ADVERTISEMENT

ಸಿದ್ದಪ್ಪಗೆ ನಾಟಕ ಅಕಾಡೆಮಿ ಪ್ರಶಸ್ತಿ

ಇಂದು ತುಮಕೂರಿನ ಗುಬ್ಬಿ ವೀರಣ್ಣ ರಂಗ ಮಂದಿರದಲ್ಲಿ ಪ್ರಶಸ್ತಿ ಪ್ರದಾನ

ವಿ.ರಾಜಗೋಪಾಲ್
Published 9 ಜನವರಿ 2021, 6:17 IST
Last Updated 9 ಜನವರಿ 2021, 6:17 IST
ಮಾಲೂರು ಸಿದ್ದಪ್ಪ
ಮಾಲೂರು ಸಿದ್ದಪ್ಪ   

ಮಾಲೂರು: ಪಟ್ಟಣದ ಹಿರಿಯ ರಂಗಕರ್ಮಿ, ನಾಟಕಕಾರ ಮಾಲೂರು ಸಿದ್ದಪ್ಪ (86 ವರ್ಷ) ಅವರು ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದು, ಜ 9ರಂದು ತುಮಕೂರಿನ ಗುಬ್ಬಿ ವೀರಣ್ಣ ರಂಗ ಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪುರಸ್ಕಾರ ಸ್ವೀಕರಿಸಲಿದ್ದಾರೆ.

86 ವರ್ಷದ ಹಿರಿಯ ಕಲಾವಿದ ಸಿದ್ದಪ್ಪ ಅವರನ್ನು ಗುರುತಿಸಿರುವುದಕ್ಕೆ ತಾಲ್ಲೂಕಿನ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ. 1938 ಡಿಸೆಂಬರ್ 25 ರಂದು ಹುಚ್ಚಪ್ಪ ಮತ್ತು ನಂಜಮ್ಮ ದಂಪತಿಯ ಪುತ್ರರಾಗಿ ಜನಿಸಿದ ಇವರು ಬಾಲ್ಯದಿಂದಲೂ ನಾಟಕವನ್ನು ಮೈಗೂಡಿಸಿಕೊಂಡಿದ್ದಾರೆ. 70ರ ದಶಕದಲ್ಲಿ ಕಲಿ ಕಂಠೀರವ, ಎಚ್ಚಮ್ಮ ನಾಯಕ, ತ್ಯಾಗಿ, ರಣದುಂದುಬಿ, ರಕ್ತಾಂಜಲಿ ಸೇರಿದಂತೆ ಹತ್ತಾರು ನಾಟಕಗಳಲ್ಲಿ ಅಭಿನಯಿಸಿ ಹಲವು ನಾಟಕಗಳಿಗೆ ನಿರ್ದೇಶನ ಮಾಡಿದ್ದಾರೆ.

1980 ರಲ್ಲಿ ಅಂದಿನ ಮುಖ್ಯಮಂತ್ರಿ ಗುಂಡೂರಾಯರನ್ನು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮಾಲೂರಿಗೆ ಕರೆ ತಂದು ಮೂರು ದಿನಗಳ ಅಖಿಲ ಕರ್ನಾಟಕ ರಂಗಭೂಮಿ ಕಲಾವಿದರ ಸಮಾವೇಶ ಆಯೋಜಿಸಿದ್ದರು. ಇದೇ ವೇದಿಕೆಯಲ್ಲಿ ಮುಖ್ಯಮಂತ್ರಿ ಗುಂಡೂರಾಯರು ರಂಗಭೂಮಿ ಕಲಾವಿದರಿಗೆ ಮಾಸಾಶನ ನೀಡುವ ಯೋಜನೆ ಘೋಷಣೆ ಮಾಡಿದ್ದು, ಇದರ ಹೆಗ್ಗಳಿಕೆ ಮಾಲೂರು ಸಿದ್ದಪ್ಪ ಅವರಿಗೆ ಸಲ್ಲುತ್ತದೆ.

ADVERTISEMENT

ಪಟ್ಟಣದಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಿಸಬೇಕೆಂದು ಪುರಸಭೆಯಲ್ಲಿ ಹೋರಾಟ ಮಾಡಿ ಪುರಸಭಾ ಜಾಗವನ್ನು ಬಯಲು ರಂಗ ಮಂದಿರಕ್ಕೆ ಪಡೆದು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರಂಗ ಮಂದಿರಕ್ಕೆ ಅಡಿಪಾಯ ಹಾಕಿದವರಲ್ಲಿ ಸಿದ್ದಪ್ಪ ಮೊದಲಿಗರು.

ಚಲನ ಚಿತ್ರಗಳಲ್ಲಿ ನಟನೆ: ರಂಗ ಭೂಮಿ ಜತೆಗೆ ಬೆಳ್ಳಿ ಪರದೆಯಲ್ಲಿ ಮಿಂಚಿರುವ ಸಿದ್ದಪ್ಪ, ಪುಟ್ಟಣ್ಣ ಕಣಗಾಲ್ ಅವರಆಪ್ತರಾಗಿದ್ದರು. ಋಣ ಮುಕ್ತಳು, ಧರಣಿ ಮಂಡಲ ಮಧ್ಯದೊಳಗೆ, ಮಸಣದ ಹೂವು ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಪುತ್ತಳಿಗಳ ಸ್ಥಾಪನೆ: ಮಾಲೂರು ಪಟ್ಟಣದಲ್ಲಿ ಮೈಸೂರು ಮಹಾರಾಜ ಜೈಚಾಮರಾಜ ಒಡೆಯರ್ ಅವರ ಪ್ರತಿಮೆ, ರಾಜಕುಮಾರ್ ಪ್ರತಿಮೆ, ಗಾಂಧೀಜಿ ಪ್ರತಿಮೆ ಸೇರಿದಂತೆ ವಿವೇಕಾನಂದ ಪ್ರತಿಮೆಯನ್ನು ಭುವನೇಶ್ವರಿ ಕಲಾ ಸಂಘದೊಂದಿಗೆ ಅನಾವರಣಗೊಳಿಸಿ ಪಟ್ಟಣದ ಜನತೆಯಿಂದ ಸೈ ಎನಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.