ADVERTISEMENT

ಅನಾಥ ಮಕ್ಕಳ ನೇರ ದತ್ತು ನಿಷೇಧ: ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 16:29 IST
Last Updated 24 ಜುಲೈ 2021, 16:29 IST

ಕೋಲಾರ: ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳನ್ನು ನಿಗದಿತ ಕಾರ್ಯ ವಿಧಾನ ಉಲ್ಲಂಘಿಸಿ ನೇರವಾಗಿ ದತ್ತು ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಗುವನ್ನು ನೇರವಾಗಿ ದತ್ತು ತೆಗೆದುಕೊಳ್ಳುವುದು ಬಾಲನ್ಯಾಯ ಕಾಯ್ದೆ 2015ರ ಸೆಕ್ಷನ್ 80ರ ಅಡಿ ಅಪರಾಧವಾಗಿದೆ. ಈ ಅಪರಾಧಕ್ಕೆ 3 ವರ್ಷದವರೆಗೆ ಕಾರಾಗೃಹ ಶಿಕ್ಷೆ ಅಥವಾ ₹ 1 ಲಕ್ಷ ಡಂಡ, ದಂಡದ ಜತೆಗೆ ಜೈಲು ಶಿಕ್ಷೆ ಸಹ ವಿಧಿಸಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕೋವಿಡ್‌ನಿಂದ ಅನಾಥವಾದ ಮಕ್ಕಳನ್ನು ನೇರವಾಗಿ ದತ್ತು ಪಡೆಯಬಹುದೆಂದು ಸಾಮಾಜಿಕ ಜಾಲತಾಣ ಅಥವಾ ಮಾಧ್ಯಮಗಳ ಮೂಲಕ ಸಂದೇಶ ಬಂದರೆ ಅದು ಸುಳ್ಳು ಸುದ್ದಿಯಾಗಿರುತ್ತದೆ. ಅಂತಹ ಸುದ್ದಿ ಬಂದ ತಕ್ಷಣ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು ಅಥವಾ ಮಕ್ಕಳ ಸಹಾಯವಾಣಿ ಸಂಖ್ಯೆ 1098ಕ್ಕೆ ಕರೆ ಮಾಡಿ ತಿಳಿಸಬೇಕು ಎಂದು ಮನವಿ ಮಾಡಿದ್ದಾರೆ.

ADVERTISEMENT

ಸುಳ್ಳು ಸಂದೇಶ ಸೃಷ್ಟಿಸುವವರನ್ನು ಮತ್ತು ಸಂದೇಶ ರವಾನಿಸುವವರನ್ನು ಅಕ್ರಮ ದತ್ತು ಮತ್ತು ಮಾನವ ಕಳ್ಳಸಾಗಾಣಿಕೆಗೆ ನೆರವಾದ ಆರೋಪದಡಿ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಯಾವುದೇ ಉದ್ದೇಶಕ್ಕಾಗಿ ಮಗು ಮಾರಾಟ ಅಥವಾ ಕೊಂಡುಕೊಳ್ಳುವುದು ಸೆಕ್ಷನ್ 81 ಜೆಜೆ ಕಾಯ್ದೆ 2015ರ ಅಡಿ ಅಪರಾಧವಾಗಿದೆ. ಈ ಅಪರಾಧಕ್ಕೆ 5 ವರ್ಷ ಜೈಲು ಶಿಕ್ಷೆ ಮತ್ತು ₹ 1 ಲಕ್ಷ ದಂಡ ವಿಧಿಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ.

ಮಗು ಅನಾಥವಾಗಿದೆ ಅಥವಾ ಪೋಷಕರ ಪೋಷಣೆಯಿಂದ ವಂಚಿತವಾಗಿದೆ ಎಂದು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098ಕ್ಕೆ ಅಥವಾ ಪೊಲೀಸರಿಗೆ ಕರೆ ಮಾಡಬಹುದು. ಮಗುವನ್ನು ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಬೇಕು ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ 24 ತಾಸಿನೊಳಗೆ ತಿಳಿಸಬೇಕು. ಮಗುವನ್ನು ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲು ವಿಫಲವಾದರೆ ಸೆಕ್ಷನ್ 33 ಮತ್ತು 34 ಜೆಜೆ ಕಾಯ್ದೆ 2015ರಡಿ 6 ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ₹ 10 ಸಾವಿರ ದಂಡ ವಿಧಿಸಬಹುದು ಎಂದು ಹೇಳಿದ್ದಾರೆ.

ಬಾಲನ್ಯಾಯ ಕಾಯ್ದೆ-2015 ಮತ್ತು ಬಾಲನ್ಯಾಯ ಮಾದರಿ ನಿಯಮ–2016 ಹಾಗೂ ದತ್ತು ಅಧಿಸೂಚನೆ 2017ರ ಅಡಿ ಮಾತ್ರ ಅನಾಥ, ಪರಿತ್ಯಕ್ತ ಅಥವಾ ಒಪ್ಪಿಸಲ್ಪಟ್ಟ ಮಕ್ಕಳನ್ನು ದತ್ತು ನೀಡಲಾಗುವುದು. ಮಗು ದತ್ತು ಪಡೆಯಲು ಆಸಕ್ತಿ ಇರುವವರು ಆನ್‌ಲೈನ್‌ನಲ್ಲಿ ಹೆಸರು ನೊಂದಾಯಿಸಬೇಕು ಎಂದು ಸೂಚಿಸಿದ್ದಾರೆ.

ಪ್ರಸಾರ ನಿಷೇಧ: ಅನಾಥರಾದ ಮಕ್ಕಳ ಪಾಲನೆ ಮತ್ತು ರಕ್ಷಣೆ ಅವಶ್ಯವಿರುವ ಹಾಗೂ ಬಾಧಿತ ಮಕ್ಕಳ ಮಾಹಿತಿಯನ್ನು ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವುದರಿಂದ ಮಕ್ಕಳಿಗೆ ತೊಂದರೆ ಆಗಬಹುದು. ಆದ್ದರಿಂದ ಬಾಲನ್ಯಾಯ ಮಕ್ಕಳ ಪಾಲನೆ ಮತ್ತು ರಕ್ಷಣೆ ಕಾಯ್ದೆ-2015ರ ಸೆಕ್ಷನ್ 74ರ ಅನ್ವಯ ಮಾಧ್ಯಮಗಳಲ್ಲಿ ಮಕ್ಕಳ ಮಾಹಿತಿ ಪ್ರಸಾರ ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.

ಯಾವುದೇ ಕಾರಣಗಳಿಂದ ಮಕ್ಕಳು ಅನಾಥರಾದ ಸಂದರ್ಭದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098ಕ್ಕೆ ಮಾಹಿತಿ ನೀಡಬೇಕು. ಮಕ್ಕಳ ಸಹಾಯವಾಣಿ ಸಿಬ್ಬಂದಿ ಮಕ್ಕಳ ಪರಿಸ್ಥಿತಿ ಅಧ್ಯಯನ ಮಾಡಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ವರದಿ ನೀಡುತ್ತಾರೆ. ಪ್ರತಿ ಜಿಲ್ಲೆಯಲ್ಲಿ ಮಕ್ಕಳ ರಕ್ಷಣಾ ಚಟುವಟಿಕೆ ನಿರ್ವಹಿಸುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.

ಕೋವಿಡ್‌ನಿಂದ ಮಕ್ಕಳು ಅನಾಥರು ಅಥವಾ ಅರೆ ಅನಾಥರಾದಂತಹ ಪರಿಸ್ಥಿತಿಯನ್ನು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅನುಸರಣೆ ಮಾಡಲಾಗುತ್ತಿದೆ. ಕೋವಿಡ್ ಕಾರಣದಿಂದ ಮಗು ಅನಾಥವಾಗಿದ್ದರೆ ಮತ್ತು ಮಗುವನ್ನು ನೋಡಿಕೊಳ್ಳಲು ಸಂಬಂಧಿಕರು ಯಾರೂ ಸಿದ್ಧರಿಲ್ಲದಿದ್ದರೆ ಅಂತಹ ಮಗುವನ್ನು 24 ತಾಸಿನೊಳಗೆ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಬೇಕು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.