ಕೋಲಾರ: ‘ಸಹಕಾರ ಮಹಾಮಂಡಳದಿಂದ ರಾಜ್ಯದೆಲ್ಲೆಡೆ 1 ಸಾವಿರ ಜನೌಷಧ ಮಳಿಗೆ ಸ್ಥಾಪಿಸಲು ನಿರ್ಧರಿಸಿದ್ದು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಮೊದಲ ಆದ್ಯತೆ ನೀಡುತ್ತೇವೆ’ ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು.
ತಾಲ್ಲೂಕಿನ ಅರಹಳ್ಳಿ ಸೊಸೈಟಿ, ಡಿಸಿಸಿ ಬ್ಯಾಂಕ್ ಸಹಯೋಗದಲ್ಲಿ ಅರಹಳ್ಳಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಸಾಲ ವಿತರಿಸಿ ಮಾತನಾಡಿ, ‘ಅವಿಭಜಿತ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಸದೃಢವಾಗಿದ್ದು, ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಡಿಸಿಸಿ ಬ್ಯಾಂಕ್‌ನಡಿ ಸೊಸೈಟಿಗಳು ಬಲಿಷ್ಠವಾಗಿರುವುದರಿಂದ ಅವಳಿ ಜಿಲ್ಲೆಯಲ್ಲಿ ಅತಿ ಹೆಚ್ಚು ಜನೌಷಧ ಮಳಿಗೆ ಸ್ಥಾಪಿಸಲು ನಿರ್ಧರಿಸಲಾಗಿದೆ. ಡಿಸಿಸಿ ಬ್ಯಾಂಕ್ ರಾಜ್ಯದಲ್ಲೇ ಅತಿ ಹೆಚ್ಚು ಮಹಿಳೆಯರು ಮತ್ತು ರೈತರಿಗೆ ಸಾಲ ನೀಡಿದೆ. ಸೊಸೈಟಿಗಳಲ್ಲಿ ವಹಿವಾಟು ಉತ್ತಮವಾಗಿದೆ. ಬ್ಯಾಂಕ್ ಸಾಲ ನೀಡುವುದರ ಜತೆಗೆ ಸಾಮಾಜಿಕ ಕಾಳಜಿಯ ಜನೌಷಧ ಮಳಿಗೆಗಳ ಸ್ಥಾಪನೆಗೂ ನೆರವಾಗಲಿದೆ’ ಎಂದರು.
‘ನಿರುದ್ಯೋಗಿ ಯುವಕರಿಗೆ ಮತ್ತು ಫಾರ್ಮಸಿಸ್ಟ್ ಶಿಕ್ಷಣ ಪಡೆದವರಿಗೆ ಜನೌಷಧ ಮಳಿಗೆ ತೆರೆಯಲು ಅವಕಾಶ ನೀಡಲಾಗುವುದು. ಇದರಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ ಸಿಗಲಿದೆ. ಔಷಧಗಳು ಕಡಿಮೆ ದರಕ್ಕೆ ಸಿಗುವುದರಿಂದ ಬಡವರ ಸೇವೆ ಮಾಡಿದಂತೆಯೂ ಆಗಲಿದೆ’ ಎಂದು ಅಭಿಪ್ರಾಯಪಟ್ಟರು.
ಟೀಕೆಗೆ ಉತ್ತರ: ‘ದಿವಾಳಿಯಾಗಿದ್ದ ಬ್ಯಾಂಕ್ ಇಂದು ರೈತರು, ಮಹಿಳೆಯರ ಆರ್ಥಿಕ ಪ್ರಗತಿಗೆ ದುಡಿಯುವ ಶಕ್ತಿ ಗಳಿಸುವಂತೆ ಮಾಡಿದ್ದರೂ ಟೀಕೆ ಕೇಳಿ ಬರುತ್ತಿವೆ. ನಾವು ಜನಪರ ಕೆಲಸದ ಮೂಲಕವೇ ಟೀಕೆಗೆ ಉತ್ತರ ಕೊಡುತ್ತೇವೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಹೇಳಿದರು.
‘ಬ್ಯಾಂಕ್‌ನ ಜತೆಗೆ ಎರಡೂ ಜಿಲ್ಲೆಗಳ ಎಲ್ಲಾ ಸೊಸೈಟಿಗಳನ್ನು ಗಣಕೀಕರಣ ಮಾಡಲಾಗಿದೆ. ಮೈಕ್ರೋ ಎಟಿಎಂ ಸೇವೆ ಜಾರಿಗೆ ತರಲಾಗಿದೆ. ಮಹಿಳೆಯರು, ರೈತರ ಹಣಕ್ಕೆ ಖಾತ್ರಿ ನೀಡಲಾಗಿದೆ. ಪಾರದರ್ಶಕ ಆಡಳಿತಕ್ಕೆ ಒತ್ತು ಕೊಟ್ಟಿದ್ದೇವೆ. ಆದರೂ ಕೆಲವರಿಗೆ ಬ್ಯಾಂಕ್ ವಿರುದ್ಧ ಟೀಕೆ ಮಾಡುವುದೇ ಕೆಲಸವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮನೆ ಮಾತಾಗಿದೆ: ‘ಕೋವಿಡ್ ಸಮಯದಲ್ಲಿ ಹೆಚ್ಚು ಜನರನ್ನು ಒಂದೆಡೆ ಸೇರಿಸಬಾರದು ಎಂಬ ನಿಯಮ ಮತ್ತು ಗ್ರಾ.ಪಂ ಚುನಾವಣಾ ನೀತಿ ಸಂಹಿತೆ ಕಾರಣಕ್ಕೆ ಸಾಲ ವಿತರಣೆ ವಿಳಂಬವಾಗಿದೆ. ಮುಂದೆ ಇಂತಹ ಸಮಸ್ಯೆಗೆ ಅವಕಾಶ ನೀಡುವುದಿಲ್ಲ’ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮಣ್ಣ ಹೇಳಿದರು.
‘ಅವಳಿ ಜಿಲ್ಲೆಯ ಜನರ ಮನಸ್ಸಿನಿಂದಲೇ ಮರೆಯಾಗಿದ್ದ ಡಿಸಿಸಿ ಬ್ಯಾಂಕ್ ಇಂದು ಮನೆ ಮಾತಾಗಿದೆ, ಪ್ರತಿ ಕುಟುಂಬಕ್ಕೂ ಸಾಲ ನೀಡುವ ಆಶಯದೊಂದಿಗೆ ಆಡಳಿತ ಮಂಡಳಿ ಕೆಲಸ ಮಾಡುತ್ತಿದೆ. ಮಹಿಳೆಯರ ಆರ್ಥಿಕ ಪ್ರಗತಿಗೆ ನೆರವಾಗುತ್ತಿದ್ದೇವೆ’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ₹ 3.42 ಕೋಟಿ ಸಾಲ ವಿತರಿಸಲಾಯಿತು. ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್, ಅರಹಳ್ಳಿ ಸೊಸೈಟಿ ಅಧ್ಯಕ್ಷ ವೆಂಕಟೇಶಪ್ಪ, ನಿರ್ದೇಶಕರಾದ ಬಾಬುಮೌನಿ, ಚಲಪತಿ, ಲಕ್ಷ್ಮಮ್ಮ, ರೂಪಾ, ಮಾಜಿ ಅಧ್ಯಕ್ಷ ಕೃಷ್ಣಪ್ಪ, ಸಿಇಒ ಹರೀಶ್ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.