ADVERTISEMENT

ಮುಳಬಾಗಿಲು: ಸಸಿ ನೆಟ್ಟು ಅರಣ್ಯ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2024, 12:19 IST
Last Updated 21 ಮಾರ್ಚ್ 2024, 12:19 IST
ಮುಳಬಾಗಿಲು ತಾಲ್ಲೂಕಿನ ಕಾಶೀಪುರ ಅರಣ್ಯ ಪ್ರದೇಶದಲ್ಲಿ ಸಸಿ ನೆಟ್ಟು ಗಿಡಕ್ಕೆ ನೀರೆರೆಯುವ ಮೂಲಕ ಅರಣ್ಯ ದಿನಾಚರಣೆ ಆಚರಿಸಲಾಯಿತು
ಮುಳಬಾಗಿಲು ತಾಲ್ಲೂಕಿನ ಕಾಶೀಪುರ ಅರಣ್ಯ ಪ್ರದೇಶದಲ್ಲಿ ಸಸಿ ನೆಟ್ಟು ಗಿಡಕ್ಕೆ ನೀರೆರೆಯುವ ಮೂಲಕ ಅರಣ್ಯ ದಿನಾಚರಣೆ ಆಚರಿಸಲಾಯಿತು   

ಮುಳಬಾಗಿಲು: ತಾಲ್ಲೂಕಿನ ಕಾಶೀಪುರ ಅರಣ್ಯ ಪ್ರದೇಶದಲ್ಲಿ ಮಾತೃ ಪ್ರೇಮ ಚಾರಿಟಬಲ್ ಟ್ರಸ್ಟ್ ಹಾಗೂ ಅರಣ್ಯ ಇಲಾಖೆ ವತಿಯಿಂದ  ಸಸಿ ನೆಡುವ ಮೂಲಕ ಗುರುವಾರ ಅರಣ್ಯ ದಿನಾಚರಣೆ ಆಚರಿಸಿದರು.

ಈ ವೇಳೆ ಮಾತೃ ಪ್ರೇಮ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಂಡಿಕಲ್ ಮಂಜುನಾಥ್ ಮಾತನಾಡಿ, ಭೀಕರ ಬರಗಾಲ ಎದುರಿಸುತ್ತಾ, ಒಂದೊಂದು ಹನಿ ನೀರಿಗೂ ಹಾಹಾಕಾರ ಉಂಟಾಗಿರುವ ಸಮಯದಲ್ಲಿ ಕೇವಲ ಕಾರ್ಯಕ್ರಮಕ್ಕೆಂದು ನೆಪ ಮಾತ್ರಕ್ಕೆ ಸಸಿಗಳನ್ನು ನಾಟಿ ಮಾಡಿ ನಂತರ ನೀರಿನ ಪೋಷಣೆ ಇಲ್ಲದೆ ಸಸಿಗಳು ಒಣಗಿ ನಾಶವಾದರೆ ಅರಣ್ಯ ದಿನಾಚರಣೆಗೆ ಅರ್ಥವಿಲ್ಲ ಎಂದು ಹೇಳಿದರು.

ಪರಿಸರ ದಿನಾಚರಣೆ, ಅರಣ್ಯ ದಿನಾಚರಣೆ ಮುಂತಾದ ದಿನಗಳಲ್ಲಿ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಗಿಡಗಳನ್ನು ನಾಟಿ ಮಾಡುವ ಮೂಲಕ ಪೋಟೊ ತೆಗೆಸಿಕೊಂಡು, ನಂತರ ಗಿಡಗಳು ಒಣಗಿ ನಾಶವಾಗುತ್ತಿದ್ದರೂ ತನಗೂ ಗಿಡಗಳಿಗೂ ಸಂಬಂಧ ಇಲ್ಲದಂತೆ ನಡೆದುಕೊಳ್ಳುತ್ತಾರೆ. ಹಾಗಾಗಿ ಎಂತಹ ಸಮಯದಲ್ಲಿಯೂ ನಾಟಿ ಮಾಡಿರುವ ಗಿಡಗಳನ್ನು ನೀರು ಹಾಕಿ ಪೋಷಿಸುವ ಇಚ್ಛಾಶಕ್ತಿ ಇದ್ದರೆ ಮಾತ್ರ ಸಸಿಗಳನ್ನು ನಾಟಿ ಮಾಡಬೇಕು. ಇಲ್ಲವಾದಲ್ಲಿ ಸಸಿಗಳನ್ನು ನಾಟಿ ಮಾಡುವ ಕಾರ್ಯಕ್ರಮವನ್ನು ಕೈಬಿಡಬೇಕು ಎಂದರು.

ADVERTISEMENT

ಇತ್ತೀಚೆಗೆ ದೇವರಾಯ ಸಮುದ್ರ ರಸ್ತೆಯಲ್ಲಿ ಹಾಗೂ ಇನ್ನಿತರೆ ಕಡೆಗಳಲ್ಲಿ ಅರಣ್ಯ ಇಲಾಖೆ, ಗ್ರಾಮ ಪಂಚಾಯಿತಿಗಳು ನರೇಗಾ ಯೋಜನೆಯಡಿಯಲ್ಲಿ ನಾಟಿ ಮಾಡಲಾಗಿರುವ ಸಸಿಗಳು ನೀರಿಲ್ಲದೆ ಒಣಗಿ ನಾಶವಾಗುತ್ತಿರುವ ಸುದ್ದಿ ಪತ್ರಿಕೆಗಳಲ್ಲಿ ನೋಡಿ ನೋವಾಯಿತು. ಆದ್ದರಿಂದ ಆರೋಗ್ಯವಂತ ಸಮಾಜಕ್ಕೆ ಪರಿಸರ ಅತ್ಯಮೂಲ್ಯ ವಸ್ತು ಎಂದು ಹೇಳಿದರು.

ಉಪ ವಲಯ ಅರಣ್ಯ ಅಧಿಕಾರಿ ಭರತ್ ರೆಡ್ಡಿ, ಉತ್ತನೂರು ಅರ್ಜುನ್, ಲೋಕೇಶ್, ಶ್ರೀನಿವಾಸ್, ವಿನೋದ್, ಅಭಿ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.