ಬಂಗಾರಪೇಟೆ: ಲಾಭದಾಯಕ ಕೃಷಿ ಎಂದು ಚೆಂಡು ಹೂ ಬೆಳೆದ ರೈತರು ದಿಢೀರ್ ಬೆಲೆ ಕುಸಿತದಿಂದ ಕಂಗಾಲಾಗಿದ್ದು, ಬೆಳೆದ ಹೂವುಗಳನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದರು.
ಚೆಂಡು ಹೂವಿಗೆ ಏಕಾಏಕಿ ಬೆಲೆ ಕುಸಿದ ಹಿನ್ನೆಲೆ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಹತ್ತಾರು ಎಕರೆ ಪ್ರದೇಶದಲ್ಲಿ ಹೂವು ಬೆಳೆದ ಅನ್ನದಾತರೀಗ ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ.
ಸಾಲು ಸಾಲು ಹಬ್ಬಗಳು ಮುಗಿದ ಬಳಿಕ ಹೂವುಗಳನ್ನು ಕೇಳುವವರೇ ಇಲ್ಲದ ಕಾರಣ ತೀವ್ರ ಬೆಲೆ ಕುಸಿತವಾಗಿದೆ. ನವರಾತ್ರಿ ಮತ್ತು ದಸರಾ ಸಂದರ್ಭದಲ್ಲಿ ಚಂಡು ಹೂವುಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಅಧಿಕ ಆದಾಯ ಗಳಿಸಬಹುದು ಎಂದು ರೈತರು ಹೆಚ್ಚಿನ ಪ್ರಮಾಣದಲ್ಲಿ ಚೆಂಡು ಹೂವುಗಳನ್ನು ಬೆಳೆದಿದ್ದಾರೆ. ಆದರೆ, ಹೆಚ್ಚಿನ ರೈತರು ಚೆಂಡು ಹೂ ಬೆಳೆದಿದ್ದರಿಂದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಹೂವುಗಳು ಬರುತ್ತಿವೆ. ಅಲ್ಲದೇ ಹಬ್ಬಗಳೂ ಮುಗಿದ ಕಾರಣ ಬೇಡಿಕೆ ಹಾಗೂ ಬೆಲೆ ಎರಡೂ ಕಡಿಮೆಯಾಗಿದೆ.
ನಾಲ್ಕು ಎಕರೆಯಲ್ಲಿ ಹೂ ಬೆಳೆದ ನೆರ್ನಹಳ್ಳಿಯ ರೈತ ನಾರಾಯಣಪ್ಪ, ಸುಮಾರು 1 ಎಕರೆ ಪ್ರದೇಶದಲ್ಲಿ ಒಂದು ಸಸಿಗೆ ₹ 4 ನೀಡಿ ಎಕರೆಗೆ ಸುಮಾರು ₹ 50 ಸಾವಿರ ಖರ್ಚು ಮಾಡಿ ಹೂ ಬೆಳೆಯಲಾಗಿದೆ. ಆದರೆ ಈಗಾಗಲೇ ಚೆಂಡು ಹೂವಿನ ಬೆಳೆ ಕಟಾವಿಗೆ ಬಂದು 15 ದಿನ ಕಳೆದರೂ ಮಾರುಕಟ್ಟೆಯಲ್ಲಿ ಕೇಳುವವರಿಲ್ಲ, ಮಾರುಕಟ್ಟೆಗೆ ಹೋದರೆ ಕೆಜಿಗೆ ₹ 10 ಸಿಗುತ್ತದೆ. 500 ಕೆಜಿ ಚೆಂಡು ಹೂ ತೆಗೆದುಕೊಂಡು ಹೋದರೆ ಕೆಜಿಗೆ ₹ 10ರಂತೆ ಮಾರುಕಟ್ಟೆಯ ಕಮಿಷನ್ ಕಳೆದು ₹ 400 ಮಾತ್ರ ಸಿಗುತ್ತದೆ. ಇಲ್ಲಿಂದ ಚೆಂಡು ಹೂ ತೆಗೆದುಕೊಂಡು ಮಾರುಕಟ್ಟೆಗೆ ಹೋಗಲು ಆಟೊಗೆ ₹ 500 ಖರ್ಚಾಗುತ್ತದೆ ಎಂದು ಬೇಸರ ಹಂಚಿಕೊಂಡರು.
ಇದರಿಂದ ಬೇಸತ್ತ ರೈತರು ಹೂವನ್ನು ತೋಟದಲ್ಲೇ ಬಿಡುತ್ತಿದ್ದಾರೆ. ಹೂವಿನ ಫಸಲು ಬಹಳ ಚೆನ್ನಾಗಿ ಬಂದಿತ್ತು. ಆದರೆ ಬೆಲೆ ಇಲ್ಲದ ಕಾರಣ ಕಟಾವು ಕೂಡ ಮಾಡದೇ, ತೋಟಗಳಲ್ಲಿಯೇ ಹೂವುಗಳು ಉದುರಿ ನೆಲ ಕಚ್ಚುತ್ತಿವೆ. ರೈತರ ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಸರ್ಕಾರ ನೆರವಿಗೆ ಬರದೇ ಇರುವುದು ದುರದೃಷ್ಟ ಎಂದು ನಾರಾಯಣಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ತೋಟಗಾರಿಕೆ ಮತ್ತು ಕೃಷಿ ಇಲಾಖೆ ಕೂಡಲೇ ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರಬೇಕು. ಚೆಂಡು ಹೂ ಬೆಳೆಗಾರರು ಹಾಕಿರುವ ಬಂಡವಾಳ ಹಾಗೂ ಶ್ರಮಕ್ಕೆ ಸೂಕ್ತ ಪರಿಹಾರ ನೀಡಬೇಕು. ಇಲ್ಲವಾದರೆ ರೈತರ ಪರವಾಗಿ ರೈತ ಸಂಘಟನೆ ಹೋರಾಟ ಮಾಡಲಿದೆ.–ಅಪ್ಪೋಜಿರಾವ್, ರೈತ ಸಂಘದ ತಾಲ್ಲೂಕು ಅಧ್ಯಕ್ಷ
ಮಾರುಕಟ್ಟೆಯಲ್ಲಿ ಚೆಂಡು ಹೂವು ಕೆಜಿಗೆ ₹ 10ರಂತೆ ಮಾರಾಟವಾಗುತ್ತಿದೆ. ರೈತರು ಹೂ ಬೆಳೆಯಲು ಹಾಕಿದ ಬಂಡವಾಳವಿರಲಿ, ಹೂ ಕೀಳಲು ಕೊಡಬೇಕಾದ ಕೂಲಿಯ ಹಣವೂ ಸಿಗದೇ ಕಂಗಾಲಾಗಿದ್ದಾರೆ. ಆದ್ದರಿಂದ ಹೂವು ಬೆಳೆಗಾರರ ಹಿತ ದೃಷ್ಟಿಯಿಂದ ಪರಿಹಾರ ನೀಡಬೇಕು–ಹುಣಸನಹಳ್ಳಿ ವೆಂಕಟೇಶ, ದಲಿತ ರೈತ ಸೇನೆಯ ರಾಜ್ಯಾಧ್ಯಕ್ಷ
ದಸರಾ-ದೀಪಾವಳಿ ಸಂದರ್ಭದಲ್ಲಿ ಚೆಂಡು ಹೂ ಪ್ರತಿ ಕೇಜಿಗೆ ₹150ರಿಂದ 200ವರೆಗೆ ಮಾರಾಟವಾಗಿತ್ತು. ಈಗ ಬೆಲೆ ಕುಸಿದಿದ್ದು, ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಈ ಬಗ್ಗೆ ಮೇಲಿನ ಅಧಿಕಾರಿಗಳ ಗಮನಕ್ಕೆ ತರಲಾಗುವುದು.–ಶಿವಾರೆಡ್ಡಿ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.