ಕೆಜಿಎಫ್: ಮಳೆ ಬಂದರೆ ಸಾಕು, ರಸ್ತೆ ಪಕ್ಕದ ಚರಂಡಿ ನೀರು ರಸ್ತೆ ಮೇಲೆ ಇರುತ್ತದೆ. ಪಾದಚಾರಿಗಳು ಮತ್ತು ವಾಹನ ಚಾಲಕರು ಇಂತಹ ತ್ಯಾಜ್ಯಯುಕ್ತ ನೀರಿನಲ್ಲಿಯೇ ಸಂಚರಿಸಬೇಕು. ಇದು ರಾಬರ್ಟಸನ್ ಪೇಟೆ ನಗರಸಭೆ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಕಂಡು ಬರುವ ಪರಿಸ್ಥಿತಿ.
ಬಿರುಸಾದ ಮಳೆ ಬಂದರೆ ಊರಿಗಾಂಪೇಟೆ ರಾಜಕಾಲುವೆ ತುಂಬಿ ಪಕ್ಕದ ಬಡಾವಣೆಗಳಿಗೆ ನುಗ್ಗುವುದು ಸಾಮಾನ್ಯವಾಗಿದೆ. ಕಳೆದ ವರ್ಷ ಇಂತಹ ಅವಘಡ ಸಂಭವಿಸಿದಾಗ ಶಾಶ್ವತ ಪರಿಹಾರ ಒದಗಿಸುವುದಾಗಿ ಶಾಸಕಿ ರೂಪಕಲಾ ನಿವಾಸಿಗಳಿಗೆ ಆಶ್ವಾಸನೆ ನೀಡಿದ್ದರು. ಭರವಸೆ ಹಾಗೆಯೇ ಉಳಿದಿದೆ ಎನ್ನುತ್ತಾರೆ ನಿವಾಸಿಗಳು.
ಊರಿಗಾಂಪೇಟೆ, ಫಿಶ್‌ಲೈನ್, ಫೋರ್ತ್ ಬ್ಲಾಕ್ ಮತ್ತಿತರ ಪ್ರದೇಶಗಳು ನಿರಂತರವಾಗಿ ತೊಂದರೆಗೆ ಒಳಗಾಗುತ್ತಿರುವುದು ಸಾಮಾನ್ಯವಾಗಿದೆ. ಮಳೆ ಬಂದ ಸಮಯದಲ್ಲಿ ಮಾತ್ರ ನಿವಾಸಿಗಳು ದೂರುತ್ತಾರೆ. ನಂತರ ಮರೆಯುತ್ತಾರೆ ಎಂಬ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಸಮಸ್ಯೆ ಮಾತ್ರ ಹಾಗೆಯೇ ಉಳಿದಿದೆ.
ಚರಂಡಿಗಳನ್ನು ನಿಯಮಿತವಾಗಿ ಸ್ವಚ್ಛ ಮಾಡದೆ ಇರುವುದು, ಕಳಪೆ ಕಾಮಗಾರಿಯಿಂದಾಗಿ ರಸ್ತೆಗೆ ತ್ಯಾಜ್ಯದ ನೀರು ಹರಿಯಲು ಕಾರಣವಾಗಿದೆ. ರಾಜಕಾಲುವೆ ಮತ್ತು ಕೆರೆ ಒತ್ತುವರಿ ಪ್ರಮುಖ ಕಾರಣವಾಗಿದೆ.
ಸುಮಾರು ₹12ಕೋಟ ವೆಚ್ಚದಲ್ಲಿ ಅಂಬೇಡ್ಕರ್ ಸ್ಕೂಲ್ ಬಳಿಯಿಂದ ರಾಜೇಶ್ ಕ್ಯಾಂಪ್‌ವರೆಗೂ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಲ್ಲಿ ನಡೆದಿರುವ ಕಾಮಗಾರಿ ಗುಣಮಟ್ಟ ಈಗ ಪ್ರಶ್ನಾರ್ಹವಾಗಿದೆ.
ಊರಿಗಾಂನಲ್ಲಿ ಜೋಡಿ ರಸ್ತೆ ನಿರ್ಮಾಣ ಮಾಡಲಾಗಿದೆ. ಇದಕ್ಕೆ ವಿದ್ಯುತ್ ಕಂಬಗಳನ್ನು ಅಳವಡಿಸಿ ಸುಂದರವಾಗಿ ರೂಪಿಸಲಾಗಿದೆ. ಆದರೆ, ಮಳೆ ಬಂದಾಗ ಅದರ ನಿಜ ರೂಪ ಹೊರ ಬಿದ್ದಿದೆ. ಸಣ್ಣ ಮಳೆಯಾದರೂ ಸಾಕು ರಾಬರ್ಟಸನ್‌ಪೇಟೆ-ಊರಿಗಾಂ ರಸ್ತೆ ನೀರಿನಿಂದ ಆವೃತವಾಗುತ್ತದೆ.
ಪಾದಚಾರಿಗಳು ಸಂಚರಿಸಲು ಪ್ರಯಾಸಪಡಬೇಕು. ರಸ್ತೆ ಎರಡೂ ಬದಿಯಲ್ಲಿ ನಿರ್ಮಾಣಮಾಡಿರುವ ಫುಟ್ ಪಾತ್ ಒತ್ತುವರಿಯಾಗಿದೆ. ಇದು ಸಮತಟ್ಟಾಗಿಲ್ಲ ಎನ್ನುವುದು ಸ್ಥಳೀಯರ ದೂರು.
ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಿಂದ ಸೂರಜ್ಮಲ್ ವೃತ್ತದವರೆಗೂ ಎರಡು ಬದಿಗಳಲ್ಲಿ ಚರಂಡಿ ವ್ಯವಸ್ಥೆಯೇ ಇಲ್ಲ. ಒಂದು ಬದಿಯಲ್ಲಿ ಇರುವ ಚರಂಡಿಯಲ್ಲಿ ಸದಾ ತ್ಯಾಜ್ಯ ತುಂಬಿರುತ್ತದೆ. ಸರ್ಕಾರಿ ಆಸ್ಪತ್ರೆ ತಡೆಗೋಡೆ ದಾಟುತ್ತಿದ್ದಂತೆಯೇ ಚರಂಡಿ ನೀರು ಕೂಡ ರಸ್ತೆಗೆ ಇಳಿಯುತ್ತದೆ.
ಮಳೆ ನೀರು ಬಸ್ ನಿಲ್ದಾಣದಿಂದ ಸುಮಾರು ಅರ್ಧ ಕಿ.ಮೀ ನೀರು ರಸ್ತೆಯಲ್ಲಿಯೇ ಹರಿದು ಬರುತ್ತದೆ. ನೀರಿನ ಜತೆಗೆ ಸಣ್ಣ ಸಣ್ಣ ಕಲ್ಲುಗಳು ಕೂಡ ಸಾಗಿಬರುತ್ತವೆ. ಮಳೆ ನಿಂತ ಮೇಲೆ ರಸ್ತೆಯಲ್ಲಿರುವ ಕಲ್ಲುಗಳು ಅಪಾಯಕಾರಿಯಾಗಿ ಪರಿಣಮಿಸಿದೆ.
ಸುಮಾರು ₹10ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ತಾಲ್ಲೂಕು ಆಡಳಿತ ಸೌಧದಲ್ಲಿ ಕೂಡ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಇಲ್ಲ. ಮಳೆ ಬಂದರೆ ಕಚೇರಿ ಮುಂಭಾಗದಲ್ಲಿ ನೀರು ತುಂಬುವುದು ಸರ್ವೆ ಸಾಮಾನ್ಯವಾಗಿದೆ.
ಲೋಕೋಪಯೋಗಿ ಇಲಾಖೆ ರಸ್ತೆ ನಿರ್ಮಾಣ ಮಾಡುವ ಸಮಯದಲ್ಲಿ ಅದರ ಅಕ್ಕಪಕ್ಕದಲ್ಲಿ ಚರಂಡಿ ನಿರ್ಮಿಸಬೇಕು. ಆಗ ಇಂತಹ ಸಮಸ್ಯೆ ಉದ್ಭವಿಸುವುದಿಲ್ಲ. ಕೆಲವಡೆ ರಸ್ತೆ ಇದೆ. ಚರಂಡಿ ಇಲ್ಲ. ಸಮಸ್ಯೆ ಬಂದಾಗ ನಗರಸಭೆಯನ್ನು ದೂರುತ್ತಾರೆ. ತಾಲ್ಲೂಕು ಆಡಳಿತ ಸೌಧ ನಿರ್ಮಾಣ ಮಾಡಿದ ಗುತ್ತಿಗೆದಾರ ಸಮರ್ಪಕ ಕೆಲಸ ಮಾಡದೆ ಇರುವುದರಿಂದ ನೀರು ತಂಬುತ್ತದೆ. ಅದಕ್ಕೂ ನಗರಸಭೆಯನ್ನೇ ದೂರುತ್ತಾರೆ ಎಂದು ನಗರಸಭೆ ಅಧಿಕಾರಿಗಳು ಬೇಸರ ವ್ಯಕ್ತಪಡಿಸುತ್ತಾರೆ.
ಕೋರ್ಟ್ ಮುಂಭಾಗದಲ್ಲಿ ಮಳೆ ಬಂದರೆ ಸಾಕು ನೀರು ತುಂಬುವುದು ಸಾಮಾನ್ಯವಾಗಿದೆ. ದೀರ್ಘ ಕಾಲದ ಸಮಸ್ಯೆ ಬಗೆಹರಿಸಿಲ್ಲ.ಶ್ರೀನಿವಾಸನ್ ನಿವಾಸಿ
ಆಟೊ ಚಲಾಯಿಸುವಾಗ ನೀರು ಸಿಡಿಯುತ್ತದೆ. ಇದರಿಂದ ಪಾದಚಾರಿಗಳ ಬಟ್ಟೆ ಕೊಳೆಯಾಗುತ್ತದೆ. ನೀರು ಹರಿದು ಹೋಗಲು ಸರಾಗ ವ್ಯವಸ್ಥೆ ಕಲ್ಪಿಸಬೇಕುಚಂದ್ರನ್ ಆಟೊ ಚಾಲಕ
ನ್ಯಾಯಾಲಯದ ಬಳಿ ನೀರು ಹರಿದು ಹೋಗುವ ರಾಜಕಾಲುವೆ ಹೂಳು ತೆಗೆಯಲಾಗುತ್ತಿದೆ. ಸದ್ಯದಲ್ಲಿಯೇ ಸಮಸ್ಯೆ ನೀಗುತ್ತದೆಪವನ್ ಕುಮಾರ್ ನಗರಸಭೆ ಆಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.