ಕೋಲಾರ: ಹಾಲಿ ಅಧ್ಯಕ್ಷ ಹಾಗೂ ಮತ್ತೊಮ್ಮೆ ಆ ಸ್ಥಾನದ ಮೇಲೆ ಕಣ್ಣಿಟ್ಟಿರುವ ಜಿ.ಸುರೇಶ್‌ಬಾಬು ವಿರುದ್ಧ ಸಡ್ಡೊಡೆದು ಮತ್ತೊಂದು ಬಣ ಹುಟ್ಟಿಕೊಂಡಿದ್ದು, ರಾಜಕಾರಣಿಗಳ ಪೋಷಣೆ ಪಡೆದಿರುವುದು ಈ ಬಾರಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚುನಾವಣೆಗೆ ಮಹತ್ವದ ತಿರುವು ನೀಡಿದೆ.
ಶಾಸಕ ಕೊತ್ತೂರು ಮಂಜುನಾಥ್ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಔತಣಕೂಟ ಹಾಗೂ ಸನ್ಮಾನದ ಹೆಸರಿನಲ್ಲಿ ಜಿಲ್ಲಾಧಿಕಾರಿ ಕಚೇರಿಯ ಬಳಿಯ ಶಾಸಕರ ಅತಿಥಿ ಗೃಹದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮವು ಹಲವು ಲೆಕ್ಕಾಚಾರಗಳಿಗೆ ಕಾರಣವಾಗಿದೆ.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನ.4ರಂದು ನಡೆಯಲಿರುವ ಚುನಾವಣೆಯಲ್ಲಿ 66 ನಿರ್ದೇಶಕರು ಹಾಗೂ ಐದು ತಾಲ್ಲೂಕಿನ ಐವರು ಅಧ್ಯಕ್ಷರು ಸೇರಿ 71 ಮಂದಿ ಮತ ಚಲಾಯಿಸಲಿದ್ದಾರೆ. ಗೆಲ್ಲಲು 36 ಮತಗಳು ಬೇಕು.
ಹೊಸಬರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ಎಂಎಲ್‌ಸಿ ಅನಿಲ್ ಕುಮಾರ್ ನೇತೃತ್ವದಲ್ಲಿ ಹೊಸ ಗುಂಪು ಸೃಷ್ಟಿಯಾಗಿ, ತಂತ್ರಗಾರಿಕೆ ರೂಪಿಸಲಾಗುತ್ತಿದೆ. ಅದಕ್ಕೆ ಔತಣಕೂಟ ಸಾಕ್ಷಿಯಾದಂತಿದೆ. ಅದರಲ್ಲಿ ಸುಮಾರು 60 ಮಂದಿ ನಿರ್ದೇಶಕರು ಭಾಗವಹಿಸಿರುವುದಾಗಿ ಶಾಸಕರ ಬೆಂಬಲಿತ ಬಣ ಹೇಳಿಕೊಂಡಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ. ಈ ಬಣಕ್ಕೆ ಮಾಲೂರು ಶಾಸಕ ಕೆ.ವೈ.ನಂಜೇಗೌಡರ ಬೆಂಬಲವೂ ಇದೆ ಎನ್ನಲಾಗಿದೆ. ಜೊತೆಗೆ ಜಾತಿ ಲೆಕ್ಕಾಚಾರವೂ ನಡೆಯುತ್ತಿದೆ.
ತಮ್ಮಲ್ಲಿ ಸಮರ್ಥರೊಬ್ಬರನ್ನು ಅಭ್ಯರ್ಥಿಯನ್ನಾಗಿ ನಿಲ್ಲಿಸಿ ಅವರನ್ನು ಗೆಲ್ಲಿಸಿಕೊಳ್ಳಿ. ಅವಿರೋಧವಾಗಿ ಆಯ್ಕೆ ಮಾಡಿದರೆ ಇನ್ನೂ ಒಳ್ಳೆಯದು ಎಂಬುದಾಗಿ ಕೊತ್ತೂರು ಮಂಜುನಾಥ್ ಹಾಗೂ ಅನಿಲ್ ಕುಮಾರ್ ಔತಣಕೂಟದಲ್ಲಿ ನಿರ್ದೇಶಕರಿಗೆ ಹೇಳಿದ್ದಾರೆ.
ಇತ್ತ ಸುರೇಶ್ ಬಾಬು ಹಾಗೂ ಅವರ ಬಣದವರು ಸುಮ್ಮನೇ ಕುಳಿತಿಲ್ಲ. ಅವರು ಕೂಡ ಪ್ರತಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಈ ಬಣದಲ್ಲಿ ಸುರೇಶ್ ಬಾಬು, ಸಂಧ್ಯಾ, ಕೆಜಿಎಫ್ ನರಸಿಂಹಮೂರ್ತಿ, ವೆಂಕಟಚಲಾತಿ, ಸವಿತಾ ಸೇರಿದಂತೆ ಆರು ಮಂದಿ ಇದ್ದು, ಮತ್ತೊಂದು ಬಣದ ಮತ್ತಷ್ಟು ಮಂದಿ ತಮ್ಮ ಕಡೆ ಬರಲಿದ್ದಾರೆ ಎಂಬ ವಿಶ್ವಾಸದಲ್ಲಿದೆ.
ಶಾಸಕರ ಬೆಂಬಲಿತ ಬಣದಲ್ಲಿ ಹಲವಾರು ಮಂದಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಿದ್ದು, ಅಸಮಾಧಾನ ಸ್ಫೋಟಗೊಳ್ಳಲಿದೆ, ಶಾಸಕರು ಔತಣಕೂಟಕ್ಕೆ ಕರೆದಿರುವುದರಿಂದ ಹೋಗಿದ್ದಾರೆ ಅಷ್ಟೆ, ಅದರಲ್ಲಿ ತಮ್ಮ ಬೆಂಬಲಿಗರೂ ಇದ್ದಾರೆ ಎಂಬುದು ಸುರೇಶ್‌ಬಾಬು ಬಣದ ಹೇಳಿಕೆ. ಈ ಬಣದವರು ಮಾಜಿ ಸಚಿವ ರಮೇಶ್ ಕುಮಾರ್ ಬೆಂಬಲ ಕೋರಿದ್ದಾರೆ ಎನ್ನಲಾಗಿದೆ. ಅಲ್ಲದೇ, ಜೆಡಿಎಸ್ ಹಾಗೂ ಬಿಜೆಪಿ ಮುಖಂಡರೊಂದಿಗೂ ಸಂಪರ್ಕದಲ್ಲಿದ್ದಾರೆ.
ಭೂಮಾಪನ ಇಲಾಖೆಯ ಸುರೇಶ್‌ಬಾಬು ಈಗಾಗಲೇ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ನ.25ರಂದು ಮತ್ತೊಮ್ಮೆ ಸಲ್ಲಿಸಲಿದ್ದಾರೆ ಎಂಬುದು ಗೊತ್ತಾಗಿದೆ.
ಜಿಲ್ಲಾಧ್ಯಕ್ಷ, ಖಜಾಂಚಿ, ರಾಜ್ಯ ಪರಿಷತ್ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಲು ನ.27 ಕಡೆಯ ದಿನಾಂಕವಾಗಿದ್ದು, 28ರಂದು ಪರಿಶೀಲನೆ ನಡೆಯಲಿದೆ. ವಾಪಸ್ ಪಡೆಯಲು ನ.29 ಕೊನೆಯ ದಿನ. ಡಿ.4ರಂದು ನಗರಸಭೆ ಆವರಣದ ರೋಟರಿ ಕ್ಲಬ್‌ನಲ್ಲಿ ಮತದಾನ ನಡೆಯಲಿದ್ದು, ಅದೇ ಸಂಜೆ ಫಲಿತಾಂಶ ಹೊರಬೀಳಲಿದೆ. ಸಿ.ವಿ.ನಾಗರಾಜಗೌಡ ಜಿಲ್ಲಾ ಚುನಾವಣಾಧಿಕಾರಿ ಕಾರ್ಯನಿರ್ವಹಿಸಲಿದ್ದಾರೆ.
ನ.4ರಂದು ಮತದಾನ, ಅಂದೇ ಮತ ಎಣಿಕೆ ಒಟ್ಟು 71 ನಿರ್ದೇಶಕರಿಂದ ಮತದಾನ ಅಧ್ಯಕ್ಷ, ಖಜಾಂಚಿ, ರಾಜ್ಯ ಪರಿಷತ್ ಸ್ಥಾನಕ್ಕೆ ಮತದಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.