ADVERTISEMENT

ಡಿವಿಜಿ ಆಧುನಿಕ ಯುಗದ ಸರ್ವಜ್ಞ: ಲೇಖಕ ಪುರುಷೋತ್ತಮರಾವ್‌ ಬಣ್ಣನೆ

ಜನ್ಮ ದಿನಾಚರಣೆಯಲ್ಲಿ ವಿಜ್ಞಾನ ಲೇಖಕ ಪುರುಷೋತ್ತಮರಾವ್‌ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 16:24 IST
Last Updated 19 ಮಾರ್ಚ್ 2021, 16:24 IST
ಡಿವಿಜಿ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ಕೋಲಾರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಜ್ಞಾನ ಲೇಖಕ ಎಚ್.ಎ.ಪುರುಷೋತ್ತಮರಾವ್‌ ಮಾತನಾಡಿದರು.
ಡಿವಿಜಿ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ಕೋಲಾರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಜ್ಞಾನ ಲೇಖಕ ಎಚ್.ಎ.ಪುರುಷೋತ್ತಮರಾವ್‌ ಮಾತನಾಡಿದರು.   

ಕೋಲಾರ: ‘ಕವಿ ಡಿ.ವಿ.ಗುಂಡಪ್ಪನವರು (ಡಿವಿಜಿ) ಆಧುನಿಕ ವಿಜ್ಞಾನ ಯುಗದ ಸರ್ವಜ್ಞ’ ಎಂದು ವಿಜ್ಞಾನ ಲೇಖಕ ಎಚ್.ಎ.ಪುರುಷೋತ್ತಮರಾವ್‌ ಬಣ್ಣಿಸಿದರು.

ಡಿವಿಜಿ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ‘12ನೇ ಶತಮಾನದಲ್ಲಿ ಕವಿ ಸರ್ವಜ್ಞ ವಚನ ಕ್ರಾಂತಿ ಮಾಡಿದಂತೆ 20ನೇ ಶತಮಾನದಲ್ಲಿ ಡಿವಿಜಿ ಸರ್ವಜ್ಞರಾಗಿದ್ದರು’ ಎಂದು ಪ್ರತಿಪಾದಿಸಿದರು ಎಂದು ಸ್ಮರಿಸಿದರು.

‘ಡಿವಿಜಿಯವರ ಮಂಕು ತಿಮ್ಮನ ಕಗ್ಗವು ಸಾಹಿತ್ಯ ಕ್ಷೇತ್ರದ ಅರಳಿ ಮರ ಮತ್ತು ಕನ್ನಡದ ಭಗವದ್ಗೀತೆ ಎಂದೇ ಪ್ರಚಲಿತವಾಗಿದೆ. ಆಧುನಿಕ ಜೀವನಕ್ಕೆ ಅಗತ್ಯವಾದ ಸಾರಾಂಶವನ್ನು ಕಗ್ಗವು ಒಳಗೊಂಡಿದೆ. ವಿದ್ಯಾರ್ಥಿಗಳು ಡಿವಿಜಿಯಂತಹ ಮೇರು ಕವಿಗಳ ಇತಿಹಾಸ ತಿಳಿದು ಅವರ ತತ್ವಾದರ್ಶ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಮಾದರಿ ಆಗಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಡಿವಿಜಿ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ದೇವನಹಳ್ಳಿಯಲ್ಲಿ ಜನಿಸಿದರು. ಅವರು ಈ ಜಿಲ್ಲೆಯವರು ಎಂಬುದು ಹೆಮ್ಮೆಯ ಸಂಗತಿ. ಶಿಸ್ತಿಗೆ ಹೆಸರಾದ ಅವರು ಸಾತ್ವಿಕ ವ್ಯಕ್ತಿತ್ವದವರು. ಅವರ ಬದುಕಿನಲ್ಲಿ ಎಂದಿಗೂ ಹಣಕ್ಕೆ ಮಹತ್ವ ನೀಡದೆ ಧನಾತ್ಮಕ ಚಿಂತನೆ ಅಳವಡಿಸಿಕೊಂಡು ಸಮಾಜ ಸುಧಾರಣೆಗೆ ಜೀವನ ಮುಡುಪಾಗಿಟ್ಟರು’ ಎಂದು ವಿವರಿಸಿದರು.

‘ಡಿವಿಜಿ ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣರಾದರೂ ಅವರ ಪ್ರತಿಭಾ ಸಂಪತ್ತು ಶ್ರೀಮಂತವಾಗಿತ್ತು. ಅವರ ಸಾಹಿತ್ಯದಲ್ಲಿ ತತ್ವ, ಸಿದ್ಧಾಂತ, ಪರಂಪರೆ, ಆಧುನಿಕತೆ ಮತ್ತು ವಿಜ್ಞಾನ ಒಳಗೊಂಡ ಸಮನ್ವಯತೆ ಕಾಣಬಹುದು. ಉತ್ತಮ ಶಿಕ್ಷಣ ಪಡೆಯದಿದ್ದರೂ ಅವರ ಪ್ರತಿಭೆ ಶ್ರೀಮಂತಿಕೆಯಿಂದ ಕೊಡಿತ್ತು’ ಎಂದರು.

ದಾರಿದೀಪ: ‘ಡಿವಿಜಿ ಅವರು ಜಗದ ಕವಿ ಮತ್ತು ಯುಗದ ಕವಿ. ಮಂಕು ತಿಮ್ಮನ ಕಗ್ಗವು ಕನ್ನಡ ಸಾರಸ್ವತ ಲೋಕದಲ್ಲಿ ಸಾರ್ವಕಾಲಿಕವಾದ ಮೇರುಕೃತಿ. ಭಗವದ್ಗೀತೆ, ಬೈಬಲ್‌ ಹಾಗೂ ಕುರಾನ್‌ನಂತಿರುವ ಆ ಕೃತಿಯು ಬದುಕಿಗೆ ದಾರಿದೀಪ’ ಎಂದು ತಿಳಿಸಿದರು.

‘ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸಲು ಸಾಹಿತ್ಯದ ಓದು ಅನಿವಾರ್ಯ. ಜ್ಞಾನದ ಮೂಲ ಅಕ್ಷರ. ಜಗತ್ತಿಗೆ ಅನ್ನ ಮತ್ತು ಅಕ್ಷರ ಎಷ್ಟು ಮುಖ್ಯವೊ ಕನ್ನಡ ಸಾಹಿತ್ಯದಲ್ಲಿ ಡಿ.ವಿ.ಗುಂಡಪ್ಪ ಅಷ್ಟೇ ಮುಖ್ಯ. ಅವರು ಜೀವನದಲ್ಲಿ ಕಾಯಕ ಗೌರವ ಸಂಪಾದನೆ ಬಗ್ಗೆ ತಿಳಿಸಿಕೊಟ್ಟರು. ಅವರ ಮಂಕು ತಿಮ್ಮನ ಕಗ್ಗವು ಜೀವನ ಸೂತ್ರವನ್ನು ಒಳಗೊಂಡಿದೆ’ ಎಂದು ವಿವರಿಸಿದರು.

ಪುಣ್ಯವಂತರು: ‘ಕನ್ನಡ ಸಾಹಿತ್ಯ ಪರಂಪರೆ ಅಮೂಲ್ಯವಾದುದು. ಕನ್ನಡಿಗರಾದ ನಾವು ಧನ್ಯರು. ಮಹಾನ್ ನಾಯಕರ, ಶ್ರೇಷ್ಠ ಸಂತರ, ಸಾಹಿತಿಗಳ ನಾಡಿನಲ್ಲಿ ಜನಿಸಿದ ನಾವು ಪುಣ್ಯವಂತರು’ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ಪಿ.ನಾರಾಯಣಪ್ಪ ಹೇಳಿದರು.

‘ಜೀವನದಲ್ಲಿ ಪ್ರತಿಯೊಬ್ಬರೂ ಗುರಿ, ಉದ್ದೇಶ ಈಡೇರಿಸಿಕೊಳ್ಳಲು ಪ್ರಯತ್ನಿಸಬೇಕು. ಬದುಕಿನ ಯಶಸ್ವಿನ ಹಿಂದೆ ಪರಿಶ್ರಮ ಅತ್ಯಗತ್ಯ. ಬಡತನ, ನಿರುದ್ಯೋಗ, ಅಸೂಹೆ, ಕೀಳು ಮನೋಭಾವದಿಂದ ಹೊರಬಂದು ಡಿವಿಜಿಯವರಂತೆ ಬದುಕು ಉಜ್ವಲಗೊಳಿಸಿಕೊಳ್ಳಬೇಕು’ ಎಂದು ಕವಿ ಶರಣಪ್ಪ ಗಬ್ಬೂರ್ ಸಲಹೆ ನೀಡಿದರು.

ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿ ನಾಗರಾಜ, ಶಿಕ್ಷಕರಾದ ಪಿ.ತಿಪ್ಪೇಸ್ವಾಮಿ, ರವಿಕುಮಾರ್, ರಾಜು ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.