ADVERTISEMENT

ಮುಳಬಾಗಿಲು | ಜಾನುವಾರುಗಳಿಗೆ ಮೇವಿನ ಕೊರತೆ: ಆಂಧ್ರದ ಮೊರೆ

ಕೆ.ತ್ಯಾಗರಾಜ್ ಎನ್.ಕೊತ್ತೂರು.
Published 15 ಫೆಬ್ರುವರಿ 2024, 6:06 IST
Last Updated 15 ಫೆಬ್ರುವರಿ 2024, 6:06 IST
ಮಾಲೂರು ತಾಲ್ಲೂಕಿನಲ್ಲಿ ನಂಗಲಿಯಲ್ಲಿ  ಮೇವಿನ ಕೊರತೆ ಏರ್ಪಟ್ಟಿದ್ದು ನೆರೆಯ ಆಂಧ್ರಪ್ರದೇಶ ವ್ಯಾಪಾರಿಗಳು ಲಾರಿಯಲ್ಲಿ ಹುಲ್ಲು ಮಾರಾಟಕ್ಕೆ ಇಟ್ಟಿರುವುದು
ಮಾಲೂರು ತಾಲ್ಲೂಕಿನಲ್ಲಿ ನಂಗಲಿಯಲ್ಲಿ  ಮೇವಿನ ಕೊರತೆ ಏರ್ಪಟ್ಟಿದ್ದು ನೆರೆಯ ಆಂಧ್ರಪ್ರದೇಶ ವ್ಯಾಪಾರಿಗಳು ಲಾರಿಯಲ್ಲಿ ಹುಲ್ಲು ಮಾರಾಟಕ್ಕೆ ಇಟ್ಟಿರುವುದು   

ಮುಳಬಾಗಿಲು: ತಾಲ್ಲೂಕಿನಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗಿದ್ದು, ಜಾನುವಾರುಗಳ ಮಾಲೀಕರು ಆಂಧ್ರಪ್ರದೇಶದ ವ್ಯಾಪಾರಿಗಳಿಂದ ಮೇವನ್ನು ಕೊಂಡು ಜಾನುವಾರುಗಳನ್ನು ಸಾಕುತ್ತಿರುವ ಸ್ಥಿತಿ ಉಂಟಾಗಿದೆ. 

ತಾಲ್ಲೂಕಿನಲ್ಲಿ ಬಹುತೇಕರು ಹೈನುಗಾರಿಕೆಯನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ. ಮತ್ತೆ ಕೆಲವರು ಕುರಿ, ಮೇಕೆ ಇತ್ಯಾದಿ ಸಾಕುತ್ತಿದ್ದಾರೆ. ಇದರಿಂದಲೇ ಬದುಕು ಕಟ್ಟಿಕೊಂಡವರು ನೂರಾರು ಮಂದಿ. ತಾಲ್ಲೂಕಿನಲ್ಲಿ ಒಂದು ವರ್ಷದಿಂದ ಸೂಕ್ತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಹಾಗಾಗಿ, ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಹೀಗಾಗಿ, ಜಾನುವಾರುಗಳನ್ನೇ ನಂಬಿ ಬದುಕುತ್ತಿರುವ ಜನ ಮೇವಿನ ಸಮಸ್ಯೆಯಿಂದ ಪರದಾಡುವಂತಾಗಿದೆ. 

ತಾಲ್ಲೂಕಿನ ನಂಗಲಿ, ತಿಮ್ಮರಾವುತ್ತನಹಳ್ಳಿ, ತಾಯಲೂರು, ಆವಣಿ, ದುಗ್ಗಸಂದ್ರ, ಗುಡಿಪಲ್ಲಿ, ಬೈರಕೂರು ಮುಂತಾದ ಬಹುತೇಕ ಕಡೆಗಳಲ್ಲಿ ಮೇವಿನ ಕೊರತೆ ಏರ್ಪಟ್ಟಿದ್ದು, ಜಾನುವಾರುಗಳ ಮೇವಿಗಾಗಿ ಕೊಳವೆ ಬಾವಿಗಳವರು ಚೆಲ್ಲಿರುವ ಜೋಳವನ್ನು ಕೆಲವರು ಇಂತಿಷ್ಟು ಹಣ ನೀಡಿ ಕೊಂಡುಕೊಳ್ಳುತ್ತಿದ್ದಾರೆ. ಆರ್ಥಿಕ ಶಕ್ತಿ ಇಲ್ಲದ ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಜನ ಕೆರೆಗಳ ಅಂಚಿನಲ್ಲೋ ಅಥವಾ ಅಲ್ಪ ಸ್ವಲ್ಪ ನೀರು ಇರುವ ಸ್ಥಳಗಳಲ್ಲಿ ಬೆಳೆದಿರುವ ಒಣಗುವ ಹಂತದಲ್ಲಿ ಇರುವ ಹುಲ್ಲನ್ನು ಸಂಗ್ರಹಿಸುತ್ತಿದ್ದಾರೆ.

ADVERTISEMENT

ತಾಲ್ಲೂಕಿನಲ್ಲಿ ಮಳೆಯ ಕೊರತೆಯಿಂದ ಕೆರೆಗಳು ತುಂಬಿ ಸುಮಾರು 15-16 ವರ್ಷಗಳೇ ಕಳೆದಿತ್ತು. ಹೀಗಾಗಿ ಸುಮಾರು 1500 ಅಡಿಗಳಷ್ಟು ಆಳಕ್ಕೆ ಕೊಳವೆ ಬಾವಿಗಳನ್ನು ಕೊರೆದರೂ ನೀರು ಸಿಗುವುದು ಸಂಶಯವಾಗುತ್ತಿತ್ತು. ಇದರಿಂದ ಸರ್ಕಾರ ತಾಲ್ಲೂಕನ್ನು ಬರಗಾಲದ ತಾಲ್ಲೂಕಿನ ಪಟ್ಟಿಗೆ ಸೇರಿಸಿತ್ತು. ಆದರೆ ಈಚೆಗೆ ಮೂರು ನಾಲ್ಕು ವರ್ಷಗಳ ಹಿಂದೆ ಬಿದ್ದ ಭಾರೀ ಮಳೆಗಳಿಗೆ ಬಹುತೇಕ ಎಲ್ಲಾ ಕೆರೆಗಳು ತುಂಬಿದ್ದವು. ಆದರೆ ಈಚೆಗೆ ಪುನಃ ಸುಮಾರು ಒಂದು ವರ್ಷದಿಂದ ಮಳೆಯ ಅಭಾವ ತಲೆದೋರಿದ್ದು ಕೆಲವು ಕೆರೆಗಳಲ್ಲಿ ಅಲ್ಪಸ್ವಲ್ಪ ನೀರಿದ್ದರೆ, ಕೆಲವು ಕಡೆಗಳಲ್ಲಿ ನೀರೇ ಇಲ್ಲದೆ ಬತ್ತಿಹೋಗಿವೆ. ಇದರಿಂದ ಭೂಮಿಯ ಮೇಲ್ಭಾಗ ಸಂಪೂರ್ಣವಾಗಿ ತೇವಾಂಶ ಇಲ್ಲದೆ ಒಣಗಿದ್ದು, ನಿಸರ್ಗದತ್ತವಾಗಿ ಸಿಗುವ ಹುಲ್ಲೂ ಒಣಗಿ ಹೋಗುತ್ತಿದೆ. ಕೆಲವು ಭಾಗಗಳಲ್ಲಿ ಹುಲ್ಲೇ ಇಲ್ಲದೆ ಬಂಜರು ಭೂಮಿಯಂತೆ ಬದಲಾಗಿದೆ. ಹೀಗಾಗಿ ಜಾನುವಾರುಗಳಿಗೆ ಮೇವಿಲ್ಲದೆ ಪರಿತಪಿಸುವ ಸ್ಥಿತಿ ಎದುರಾಗುತ್ತಿದೆ.

ಇನ್ನು ಬರಗಾಲವನ್ನು ಎದುರಿಸಿದ್ದ ತಾಲ್ಲೂಕಿನ ಭೂಮಿಯಲ್ಲಿ ಅಂತರ್ಜಲ ಹೆಚ್ಚಾಗಲು ಈ ಹಿಂದಿನ ಜಿಲ್ಲಾಧಿಕಾರಿ ಕೆರೆಯ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಸದಂತೆ ಆದೇಶವನ್ನು ಮಾಡಿದ್ದರು. ಇದರಿಂದ ಕೆಲವು ಕೆರೆಗಳಲ್ಲಿ ನೀರಿದ್ದರೂ, ಕೆರೆಯ ಅಚ್ಚುಕಟ್ಟು ಪ್ರದೇಶ ಮಾತ್ರ ಒಣಗಿ ಹುಲ್ಲೇ ಇಲ್ಲದಂತಾಗುತ್ತಿದೆ. ಹೀಗಾಗಿ ಎಲ್ಲಿ ನೋಡಿದರೂ ಭೂಮಿಯ ಮೇಲಿನ ನೈಸರ್ಗಿಕ ಹುಲ್ಲು ದಿನೇ ದಿನೇ ಒಣಗಿ ನಾಶವಾಗುತ್ತಿದೆ. ಒಣಗುತ್ತಿರುವ ಹುಲ್ಲನ್ನಾದರೂ ಜಾನುವಾರುಗಳಿಗೆ ಹಾಕಿ ಜೀವ ಉಳಿಸಲು ಸಾರ್ವಜನಿಕರು ಪ್ರಯತ್ನ ಪಡುತ್ತಿದ್ದಾರೆ.

ಆಂಧ್ರದಲ್ಲಿ ಹುಲ್ಲು ಮಾರಾಟ: ತಾಲ್ಲೂಕಿನಲ್ಲಿ ಮೇವಿನ ಸಮಸ್ಯೆಯನ್ನು ಸೂಕ್ಷ್ಮವಾಗಿ ಅರಿತಿರುವ ನೆರೆಯ ಆಂಧ್ರಪ್ರದೇಶದ ನದಿ ಹಾಗೂ ನೀರಿನ ಪ್ರದೇಶಗಳ ಸೌಲಭ್ಯದಲ್ಲಿ ಭತ್ತವನ್ನು ಬೆಳೆದಿರುವ ಕೆಲವು ರೈತರಿಂದ ಅಲ್ಲಿನ ಹುಲ್ಲು ವ್ಯಾಪಾರಿಗಳು ಹುಲ್ಲನ್ನು ಖರೀದಿಸುತ್ತಿದ್ದಾರೆ. ಅವುಗಳನ್ನು ಹೊರೆಗಳಂತೆ ಕಟ್ಟಿ ಲಾರಿ, ಟೆಂಪೋ, ಟ್ರ್ಯಾಕ್ಟರುಗಳ ಮೂಲಕ ತಂದು ತಾಲ್ಲೂಕಿನಲ್ಲಿ ಮಾರುತ್ತಿರುವುದು ಸಾಮಾನ್ಯವಾಗಿದೆ.

ಹುಲ್ಲಿನ ಲೋಡುಗಳನ್ನು ಜನಸಂದಣಿ ಹೆಚ್ಚಿರುವ ನಂಗಲಿ, ಮುಳಬಾಗಿಲು ಬೈಪಾಸ್, ತಾಯಲೂರು, ತಿಮ್ಮರಾವುತ್ತನಹಳ್ಳಿ, ಹೆಬ್ಬಣಿ, ಗುಡಿಪಲ್ಲಿ ಮುಂತಾದ ಕಡೆಗಳಲ್ಲಿ ಹುಲ್ಲಿನ ಲೋಡುಗಳ ವಾಹನಗಳನ್ನು ನಿಲ್ಲಿಸಿಕೊಂಡು ಮಾರಾಟ ಮಾಡಲಾಗುತ್ತಿದೆ. ಒಂದು ಹುಲ್ಲಿನ ಕಟ್ಟನ್ನು ₹150 ರಿಂದ ₹ 200ಕ್ಕೆ ಮಾರಾಟ ಮಾಡುತ್ತಿದ್ದಾರೆ. ವಿಧಿ ಇಲ್ಲದೆ ತಾಲ್ಲೂಕಿನ ಜನ ತಮ್ಮ ಶಕ್ತಾನುಸಾರ ಹುಲ್ಲಿನ ಕಟ್ಟುಗಳನ್ನು ಕೊಂಡು ತಂದು ಮನೆಗಳ ಮುಂದೆ ರಾಶಿ ಹಾಕಿ ಜಾನುವಾರುಗಳನ್ನು ಸಾಕುತ್ತಿದ್ದಾರೆ.

ಜೋಳದ ಪೆಡೆ (ಸಾಲು) ₹ 2 ಸಾವಿರದಿಂದ ₹ 3ಸಾವಿರ: ಕೊಳವೆ ಬಾವಿ ಇರುವ ಕೆಲವು ರೈತರು ಮೇವಿಲ್ಲದ ಇರುವ ಸ್ಥಿತಿಯನ್ನು ಕಂಡು ತಮ್ಮ ಜಮೀನುಗಳಲ್ಲಿ ಜೋಳದ ಮೇವನ್ನು ಬೆಳೆಸಿ, ಒಂದು ಪೆಡೆ (ಸಾಲು) ₹ 2 ಸಾವಿರದಿಂದ ₹ 3 ಮೂರು ಸಾವಿರಕ್ಕೆ ಮಾರಾಟ ಮಾಡುತ್ತಿದ್ದಾರೆ. ಈ ಜೋಳದ ಕಡ್ಡಿಯನ್ನು ಕೆಲವರು ಹಾಲು ಬಿಲ್ಲಿನ ಹಣವನ್ನು ನೀಡಿ ಕೊಂಡು ತಂದರೆ, ಮತ್ತೆ ಕೆಲವರು ಕೂಲಿ ನಾಲಿ ಮಾಡಿದ ಹಣವನ್ನು ಮಾರಾಟಗಾರರಿಗೆ ಎರಡು ಅಥವಾ ಮೂರು ಕಂತುಗಳಲ್ಲಿ ನೀಡುವ ಮೂಲಕ ಸಾಲದ ರೂಪದಲ್ಲಿ ಜೋಳದ ಹುಲ್ಲನ್ನು ತಂದು ಹಸು, ಎಮ್ಮೆ, ಎತ್ತುಗಳಿಗೆ ಹಾಕುತ್ತಿದ್ದಾರೆ.

ಗೆಣಸು ಬಳ್ಳಿಗೆ ಬೇಡಿಕೆ:ನಂಗಲಿ ಭಾಗದ ಮರವೇಮನೆ, ಕೆರಸಿಮಂಗಲ, ನಗವಾರ, ಮುಷ್ಟೂರು, ಮುದಿಗೆರೆ, ನಂಗಲಿ, ಎಂ.ಚಮಕಲಹಳ್ಳಿ ಮುಂತಾದ ಕಡೆಗಳಲ್ಲಿ ಬೆಳೆಯುತ್ತಿರುವ ಸಿಹಿ ಗೆಣಸನ್ನು ಅಗೆಯುವಾಗ ಕಿತ್ತು ಹೊರ ಹಾಕುವ ಬಳ್ಳಿಗಳಿಗೆ ಬೇಡಿಕೆ ಹೆಚ್ಚಿದೆ. ಈ ಬಳ್ಳಿಗಳನ್ನು ಸಂಗ್ರಹಿಸಿ ಹೊರೆಗಳ ರೀತಿಯಲ್ಲಿ ತಂದು ಮನೆಗಳ ಮುಂದೆ ರಾಶಿ ಹಾಕಿಕೊಂಡು ಜಾನುವಾರುಗಳಿಗೆ ಹಾಕುತ್ತಿರುವುದೂ ಯಥೇಚ್ಛವಾಗಿ ಕಂಡುಬರುತ್ತಿದೆ.

ಭತ್ತದ ಹುಲ್ಲು ತುಂಬಿದ ಟೆಂಪೋ ಆಂಧ್ರಪ್ರದೇಶದ ಗಡಿಯ ಮೂಲಕ ನಂಗಲಿ ಟೋಲ್ ಗೇಟ್ ಬಳಿ ರಾಜ್ಯಕ್ಕೆ ಬರುತ್ತಿರುವುದು
ಬೇಸಿಗೆ ಕಾಲ ಸಮೀಪಿಸುತ್ತಿದ್ದಂತೆ ಜಾನುವಾರುಗಳಿಗೆ ಹಸಿ ಮೇವಿನ ಸಮಸ್ಯೆ ಎದುರಾಗುತ್ತಿದೆ. ಎಲ್ಲಿ ನೋಡಿದರೂ ಭೂಮಿ ಒಣಗುತ್ತಾ ಹುಲ್ಲು ಒಣಗಿ ಹೋಗುತ್ತಿದೆ. ಇದರಿಂದ ಒಣಗಿದ ಹುಲ್ಲನ್ನು ಹಾಕಿದರೆ ಹಸುಗಳು ಹಾಲು ಕಡಿಮೆ ಕೊಡುತ್ತದೆ. ಇದರಿಂದ ಸಾವಿರಾರು ರೂಪಾಯಿಗಳನ್ನು ನೀಡಿ ಉಳ್ಳವರಿಂದ ಜೋಳದ ಕಡ್ಡಿಯನ್ನು ಕೊಂಡು ಹಾಕಲಾಗುತ್ತಿದೆ. ಇನ್ನು ಹಸಿ ಮೇವೇ ಹಾಕಿದರೆ ಜಾನುವಾರುಗಳನ್ನು ನಿಭಾಯಿಸಲು ಆಗದು ಎಂದು ಆಂಧ್ರದ ವ್ಯಾಪಾರಿಗಳು ಮಾರುವ ಒಣ ಭತ್ತದ ಹುಲ್ಲನ್ನು ತಂದು ಹಸುಗಳನ್ನು ಮೇಯಿಸುವ ಸ್ಥಿತಿ ಎದುರಾಗುತ್ತಿದೆ.
ವೆಂಕಟಪ್ಪ ಮರವೇಮನೆ
ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗುತ್ತಿದ್ದು ಈಗಾಗಲೇ ರೈತರಿಗೆ 2500 ಕಿಟ್ಟುಗಳ ಜೋಳವನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗಿದೆ. ಇನ್ನು ಜೋಳ ಬೆಳೆದಿರುವವರಿಗೆ ಸರ್ಕಾರದ ವತಿಯಿಂದ ಇಂತಿಷ್ಟು ಹಣವನ್ನು ನೀಡಿ ಜೋಳದ ಮೇವನ್ನು ಪಶುಪಾಲನಾ ಇಲಾಖೆಯ ವತಿಯಿಂದ ಕೊಂಡುಕೊಂಡು ರೈತರಿಗೆ ರಿಯಾಯಿತಿ ದರದಲ್ಲಿ ನೀಡಲೂ ಸಹ ಯೋಜನೆ ಇದೆ. ಈಗಾಗಲೇ ಒಣ ಮೇವನ್ನು ಬೇರೆ ಕಡೆಯಿಂದ ತಂದು ರಿಯಾಯಿತಿ ದರದಲ್ಲಿ ಜಾನುವಾರುಗಳು ಇರುವವರಿಗೆ ಮಾರಲು ಯೋಜನೆ ಹಮ್ಮಿಕೊಳ್ಳಲಾಗಿದ್ದು ಜಿಲ್ಲಾಧಿಕಾರಿ ಅನುಮತಿ ನೀಡಿದ ಕೂಡಲೇ ಒಣ ಮೇವನ್ನು ತಂದು ಕಡಿಮೆ ಬೆಲೆಗೆ ಮಾರಲಾಗುವುದು.
ಅನುರಾಧ ತಾಲ್ಲೂಕು ಸಹಾಯಕ ನಿರ್ದೇಶಕಿ ಪಶುಪಾಲನಾ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.