ಕೆಜಿಎಫ್: ಬೆಣಚು ಕಲ್ಲು ಮಿಶ್ರಿತ ಕೆಂಪು ಮಣ್ಣು ಹೊಂದಿರುವ ನಗರದ ಬಂಗಾರದ ಗಣಿ ಪ್ರದೇಶಕ್ಕೆ ಹಲವು ದಿನಗಳಿಂದ ಯೂರೋಪಿಯನ್ ಬೀ ಈಟರ್ ಹಕ್ಕಿಗಳನ್ನು ಹುಡುಕಿಕೊಂಡು ವಿವಿಧ ಪ್ರದೇಶಗಳ ಪಕ್ಷಿ ಪ್ರಿಯರು ಇಲ್ಲಿಗೆ ಬರುತ್ತಿದ್ದಾರೆ.
ಹಕ್ಕಿಗಳನ್ನು ಸೆರೆಹಿಡಿಯಲು ಅವರು ತಮ್ಮ ಬಳಿ ಬೃಹತ್ ಮತ್ತು ಉತ್ತಮ ತಂತ್ರಾಂಶದ ಕ್ಯಾಮೆರಾಗಳನ್ನು ಹೊಂದಿದ್ದು, ಸುತ್ತಮುತ್ತಲಿನ ಜನರನ್ನು ಪ್ರವಾಸಿಗರು ಕುತೂಹಲದಿಂದ ನೋಡುತ್ತಿದ್ದಾರೆ. ಮಹಾತ್ಮ ಗಾಂಧೀಜಿ ಜಯಂತಿ ಪ್ರಯುಕ್ತ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ರಜೆ ಇರುವ ಕಾರಣ ಹಲವರು ಕಾರು ಮತ್ತು ಮತ್ತು ಬೈಕ್‌ಗಳಲ್ಲಿ ಬೀ ಈಟರ್ ಪಕ್ಷಿಗಳನ್ನು ಸೆರೆಹಿಡಿಯಲು ಹೊರಟಿರುವುದು ಕೆಲವು ಕಡೆಗಳಲ್ಲಿ ಕಂಡುಬಂದಿತು. ಈ ವೇಳೆ ವಿದ್ಯುತ್ ತಂತಿಗಳು ಸೇರಿದಂತೆ ಇನ್ನಿತರ ಕಡೆಗಳಲ್ಲಿ ಕುಳಿತುಕೊಂಡಿರುವ ಬೀ ಈಟರ್ ಪಕ್ಷಿಗಳನ್ನು ಸೆರೆಹಿಡಿಯುವ ಕಸರತ್ತನ್ನು ಪ್ರವಾಸಿಗರು ಮಾಡಿದರು.
ಬೀ ಈಟರ್ ಪಕ್ಷಿಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿಯಲು ದೂರದ ಮುಂಬೈನಿಂದ ಬಂದಿದ್ದ ಮಹಿಳೆಯೊಬ್ಬರು, ತಮ್ಮ ಮಗಳಿಗೆ ಹಕ್ಕಿಗಳ ಚಲನವಲನಗಳ ಕುರಿತು ಹೇಳಿಕೊಡುತ್ತಿದ್ದದ್ದು ಕಂಡುಬಂದಿತು. ಇತರ ಪೋಷಕರು ಸಹ ತಮ್ಮ ಮಕ್ಕಳನ್ನು ಕರೆದುಕೊಂಡು ಬೆಟ್ಟ ಮತ್ತು ಗುಡ್ಡಗಳನ್ನು ಅಲೆದಾಡುತ್ತಿದ್ದ ದೃಶ್ಯಾವಳಿಗಳು ಸಾಮಾನ್ಯವಾಗಿದ್ದವು.
ಯೂರೋಪ್ ಖಂಡದ ಬೀ ಈಟರ್ ಪಕ್ಷಿಯು ಸಾಮಾನ್ಯವಾಗಿ ಕುರುಚಲು ಪ್ರದೇಶದ ಬಯಲು ತಪ್ಪಲನ್ನು ಬಯಸುತ್ತದೆ. ಚಳಿಗಾಲದ ಅವಧಿಯಲ್ಲಿ ಯೂರೋಪ್‌ನ ಚಳಿ ತಡೆಯಲಾರದೆ ಈ ಪಕ್ಷಿಗಳು ಭಾರತಕ್ಕೆ ಬರುತ್ತವೆ. ಸಣ್ಣ ಹುಳುಗಳನ್ನು ತಿಂದು ಜೀವಿಸುವ ಈ ಹಕ್ಕಿಗಳು ಆಗಾಗ್ಗೆ ವಾಸಸ್ಥಳ ಬದಲಾಯಿಸುತ್ತಿರುತ್ತವೆ. ಈಚೆಗೆ ಇವು ಕೆಜಿಎಫ್ ಸುತ್ತಮುತ್ತಲಿನ ಪ್ರದೇಶಗಳನ್ನು ತಮ್ಮ ವಾಸಸ್ಥಾನಕ್ಕೆ ಆಯ್ಕೆ ಮಾಡಿಕೊಂಡಿವೆ ಎಂದು ಪಕ್ಷಿ ಪ್ರಿಯ ಫೋಟೊಗ್ರಾಫರ್ ಶಂಕರ್ ಹೇಳುತ್ತಾರೆ.
ಬೆಂಗಳೂರಿನ ಹೊರವಲಯದಲ್ಲಿ ಇತ್ತೀಚಿನ ವರ್ಷದವರೆಗೆ ಬೀ ಈಟರ್ ಪಕ್ಷಿ ಕಾಣುತ್ತಿತ್ತು. ಆದರೆ, ಅನಿಯಂತ್ರಿತ ವಾಹನ ದಟ್ಟಣೆ ಮತ್ತು ಕಲುಷಿತ ಗಾಳಿಯಿಂದಾಗಿ ಅಲ್ಲಿನ ವಾತಾವರಣ ಅವುಗಳಿಗೆ ಇಷ್ಟವಾಗದ ಕಾರಣ ಅವುಗಳು ಈಗ ಬೆಂಗಳೂರು ಬಿಟ್ಟು ಬೇರೆ ಸ್ಥಳ ಆಯ್ಕೆ ಮಾಡಿಕೊಂಡಿವೆ. ಆಕರ್ಷಕ ಬಣ್ಣ ಹೊಂದಿರುವ ಈ ಹಕ್ಕಿಗಳು ಸ್ವಲ್ಪ ದಿನ ಮಾತ್ರ ಇಲ್ಲಿದ್ದು, ನಂತರ ಗುಜರಾತ್ ಮೂಲಕ ಆಫ್ರಿಕಾ ಖಂಡಕ್ಕೆ ಹೋಗುತ್ತವೆ. ಅಲ್ಲಿಂದ ಪುನಃ ಯೂರೋಪ್ ತಲುಪತ್ತವೆ ಎಂದು ಬೆಂಗಳೂರು ಮೂಲದ ಹವ್ಯಾಸಿ ಛಾಯಾಗ್ರಾಹಕ ಗುರುದತ್ ಮಾಹಿತಿ ನೀಡಿದರು.
ತಾಲ್ಲೂಕಿನ ಬೇತಮಂಗಲ ಜಲಾಶಯ, ಕೃಷ್ಣಮೃಗಗಳು ವಾಸ ಮಾಡುತ್ತಿರುವ ಬಿಜಿಎಂಎಲ್ ಪ್ರದೇಶ ಮತ್ತು ಐಸಂದ್ರ ಮಿಟ್ಟೂರು ಗ್ರಾಮದ ಬಳಿ ಆಗಾಗ್ಗೆ ವಿದೇಶಿ ಹಕ್ಕಿಗಳು ಕಾಣಸಿಗುತ್ತವೆ. ಈಗ ಬಂದಿರುವ ಬೀ ಈಟರ್ ಹೊಸದಾಗಿ ವಲಸೆ ಸ್ಥಳ ಆಯ್ದುಕೊಂಡಿವೆ. ಮುಂದಿನ ದಿನಗಳಲ್ಲಿ ಈ ಪ್ರದೇಶದ ಪರಿಸರದಲ್ಲಿ ವ್ಯತ್ಯಾಸವಾದರೆ ಅವುಗಳು ಬೇರೆ ಜಾಗ ಹುಡುಕಿಕೊಂಡು ಹೋಗುತ್ತವೆ ಎಂದು ಹಿರಿಯ ಫೋಟೋಗ್ರಾಫರ್ ಒಬ್ಬರು ತಿಳಿಸಿದರು.
ಬಂಗಾರದ ಗಣಿ ಎಂದು ಗುರುತಿಸಲ್ಪಟ್ಟಿರುವ ಈ ಪ್ರದೇಶದ ಬಹುತೇಕ ಜಾಗವನ್ನು ಕೈಗಾರಿಕೆ ಅಭಿವೃದ್ಧಿ ಮಂಡಳಿಗೆ ನೀಡಲಾಗಿದೆ. ಇದರಿಂದಾಗಿ ಬಿಜಿಎಂಎಲ್ ಮತ್ತು ಬೆಮಲ್ ಬೆಳೆಸಿದ್ದ ನೀಲಗಿರಿ ಮರಗಳನ್ನು ಈಚೆಗೆ ಕತ್ತರಿಸಲಾಗಿದೆ. ದಟ್ಟವಾದ ನೀಲಗಿರಿ ತೋಪಿನಲ್ಲಿ ಆಶ್ರಯ ಪಡೆಯುತ್ತಿದ್ದ ಬೀ ಈಟರ್‌ಗಳು ಈಗ ಅಲ್ಲಲ್ಲಿ ಇರುವ ನೀಲಗಿರಿ ಮರಗಳನ್ನೇ ಆಶ್ರಯಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.