ಕೋಲಾರ: ಕಡೆ ಕಾರ್ತಿಕ ಸೋಮವಾರದ ಪ್ರಯುಕ್ತ ಜಿಲ್ಲೆಯ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ವಿಶೇಷ ಹೂವಿನ ಅಲಂಕಾರ ನಡೆಯಿತು. ಸಾವಿರಾರು ಭಕ್ತರು ದೇವಾಲಯಗಳಿಗೆ ತೆರಳಿ ದರ್ಶನ ಪಡೆದರು.
ನಗರ ಹೊರವಲಯದಲ್ಲಿರುವ ದಕ್ಷಿಣ ಕಾಶಿ ಖ್ಯಾತಿಯ ಅಂತರಗಂಗೆ ವಿಶ್ವೇಶ್ವರಸ್ವಾಮಿ ಸನ್ನಿಧಿಯಲ್ಲಿ ಭಕ್ತ ಸಾಗರವೇ ಸೇರಿತ್ತು. ಕಡೆ ಕಾರ್ತಿಕ ಸೋಮವಾರ ಅಂಗವಾಗಿ ವಿಶೇಷ ಪೂಜೆ ನಡೆಯಿತು. ಜಿಲ್ಲೆ, ರಾಜ್ಯ, ಹೊರರಾಜ್ಯಗಳಿಂದ ಬೃಹತ್ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕಲ್ಲಿನ ಬಸವನ ಬಾಯಿಂದ ಬರುವ ಪವಿತ್ರ ಜಲ ಪ್ರೋಕ್ಷಣೆ ಮಾಡಿಕೊಂಡರು. ಸ್ವಾಮಿಯ ದರ್ಶನಕ್ಕೆ ಮಾರುದ್ದದ ಸರತಿ ಸಾಲು ನಿರ್ಮಾಣವಾಗಿತ್ತು.
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಬಜರಂಗದಳ ಕಾರ್ಯಕರ್ತರು ನಸುಕಿನಿಂದಲೇ ಉಚಿತ ಸಾರಿಗೆ ವ್ಯವಸ್ಥೆ ಮಾಡಿದ್ದರು.
ಬಸ್ ನಿಲ್ದಾಣ ವೃತ್ತದಲ್ಲಿ ಭಕ್ತಾಧಿಗಳಿಗೆ ಸುಸ್ವಾಗತ ಕೋರುವ ಬೃಹತ್ ಕಮಾನುಗಳೊಂದಿಗೆ ಇಡೀ ಪ್ರದೇಶ ಕೇಸರಿಮಯವಾಗಿತ್ತು.
ಬೆಟ್ಟದ ತಪ್ಪಲಿನ ಜಲಕಂಠೇಶ್ವರ ಸನ್ನಿಧಿಯಲ್ಲಿ ಬಜರಂಗದಳ, ವಿಶ್ವ ಹಿಂದೂ ಪರಿಷತ್, ಗೋಕುಲ ಮಿತ್ರಬಳಗ ಸೇರಿದಂತೆ ವಿವಿಧ ಸಂಘಟನೆಗಳಿಂದ ಅನ್ನದಾನ ಮತ್ತು ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.
ಅಂತರಗಂಗೆಯಲ್ಲಿ ಕಾರ್ತಿಕ ಮಾಸದಲ್ಲಿ ಪ್ರತಿ ಸೋಮವಾರ ವಿಶೇಷ ಪೂಜೆ, ಅಭಿಷೇಕ ನಡೆಯುತ್ತದೆ. ಕೊನೆಯ ಸೋಮವಾರದಂದು ಜಾತ್ರೆ ಸ್ವರೂಪ ನಿರ್ಮಾಣವಾಗುತ್ತದೆ. ಬೆಳಿಗ್ಗೆ 4 ಗಂಟೆಗೆ ದೇಗುಲದ ಬಾಗಿಲು ತೆರೆದು ಪೂಜಾ ಕೈಂಕರ್ಯ ಹಮ್ಮಿಕೊಳ್ಳಲಾಗುತ್ತದೆ.
ಪ್ರಧಾನ ಅರ್ಚಕ ಮಂಜುನಾಥ ದೀಕ್ಷಿತ್ ನೇತೃತ್ವದಲ್ಲಿ ಪಂಚಾಮೃತ ಅಭಿಷೇಕ ನಡೆಯಿತು. ಶಿವಲಿಂಗ ದರ್ಶನಕ್ಕೆ ಸುಗಮ ವ್ಯವಸ್ಥೆ ಮಾಡಿಕೊಡಲು ಹಲವು ಸ್ವಯಂ ಸೇವಕರು ಕಾರ್ಯನಿರ್ವಹಿಸಿದರು.
ಸಿದ್ಧತಾ ಕಾರ್ಯದಲ್ಲಿ ಬಜರಂಗದಳ ಮುಖಂಡರಾದ ಬಾಲಾಜಿ, ಬಾಬು ಅಪ್ಪಿ, ವಿಶ್ವನಾಥ್, ವಿಶ್ವ ಹಿಂದೂ ಪರಿಷತ್‌ನ ಶಿವಣ್ಣ ತೊಡಗಿದ್ದರು.
ಕೆಯುಡಿಎ ಮಾಜಿ ಅಧ್ಯಕ್ಷ ವಿಜಯಕುಮಾರ್, ಶಬರೀಷ್, ವಿಶ್ವನಾಥ್, ಮಂಜು, ದೀಪು, ಸಾಯಿಸುಮನ್, ಸಾಯಿ ಮೌಳಿ, ರಾಜೇಶ್,ಭವಾನಿ, ಯಶ್, ವಿಶಾಖ, ಕೊಂಡೇ, ಮಹೇಶ್, ಸಾಯಿಕುಮಾರ್, ಪ್ರವೀಣ್, ಪ್ರಸನ್ನ, ಗೌತಮ್, ಹರೀಶ್, ಗಿರಿ, ಕಿರಣ್, ಸೋಮಶೇಖರ್, ಆನಂದ್, ಅರ್ಜುನ್, ಸುಧಾಕರ್, ವೆಂಕಿ, ಮೋಹನ್, ನಿತಿನ್, ಜೀವನ್ ರಾಜ್, ಗೌತಮ್, ಮುರಳಿ, ದರ್ಶನ್, ಜಗದೀಶ್, ವಿನಯ್,ಲೋಹಿತ್, ನಾಮಾಲ ಮಂಜು, ಸಂಪತ್ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದರು.
ನಗರದ ಸೋಮೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ನಡೆಯಿತು. ತಂಬಿಹಳ್ಳಿ ಗ್ರಾಮದ ಮಂಜುನಾಥೇಶ್ವರ ಸ್ವಾಮಿಗೆ ಕಡೆ ಕಾರ್ತೀಕ ಸೋಮವಾರದ ವಿಶೇಷ ಅಲಂಕಾರ ಮಾಡಲಾಗಿತ್ತು.
ಮಾರ್ಕಡೇಶ್ವರ ಬೆಟ್ಟದಲ್ಲಿ ಪೂಜೆ
ತಾಲ್ಲೂಕಿನ ವಕ್ಕಲೇರಿ ಮಾರ್ಕಂಡೇಶ್ವರಸ್ವಾಮಿ ಬೆಟ್ಟದ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು. ವಿವಿಧ ಭಾಗಗಳಿಂದ ಭಕ್ತಾಧಿಗಳು ಬಂದು ದರ್ಶನ ಪಡೆದರು. ಕಾರ್ತಿಕ ಮಾಸದ ಪ್ರಯುಕ್ತ ಮಂಗಳವಾರ ಬೆಟ್ಟದಲ್ಲಿ ಲಕ್ಷ ದೀಪೋತ್ಸವ ಮತ್ತು ವಿದ್ಯುತ್ ದೀಪಾಲಂಕಾರ ಪೂಜಾ ಕೈಂಕರ್ಯಗಳು ಮತ್ತು ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿದೆ.
ಓಂಕಾರೇಶ್ವರ ದೇಗುಲದಲ್ಲಿ ಪೂಜೆ
ಮಾಲೂರು ತಾಲ್ಲೂಕಿನ ಚಿಕ್ಕತಿರುಪತಿಯ ಓಂಕಾರೇಶ್ವರ ದೇಗುಲದಲ್ಲಿ ಕಡೆ ಕಾರ್ತಿಕ ಸೋಮವಾರ ಪ್ರಯುಕ್ತ ವಿಶೇಷ ಪೂಜೆ ನಡೆಯಿತು. ಓಂಕಾರೇಶ್ವರ ಸ್ವಾಮಿ ಬಲಮುರಿ ಗಣಪತಿ ಆದಿನಾರಾಯಣ ಸ್ವಾಮಿಯ ವಿಗ್ರಹಕ್ಕೆ ಪ್ರಧಾನ ಅರ್ಚಕ ಶ್ರೀಹರಿ ನೇತೃತ್ವದಲ್ಲಿ ಅಭಿಷೇಕ ನಡೆಯಿತು. ಸಂಜೆ ದೀಪೋತ್ಸವಕ್ಕೆ ಭಕ್ತರ ಸಾಗರವೇ ಹರಿದು ಬಂತು. ಭಕ್ತರು ದೀಪ ಬೆಳಗಿದರು. ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಗ್ರಾಮಸ್ಥರು ಅಕ್ಕ ಪಕ್ಕದ ಊರಿನ ಭಕ್ತರು ಬೆಳಿಗ್ಗೆ 6 ಗಂಟೆಗೇ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಸೋಮೇಶ್ವರ ಸ್ವಾಮಿಗೆ ಪೂಜೆ
ಕೋಲಾರ ನಗರದ ಇತಿಹಾಸ ಪ್ರಸಿದ್ಧ ಸೋಮೇಶ್ವರಸ್ವಾಮಿ ದೇವಾಲಯದಲ್ಲಿ ಕಡೆ ಕಾರ್ತಿಕ ಸೋಮವಾರದ ಅಂಗವಾಗಿ ವಿಶೇಷ ಪೂಜೆ ನಡೆಯಿತು. ವಿಶೇ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆ ಪಂಜಾಮೃತ ಅಭಿಷೇಕ ವಿವಿಧ ಹಣ್ಣುಗಳ ಅಲಂಕಾರ ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದರ್ಶನ ಪಡೆದರು. ದೇವಾಲಯದ ಆವರಣದಲ್ಲಿನ ನಂದಿಯ ಮುಂದೆ ಮಹಿಳೆಯರು ನಿಂಬೆ ಹಣ್ಣಿನ ದೀಪ ಬೆಳಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.