ಕೋಲಾರ: ‘ಸಂಸದ ಕೆ.ಎಚ್.ಮುನಿಯಪ್ಪ ಅವರಿಗೆ ನನ್ನ ಪಕ್ಕದಲ್ಲಿ ಮಲಗಲು ಇಷ್ಟವಿರಬಹುದು. ಆದರೆ, ಅವರೊಂದಿಗೆ ಮಲಗಲು ನನಗೆ ಇಷ್ಟವಿಲ್ಲ. ನಾನು ಗಂಡಸರೊಂದಿಗೆ ಮಲಗಲ್ಲ’ ಎಂದು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ಅವರು ಮುನಿಯಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮುನಿಯಪ್ಪ, ‘ನಾನು ಮತ್ತು ರಮೇಶ್‌ಕುಮಾರ್ ಗಂಡ ಹೆಂಡತಿ ಇದ್ದಂತೆ. ನಾವಿಬ್ಬರು ಸತಿ ಪತಿಯಂತೆ ಜಗಳವಾಡುತ್ತಲೇ ಇರುತ್ತೇವೆ. ಆದರೆ, ಸಂಜೆಗೆ ಎಲ್ಲಾ ಸರಿ ಹೋಗಿ ಒಂದಾಗುತ್ತೇವೆ’ ಎಂದು ಹೇಳಿದ್ದರು.
ಮುನಿಯಪ್ಪರ ಹೇಳಿಕೆಗೆ ಇಲ್ಲಿ ಗುರುವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ರಮೇಶ್‌ಕುಮಾರ್, ‘ನನಗೆ ಯಾವುದೇ ಅನೈತಿಕ ಸಂಬಂಧವಿಲ್ಲ. ಸಪ್ತಪದಿ ತುಳಿದು ಮದುವೆಯಾದ ಪತ್ನಿಯೊಂದಿಗೆ ಮಾತ್ರ ನನ್ನ ಸಂಬಂಧವಿದೆ. ಹೀಗಾಗಿ ನನ್ನ ಮನೆಯಲ್ಲೇ ನಾನು ಮಲಗುವೆ’ ಎಂದು ತಿರುಗೇಟು ನೀಡಿದರು.
‘ಸಾರ್ವಜನಿಕ ಜೀವನದಲ್ಲಿರುವ ರಾಜಕಾರಣಿಗಳಿಗೆ ಲಜ್ಜೆ ಇರಬೇಕು. ಜನಪ್ರತಿನಿಧಿಗಳು ಲಜ್ಜಾಹೀನವಾಗಿ ಬದುಕಬಾರದು. ರಾಜಕೀಯ ಲಾಭಕ್ಕಾಗಿ ಜನರ ಮಾನ ಕಳೆಯಬಾರದು. ಆಗ ಮಾತ್ರ ಪ್ರಜಾಸತ್ತೆಗೆ ಗೌರವ ಸಿಗುತ್ತದೆ. ಕಲಬುರ್ಗಿ ಜಿಲ್ಲೆ ಚಿಂಚೋಳಿ ಶಾಸಕ ಉಮೇಶ್ ಜಾಧವರ ರಾಜೀನಾಮೆ ಸಂಬಂಧ ಮಾರ್ಚ್ 25ಕ್ಕೆ ವಿಚಾರಣಾ ದಿನಾಂಕ ನಿಗದಿಪಡಿಸಲಾಗಿದೆ’ ಎಂದರು.
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಮುನಿಯಪ್ಪ ಅವರಿಗೆ ಟಿಕೆಟ್ ಕೊಡುವ ಬಗ್ಗೆ ಪ್ರತಿಕ್ರಿಯಿಸಿ, ‘ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಒಟ್ಟಾಗಿ ಸರ್ವಾನುಮತದಿಂದ ನನ್ನನ್ನು ಸ್ಪೀಕರ್ ಮಾಡಿದ್ದಾರೆ. ನಾನು ಜಡ್ಜ್ ಇದ್ದಂತೆ. ಯಾರಿಗೂ ಸಹಮತವಿಲ್ಲ, ಭಿನ್ನಮತನೂ ಇಲ್ಲ. ಪಕ್ಷದಲ್ಲಿರುವವರು ಟಿಕೆಟ್ ಬಗ್ಗೆ ತೀರ್ಮಾನಿಸುತ್ತಾರೆ. ನನ್ನ ಮನಸ್ಸಿನಲ್ಲಿರುವುದನ್ನು ಹೇಳುವುದಕ್ಕೆ ಆಗುವುದಿಲ್ಲ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.