ADVERTISEMENT

ಬಂಗಾರಪೇಟೆ: ಬರದ ನಾಡಿನ ರೈತನ ಕೈಹಿಡಿದ ‘ಡ್ರ್ಯಾಗನ್ ಫ್ರೂಟ್‌’

ಮಂಜುನಾಥ್ ಎಸ್.
Published 17 ಜುಲೈ 2024, 5:49 IST
Last Updated 17 ಜುಲೈ 2024, 5:49 IST
<div class="paragraphs"><p>ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಹೋಬಳಿಯ ಚಿನ್ನಯ್ಯ ಎಸ್ಟೇಟ್ ನಲ್ಲಿ ಬೆಳೆದಿರುವ ಡ್ರ್ಯಾಗನ್ ಪೋರ್ಟ್ ನ ಬೆಳೆ</p></div>

ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಹೋಬಳಿಯ ಚಿನ್ನಯ್ಯ ಎಸ್ಟೇಟ್ ನಲ್ಲಿ ಬೆಳೆದಿರುವ ಡ್ರ್ಯಾಗನ್ ಪೋರ್ಟ್ ನ ಬೆಳೆ

   

ಬಂಗಾರಪೇಟೆ: ಕೃಷಿಯಲ್ಲಿ ಲಾಭವಿಲ್ಲ ಎಂದು ಇದ್ದ ಹೊಲ–ಗದ್ದೆ ಮಾರಿ ಪಟ್ಟಣ ಸೇರುವವರೇ ಹೆಚ್ಚು. ಅದರಲ್ಲೂ ಬರದ ನಾಡಿನಲ್ಲಿ ಕೃಷಿ ಮಾಡಲು ಬಹುತೇಕರು ಹಿಂದೇಟು ಹಾಕುತ್ತಾರೆ. ಆದರೆ, ಅದಕ್ಕೆ ಅಪವಾದ ಎಂಬಂತಿದ್ದಾರೆ ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಗ್ರಾಮದ ರೈತ ಜೆ.ಸಿ.ಬಿ. ನಾರಾಯಣಪ್ಪ.

ತಮ್ಮ ಎರಡು ಎಕರೆ ಜಮೀನಿನಲ್ಲಿ ವಿದೇಶಿ ಹಣ್ಣು ಡ್ರ್ಯಾಗನ್ ಫ್ರೂಟ್ ಬೆಳೆದಿರುವ ಅವರು ವರ್ಷಕ್ಕೆ ₹ 15ರಿಂದ ₹ 16 ಲಕ್ಷ ಲಾಭ ಪಡೆದಿದ್ದಾರೆ.

ADVERTISEMENT

ಎರಡು ಎಕರೆಯಲ್ಲಿ ಮೂರು ಸಾವಿರ ಡ್ರ್ಯಾಗನ್ ಫ್ರೂಟ್ ಸಸಿಗಳನ್ನು ನಾಟಿ ಮಾಡಲಾಗಿದೆ. ರಾಜ್ಯದ ಬೆಂಗಳೂರು, ಮಂಗಳೂರು, ವಿಜಯಪುರ ಅಲ್ಲದೇ, ನೆರೆಯ ತೆಲಂಗಾಣದ ಹೈದರಾಬಾದ್‌, ಮಹಾರಾಷ್ಟ್ರದ ಸಾಂಗ್ಲಿ ಹಾಗೂ ಕೊಲ್ಲಾಪುರಕ್ಕೆ ಹಣ್ಣುಗಳನ್ನು ಪೂರೈಸುತ್ತಿದ್ದಾರೆ.

ಒಂದು ಕೆ.ಜಿ ಹಣ್ಣಿಗೆ ₹ 100ರಿಂದ ₹ 200ರವರೆಗೆ ಮಾರುಕಟ್ಟೆ ದರ ಇದೆ. ಕೆಲವೊಮ್ಮೆ ಬೇಡಿಕೆಗೆ ತಕ್ಕಂತೆ ದರದಲ್ಲಿ ಏರುಪೇರು ಇರುತ್ತದೆ. ಡ್ರ್ಯಾಗನ್ ಫ್ರೂಟ್ ಬೆಳೆಗೆ ರೋಗಬಾಧೆ ಕಡಿಮೆ. ಕೃಷಿಗೆ ನೀರಿನ ಬಳಕೆಯ ಪ್ರಮಾಣವೂ ಕಡಿಮೆ. ಕೀಟನಾಶಕಗಳ ಬಳಕೆಯೂ ಅಗತ್ಯವಿಲ್ಲ.  ಹಾಗಾಗಿ, ಈ ಬೆಳೆ ನೀರಿಲ್ಲದ ಬರದ ನಾಡಿನ ರೈತರಿಗೆ ವರವಾಗಿದೆ ಎನ್ನುತ್ತಾರೆ ನಾರಾಯಣಪ್ಪ.

ಈ ಬೆಳೆಯಲ್ಲಿ ಖರ್ಚು ಕಡಿಮೆ ಇದೆ. ಜತೆಗೆ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ನಮ್ಮ ಕೊಟ್ಟಿಗೆಯಲ್ಲೇ ತಯಾರಾಗುವ ಸಾವಯವ ಗೊಬ್ಬರ ಬಳಸುತ್ತೇವೆ. ಅದರಲ್ಲೂ ಕೃಷಿಯ ತ್ಯಾಜ್ಯಗಳನ್ನು ಒಂದೆಡೆ ಸೇರಿಸಿ ಅದರಲ್ಲಿ ಎರೆಹುಳು ಬಿಡುತ್ತೇವೆ. ಹೀಗೆ 40 ದಿನಗಳಲ್ಲಿ ಎರೆಹುಳು ಗೊಬ್ಬರದಲ್ಲಿ ಬೆಳೆಗೆ ಬೇಕಾದ ಪೌಷ್ಟಿಕಾಂಶ ಸಿಗುತ್ತದೆ. ಇದನ್ನು ಬೆಳೆಸಿ ಡ್ರ್ಯಾಗನ್ ಫ್ರೂಟ್ ಬೆಳೆಯುತ್ತೇನೆ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ ಅವರು.

ಡ್ರ್ಯಾಗನ್ ಫ್ರೂಟ್‌ನಲ್ಲಿ ದಟ್ಟ ಗುಲಾಬಿ ಹಾಗೂ ಬಿಳಿ ಹಣ್ಣಿನ ಎರಡು ತಳಿಗಳಿವೆ. ಇದರಲ್ಲಿ ದಟ್ಟ ಗುಲಾಬಿ ಬಣ್ಣದ ಡ್ರ್ಯಾಗನ್ ಫ್ರೂಟ್‌ಗೆ ಬೆಲೆ ಹೆಚ್ಚು. ಕೆಲವರು ಇದನ್ನು ಕೆಂಪು ಡ್ರ್ಯಾಗನ್ ಫ್ರೂಟ್ ಎಂದೂ ಕರೆಯುತ್ತಾರೆ. ಇದಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದೆ. ಇದು ಆರೋಗ್ಯಕ್ಕೂ ಉತ್ತಮ ಎನ್ನುತ್ತಾರೆ ಬಲ್ಲವರು.

ನಾಟಿ ಮಾಡಿದ ಎರಡು ವರ್ಷಕ್ಕೆ ಈ ಬೆಳೆ ಫಲ ಕೊಡುತ್ತದೆ. ಒಂದು ಗಿಡದಲ್ಲಿ ಪ್ರತಿ ಕಟಾವಿಗೆ ಕನಿಷ್ಠ 50ರಿಂದ 70 ಹಣ್ಣುಗಳು ದೊರೆಯುತ್ತವೆ. ವರ್ಷದಿಂದ ವರ್ಷಕ್ಕೆ ನಿರ್ವಹಣೆ ಕಡಿಮೆ, ಲಾಭ ದುಪ್ಪಟಾಗುತ್ತದೆ ಎಂದು ತಮ್ಮ ಅನುಭವ ಬಿಚ್ಚಿಡುತ್ತಾರೆ ನಾರಾಯಣಪ್ಪ.

ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಹೋಬಳಿಯ ಚಿನ್ನಯ್ಯ ಎಸ್ಟೇಟ್ ನಲ್ಲಿ ಬೆಳೆದಿರುವ ಡ್ರ್ಯಾಗನ್ ಪೋರ್ಟ್ ನ ರಾಶಿ
ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಹೋಬಳಿಯ ಚಿನ್ನಯ್ಯ ಎಸ್ಟೇಟ್ ನಲ್ಲಿ ಬೆಳೆದಿರುವ ಡ್ರ್ಯಾಗನ್ ಪೋರ್ಟ್ ನ ಬೆಳೆ
ಬರದ ನಾಡಿನಲ್ಲಿ ಕಡಿಮೆ ನೀರಿನಲ್ಲಿ ಲಾಭದಾಯಕವಾಗಿ ಬೆಳೆಯಬಹುದಾದ ಬೆಳೆ ಡ್ರ್ಯಾಗನ್ ಫ್ರೂಟ್. ಆಸಕ್ತಿ ವಹಿಸಿ ಕೃಷಿ ಮಾಡಿದರೆ ಈ ಬೆಳೆಯಲ್ಲಿ ಖರ್ಚು ಕನಿಷ್ಠ ಲಾಭ ಗರಿಷ್ಠ.
-ಜೆ.ಸಿ.ಬಿ. ನಾರಾಯಣಪ್ಪ, ಡ್ರ್ಯಾಗನ್ ಫ್ರೂಟ್ ಬೆಳೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.