ಬೆಲೆ ಕೇಳುತ್ತಿದ್ದಾರೆ. ನಮ್ಮ ಬೆಲೆ ಸಿಕ್ಕರೆ ಮಾತ್ರ ಕೊಡುತ್ತೇವೆ.
ಇಸ್ಮಾಯಿಲ್ ವಡ್ಡಹಳ್ಳಿ ಕುರಿಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.