ADVERTISEMENT

ಏಕಾದಶಿ: ದೇವಸ್ಥಾನದಲ್ಲಿ ಭಕ್ತರ ದಂಡು

​ಪ್ರಜಾವಾಣಿ ವಾರ್ತೆ
Published 20 ಜುಲೈ 2021, 16:31 IST
Last Updated 20 ಜುಲೈ 2021, 16:31 IST
ಆಷಾಢ ಮಾಸದ ಮೊದಲ ಏಕಾದಶಿ ಹಿನ್ನೆಲೆಯಲ್ಲಿ ಭಕ್ತರು ಕೋಲಾರದ ದೊಡ್ಡಪೇಟೆಯ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ದೇವರ ದರ್ಶನ ಪಡೆದರು
ಆಷಾಢ ಮಾಸದ ಮೊದಲ ಏಕಾದಶಿ ಹಿನ್ನೆಲೆಯಲ್ಲಿ ಭಕ್ತರು ಕೋಲಾರದ ದೊಡ್ಡಪೇಟೆಯ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ದೇವರ ದರ್ಶನ ಪಡೆದರು   

ಕೋಲಾರ: ಕೋವಿಡ್‌ ಆತಂಕದ ನಡುವೆಯೂ ಜಿಲ್ಲೆಯಲ್ಲಿ ಮಂಗಳವಾರ ಆಷಾಢ ಮಾಸದ ಮೊದಲ ಏಕಾದಶಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಏಕಾದಶಿ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ನಡೆಯಿತು. ಮುಂಜಾನೆಯೇ ದೇವಸ್ಥಾನಗಳಿಗೆ ತೆರಳಿದ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನಗಳಲ್ಲಿ ದೇವರ ವಿಗ್ರಹಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಾಲಯ­ಗಳನ್ನು ತೋರಣ, ವಿದ್ಯುತ್ ದೀಪ ಮತ್ತು ಹೂವುಗಳಿಂದ ಸಿಂಗರಿಸಲಾಗಿತ್ತು.

ದೊಡ್ಡಪೇಟೆಯ ವೆಂಕಟರಮಣಸ್ವಾಮಿ, ಕೋಟೆ ಬಡಾವಣೆಯ ಕೋಲಾರಮ್ಮ ದೇವಾಲಯ, ಡೂಂಲೈಟ್‌ ವೃತ್ತದ ಕೆಇಬಿ ಗಣಪತಿ ದೇವಸ್ಥಾನದಲ್ಲಿ ಭಕ್ತರ ದೊಡ್ಡ ದಂಡೇ ಕಂಡುಬಂತು. ದೇವಸ್ಥಾನಗಳ ಬಳಿ ಭಕ್ತರು ದೇವರ ದರ್ಶನಕ್ಕೆ ನಸುಕಿನಿಂದಲೇ ಸಾಲುಗಟ್ಟಿ ನಿಂತಿದ್ದರು. ಬೆಳಿಗ್ಗೆ ಅಭಿಷೇಕ, ಘಂಟಾನಾದ, ಸುಪ್ರಭಾತ, ಗೋಪೂಜೆ ನಡೆಯಿತು. ಮಹಾ ಮಂಗಳಾರತಿ ಬಳಿಕ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.

ADVERTISEMENT

ಮಾರ್ಗಸೂಚಿ ಪಾಲನೆ: ಕೊರೊನಾ ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ಕೋವಿಡ್‌ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಲಾಯಿತು. ಬಹುಪಾಲು ಭಕ್ತರು ಮಾಸ್ಕ್‌ ಧರಿಸಿ ದೇವಸ್ಥಾನಕ್ಕೆ ಬಂದಿದ್ದರು.

ಸಂಘ ಸಂಸ್ಥೆಗಳ ಸದಸ್ಯರು ದೇವಸ್ಥಾನಗಳ ಪ್ರವೇಶ ದ್ವಾರದಲ್ಲಿ ಭಕ್ತರಿಗೆ ಉಚಿತವಾಗಿ ಮಾಸ್ಕ್‌ ವಿತರಿಸಿದರು. ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಲು ಸ್ಯಾನಿಟೈಸರ್‌ನ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಅಂತರ ಕಾಯ್ದುಕೊಂಡು ದೇವರ ದರ್ಶನ ಪಡೆದರು. ದೇವಸ್ಥಾನಗಳ ಬಳಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.