ಬಂಗಾರಪೇಟೆ: ಬರದಿಂದ ತತ್ತರಿಸಿರುವ ಹೈನೋದ್ಯಮ ರಕ್ಷಣೆಗೆ ಹಸಿರು ಮೇವು ಹಾಗೂ ಸಬ್ಸಿಡಿ ದರದಲ್ಲಿ ಪಶು ಆಹಾರ ವಿತರಣೆ ಮಾಡಿ ಪ್ರತಿ ಲೀಟರ್ ಹಾಲಿಗೆ ₹50 ದರ ನಿಗದಿಪಡಿಸಬೇಕು ಎಂದು ರೈತ ಸಂಘದವರು ನಗರದ ಅಂಬೇಡ್ಕರ್ ಪ್ರತಿಮೆ ಮುಂಭಾಗ ಒತ್ತಾಯಿಸಿದರು.
ದಿನೇ ದಿನೇ ಮೇವಿನ ಸಮಸ್ಯೆ ಹೆಚ್ಚಾಗುತ್ತಿದ್ದು, ಹಾಲಿನ ಇಳುವರಿ ಕಡಿಮೆಯಾಗುತ್ತಿದೆ. ಆದರೂ ಸಹ ಒಕ್ಕೂಟ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ರೈತ ಸಂಘದ ರಾಜ್ಯ ಉಪಾಧಕ್ಷ ಕೆ.ನಾರಾಯಣಗೌಡ ಅಸಮಾಧಾನ ವ್ಯಕ್ತಪಡಿಸಿದರು.
ದಿನೇ ದಿನೇ ತಾಪಮಾನ ಹೆಚ್ಚಾಗುತ್ತಿದ್ದು, ಹಸುಗಳನ್ನು ಕಟ್ಟಿ ಹಾಕಿ ಮೇವು ಹಾಕಲು ಸಾಧ್ಯವಾಗದಂತಹ ಪರಿಸ್ಥಿತಿ ರೈತರಿಗೆ ಎದುರಾಗಿದೆ. ಹಾಗಾಗಿ ಜಾನುವಾರುಗಳು ಚೇತರಿಸಿಕೊಳ್ಳಬೇಕಾದರೆ ಹಸಿರು ಮೇವು ಹಾಗೂ ಗುಣಮಟ್ಟದ ಪಶು ಆಹಾರ ಕಡಿಮೆ ಬೆಲೆ ಸಿಗಬೇಕಾದೆ ಎಂದರು.
ಮರಗಲ್ ಶ್ರೀನಿವಾಸ್ ಮಾತನಾಡಿ, ಪಶು ಆಹಾರ ಇಳಿಕೆ ಮಾಡಿ ಇಲ್ಲವೇ ಸಬ್ಸಿಡಿ ದರದಲ್ಲಿ ರೈತರಿಗೆ ಒಕ್ಕೂಟದಿಂದಲೇ ವಿತರಣೆ ಮಾಡಿದರೆ ರೈತರು ತುಸು ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಜತೆಗೆ ಪ್ರತಿ ಲೀಟರ್ ಹಾಲಿಗೆ ಕನಿಷ್ಠ ₹50 ನಿಗದಿಪಡಿಸಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಒತ್ತಾಯಿಸಿದರು.
ಸಭೆಯಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಯಾರಂಘಟ್ಟ ಗಿರೀಶ್, ಮಂಗಮ್ಮ ತಿಮ್ಮಣ್ಣ, ಶೋಭಾ, ಚಾಂದ್ ಪಾಷಾ, ಕಿರಣ್, ಗಿರೀಶ್, ಮಂಗಮ್ಮ, ರತ್ಮಮ್ಮ ನಾಗರತ್ಮ, ಶೈಲಜಾ ಮುಂತಾದವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.