ADVERTISEMENT

ಕೋಲಾರ: ಎಲ್ಲ ದೇಗುಲಗಳಲ್ಲಿ ವಸ್ತ್ರ ಸಂಹಿತೆ ಕಡ್ಡಾಯ

ಕೆ.ಓಂಕಾರ ಮೂರ್ತಿ
Published 28 ಅಕ್ಟೋಬರ್ 2024, 5:26 IST
Last Updated 28 ಅಕ್ಟೋಬರ್ 2024, 5:26 IST
<div class="paragraphs"><p>ಕೋಲಾರದಲ್ಲಿರುವ ಕೋಲಾರಮ್ಮನ ದೇಗುಲ</p></div>

ಕೋಲಾರದಲ್ಲಿರುವ ಕೋಲಾರಮ್ಮನ ದೇಗುಲ

   

ಕೋಲಾರ: ಜಿಲ್ಲೆಯಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಯ ಎಲ್ಲಾ ದೇಗುಲಗಳಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಿದ್ದು, ಭಕ್ತರು ಕಡ್ಡಾಯವಾಗಿ ಸಾಂಪ್ರಾಯಿಕ ಹಾಗೂ ಸಭ್ಯ ಉಡುಗೆ ತೊಟ್ಟು ದೇಗುಲ ಪ್ರವೇಶಿಸಬೇಕಿದೆ.

ಕೋಲಾರ ನಗರದ ಶಕ್ತಿದೇವತೆ ಕೋಲಾರಮ್ಮ ದೇಗುಲ ಸೇರಿದಂತೆ ಎಲ್ಲಾ ದೇಗುಲಗಳಲ್ಲಿ ಈ ಸಂಬಂಧ ಇಲಾಖೆಯಿಂದ ಸೂಚನೆ ಇರುವ ಬ್ಯಾನರ್‌, ಪೋಸ್ಟರ್‌, ಫಲಕ ಅಳವಡಿಸಲಾಗುತ್ತಿದೆ. ಯಾವ ರೀತಿ ಉಡುಪು ಧರಿಸಬೇಕು, ಯಾವ ರೀತಿಯ ಉಡುಪು ಧರಿಸಬಾರದೆಂಬ ಸೂಚನೆಯನ್ನೂ ನೀಡಲಾಗಿದೆ.

ADVERTISEMENT

ದೇವಾಲಯಕ್ಕೆ ಬರುವ ಪುರುಷರು ಧೋತಿ, ಪಂಚೆ ಅಥವಾ ಪ್ಯಾಂಟ್, ಷರ್ಟ್‌ ಧರಿಸಬಹುದು. ಮಹಿಳೆಯರು ಸೀರೆ ಅಥವಾ ಚೂಡಿದಾರ್‌, ಕುರ್ತಾ ಧರಿಸಬಹುದು. ಬರ್ಮುಡಾ, ಮಿಡಿ, ಸ್ಕರ್ಟ್ಸ್‌ , ಶಾರ್ಟ್ಸ್, ಟೈಟ್‌ ಜೀನ್ಸ್‌ ಪ್ಯಾಂಟ್‌, ಟೀ ಷರ್ಟ್‌, ನೈಟ್‌ ಪ್ಯಾಂಟ್‌, ಸ್ಲೀವ್‌ಲೆಸ್‌ ಉಡುಪು ಧರಿಸಿ ಬರುವಂತಿಲ್ಲ. ಕೆಲವೆಡೆ ಈಗಾಗಲೇ ನಿಯಮ ಜಾರಿಯಲ್ಲಿದ್ದರೂ ಸರಿಯಾಗಿ ಜಾರಿಯಾಗುತ್ತಿರಲಿಲ್ಲ.

ಜಿಲ್ಲೆಯ ಕೆಲ ದೇಗುಲಗಳಲ್ಲಿ ಅರ್ಚಕರು ಹುಂಡಿ ಮೇಲೆ ಆರತಿ ತಟ್ಟೆ ಇಡುವ ಪ್ರವೃತ್ತಿ ಹೆಚ್ಚುತ್ತಿರುವ ಬೆನ್ನಲ್ಲೇ ಅದರ ನಿಯಂತ್ರಣಕ್ಕೆ ಮುಜರಾಯಿ ಇಲಾಖೆ ಮುಂದಾಗಿದೆ.

‘ತಟ್ಟೆಗೆ ಹಾಕುವ ಹಣ ಅರ್ಚಕರಿಗೆ, ಹುಂಡಿಗೆ ಹಾಕುವ ಹಣ ದೇವಾಲಯದ ಅಭಿವೃದ್ಧಿಗೆ’ ಎಂಬ ಫಲಕಗಳನ್ನು ಜಿಲ್ಲೆಯ ಎಲ್ಲಾ ದೇಗುಲಗಳಲ್ಲಿ ಅಳವಡಿಸಲು ಮುಜರಾಯಿ ಇಲಾಖೆ ಕ್ರಮ ವಹಿಸಿದೆ.

‘ಹುಂಡಿ ಮೇಲೆ ತಟ್ಟೆ ಇಡುವ ಬಗ್ಗೆ ದೂರುಗಳು ಬಂದಿವೆ. ಇದೇ ಕಾರಣಕ್ಕೆ ಫಲಕ ಅಳವಡಿಸಲಾಗಿದೆ. ಇನ್ನುಳಿದ ದೇಗುಲಗಳಲ್ಲೂ ಹೊರಗೆ ಹಾಗೂ ಒಳಗೆ ಫಲಕ ಅಳವಡಿಸಲು ಸೂಚಿಸಲಾಗಿದೆ’ ಎಂದು ಮುಜರಾಯಿ ತಹಶೀಲ್ದಾರ್‌ ಸುಜಾತಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕೋಲಾರದ ಶಕ್ತಿ ದೇವತೆ ಕೋಲಾರಮ್ಮ ದೇಗುಲ ಮುಂದೆ ಅಳವಡಿಸಿರುವ ವಸ್ತ್ರ ಸಂಹಿತಿ ಫಲಕ

‘ಬಹುತೇಕ ದೇಗುಲಗಳಲ್ಲಿ ಇ–ಹುಂಡಿ ಸ್ಥಾಪಿಸಲಾಗಿದೆ. ಸೇವೆಗಳಿಗೆ ಆನ್‌ಲೈನ್‌ ಮೂಲಕ ಶುಲ್ಕ ಪಾವತಿಸಿಕೊಳ್ಳಲಾಗುತ್ತಿದೆ. ಸೀತಿಯ ಬೈರವೇಶ್ವರ ಸ್ವಾಮಿ ದೇಗುಲದಲ್ಲಿ ಈಗಾಗಲೇ ಯಾತ್ರಿ ನಿವಾಸ ನಿರ್ಮಿಸಲಾಗಿದೆ’ ಎಂದರು.

‘ದೇಗುಲಗಳಲ್ಲಿ ಗರ್ಭಗುಡಿಯಲ್ಲಿ ಫೋಟೊ ತೆಗೆಯದಂತೆಯೂ ಸೂಚಿಸಲಾಗಿದೆ. ಈ ಸಂಬಂಧವೂ ಫಲಕ ಅಳವಡಿಸಲಾಗಿದೆ’ ಎಂದು ಹೇಳಿದರು.

ಮಾಲೂರು ತಾಲ್ಲೂಕಿನ ಚಿಕ್ಕತಿರುಪತಿಯ ಪ್ರಸನ್ನ ವೆಂಕರಮಣಸ್ವಾಮಿ ದೇಗುಲ ಜಿಲ್ಲೆಯಲ್ಲಿ ಹೆಚ್ಚುವ ಆದಾಯ ಸಂಗ್ರಹದಲ್ಲಿ ಅಗ್ರಸ್ಥಾನದಲ್ಲಿದೆ. ವಾರ್ಷಿಕ ₹ 2 ಕೋಟಿಗೂ ಹೆಚ್ಚಿನ ಆದಾಯವಿದೆ. ರಾಜ್ಯದಿಂದ ಅಲ್ಲದೇ; ಪಕ್ಕದ ತಮಿಳುನಾಡು, ಕೇರಳ, ಆಂಧ್ರಪ್ರದೇಶ‌, ವಿದೇಶದಿಂದಲೂ ಇಲ್ಲಿಗೆ ಭಕ್ತರು ಬಂದು ಹರಕೆ ಅರ್ಪಿಸುತ್ತಾರೆ.

ಗುಟ್ಟಹಳ್ಳಿಯ ಬಂಗಾರು ತಿರುಪತಿ ವೆಂಕಟೇಶ್ವರಸ್ವಾಮಿ ದೇಗುಲ ಹಾಗೂ ಕೋಲಾರ ತಾಲ್ಲೂಕಿನ ಸೀತಿ ಭೈರವೇಶ್ವರ ಸ್ವಾಮಿ ಹೆಚ್ಚು ಆದಾಯ ತಂದುಕೊಡುವ ಜಿಲ್ಲೆಯ ಪ್ರಮುಖ ದೇಗುಲಗಳಾಗಿವೆ.

ಜಿಲ್ಲೆಯಲ್ಲಿ 6 ‘ಎ’ ದರ್ಜೆ ದೇಗುಲ, 12 ‘ಬಿ’ ದರ್ಜೆ ದೇಗುಲ ಹಾಗೂ 1,343 ‘ಸಿ’ ದರ್ಜೆ ದೇಗುಲ ಸೇರಿ ಒಟ್ಟು 1,360 ದೇಗುಲಗಳಿವೆ.

ಜಾತಿ ಭೇದವಿಲ್ಲದೆ ಎಲ್ಲರಿಗೂ ಪ್ರವೇಶ ನೀಡಬೇಕೆಂಬ ಅಭಿಯಾನ ಪರಿಣಾಮ ಜಿಲ್ಲೆಯಲ್ಲಿ ಶೇ 50ರಷ್ಟು ಮುಜರಾಯಿ ಇಲಾಖೆ ವ್ಯಾಪ್ತಿಯ ದೇಗುಲಗಳ ಪ್ರವೇಶ ದ್ವಾರದಲ್ಲಿ ಮುಕ್ತ ಪ್ರವೇಶದ ಫಲಕ ಹಾಕಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.