ADVERTISEMENT

10 ಕಡೆ ವಿದ್ಯುತ್ ಉಪಕರಣಗಳ ಕಳವು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2023, 14:30 IST
Last Updated 11 ಡಿಸೆಂಬರ್ 2023, 14:30 IST
ಮುಳಬಾಗಿಲು ತಾಲ್ಲೂಕಿನ ಯಲುವಹಳ್ಳಿ ಗ್ರಾಮದ ರೈತರೊಬ್ಬರ ಕೊಳವೆ ಬಾವಿಗೆ ಅಳವಡಿಸಲಾಗಿದ್ದ ವಿದ್ಯುತ್ ಕೇಬಲ್‌ ಕತ್ತರಿಸಿಕೊಂಡು ಹೋಗಿರುವುದು
ಮುಳಬಾಗಿಲು ತಾಲ್ಲೂಕಿನ ಯಲುವಹಳ್ಳಿ ಗ್ರಾಮದ ರೈತರೊಬ್ಬರ ಕೊಳವೆ ಬಾವಿಗೆ ಅಳವಡಿಸಲಾಗಿದ್ದ ವಿದ್ಯುತ್ ಕೇಬಲ್‌ ಕತ್ತರಿಸಿಕೊಂಡು ಹೋಗಿರುವುದು   

ಮುಳಬಾಗಿಲು: ಭಾನುವಾರ ರಾತ್ರಿ ಯಲುವಹಳ್ಳಿ ಗ್ರಾಮದ ಹತ್ತು ಮಂದಿ ರೈತರ ಕೊಳವೆ ಬಾವಿಗಳಿಗೆ ಅಳವಡಿಸಲಾಗಿದ್ದ ವಿದ್ಯುತ್ ಸಲಕರಣೆಗಳನ್ನು ಕಳ್ಳರು ಕದ್ದೊಯ್ದಿರುವ ಘಟನೆ ನಡೆದಿದೆ.

ತಾಲ್ಲೂಕಿನ ಅಂಬ್ಲಿಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಲುವಹಳ್ಳಿ ಗ್ರಾಮದ ಬೈರಪ್ಪ, ಶ್ರೀನಿವಾಸ್, ಮುನಿಯಪ್ಪ, ರಾಮಚಂದ್ರ, ಸುಬ್ರಮಣಿ, ವೆಂಕಟೇಶಪ್ಪ, ಶ್ರೀನಿವಾಸ್ ಹಾಗೂ ರಮೇಶ್ ಎಂಬುವವರ ತೋಟಗಳ ಬಳಿ ಕೊರೆಸಲಾಗಿದ್ದ ಕೊಳವೆ ಬಾವಿಗಳ ವಿದ್ಯುತ್ ಕೇಬಲ್‌, ಸ್ಟಾರ್ಟರ್, ಪಂಪ್‌ ಮುಂತಾದ ವಿದ್ಯುತ್ ಸಲಕರಣೆಗಳನ್ನು ಕದ್ದು ಪರಾರಿಯಾಗಿದ್ದಾರೆ.

ಕೆಲವು ಕಡೆ ಕೊಳವೆ ಬಾವಿಗಳಿಗೆ ಅಳವಡಿಸಲಾಗಿದ್ದ ವಿದ್ಯುತ್ ಕೇಬಲ್‌ ಕತ್ತರಿಸಿಕೊಂಡು ಹೋಗಿದ್ದರೆ, ಮತ್ತೆ ಕೆಲವು ಕಡೆಗಳಲ್ಲಿ ಸ್ಟಾರ್ಟರ್ ಇಡುವ ಹಾಗೂ ರೈತರು ತಮ್ಮ ಕೃಷಿ ಸಾಮಾನುಗಳನ್ನು ಇಡುವ ಮಿಷನ್ ರೂಮ್‌ ಬಾಗಿಲು ಹೊಡೆದು ಒಳಗಡೆ ಇದ್ದ ಬೆಲೆ ಬಾಳುವ ವಿದ್ಯುತ್ ಉಪಕರಣಗಳನ್ನು ಕಳ್ಳತನ ಮಾಡಿದ್ದಾರೆ.

ADVERTISEMENT

ಇಷ್ಟೇ ಅಲ್ಲದೆ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕೊಳವೆ ಬಾವಿಯ ಕೇಬಲ್‌ ಸಹ ಕತ್ತರಿಸಿಕೊಂಡು ಹೋಗಿದ್ದು, ಬೆಳಿಗ್ಗೆಯಿಂದ ಗ್ರಾಮದಲ್ಲಿ ಕುಡಿಯುವ ನೀರೂ ಬಾರದಂತಾಗಿದೆ. 

15 ದಿನಗಳ ಹಿಂದೆಯೂ ಕಳ್ಳರು ಗ್ರಾಮದ ಕೆಲವು ರೈತರ ವಿದ್ಯುತ್ ಕೇಬಲ್‌ ಕತ್ತರಿಸಿಕೊಂಡು ಹೋಗಿದ್ದರು. ಈ ಸಂಬಂಧ ನಂಗಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿತ್ತು. ಆದರೂ, ಕಳ್ಳತನ ನಿಂತಿಲ್ಲ. ಹಾಗಾಗಿ ಕೂಡಲೇ ಪೊಲೀಸರು ಕಳ್ಳರನ್ನು ಹಿಡಿದು ರೈತರ ಕೊಳವೆ ಬಾವಿಗಳಿಗೆ ರಕ್ಷಣೆ ನೀಡಬೇಕಾಗಿದೆ ಎಂದು ಯಲುವಹಳ್ಳಿ ರೈತ ಪ್ರಭಾಕರ್ ಮನವಿ ಮಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.