ADVERTISEMENT

ಕೇಂದ್ರದ ಮಾಜಿ ಸಚಿವ ಜಾಲಪ್ಪ ಆರೋಗ್ಯದಲ್ಲಿ ಏರುಪೇರು: ಐಸಿಯುಗೆ ದಾಖಲು

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2021, 15:53 IST
Last Updated 10 ಡಿಸೆಂಬರ್ 2021, 15:53 IST
ಆರ್‌.ಎಲ್‌.ಜಾಲಪ್ಪ
ಆರ್‌.ಎಲ್‌.ಜಾಲಪ್ಪ   

ಕೋಲಾರ: ಕೇಂದ್ರದ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರಿಗೆ ಜಿಲ್ಲಾ ಕೇಂದ್ರದ ಜಾಲಪ್ಪ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

97 ವರ್ಷ ವಯಸ್ಸಿನ ಜಾಲಪ್ಪ ಅವರು ಶ್ವಾಸಕೋಶ ಸಮಸ್ಯೆ ಹಾಗೂ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದು, 34 ದಿನಗಳಿಂದ ಆಸ್ಪತ್ರೆಯಲ್ಲಿದ್ದಾರೆ. ಫೆಬ್ರುವರಿ ತಿಂಗಳಲ್ಲಿ ಪಾರ್ಶ್ವವಾಯುಗೆ ತುತ್ತಾಗಿದ್ದ ಅವರಿಗೆ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಹೀಗಾಗಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆ ನಂತರ ಚೇತರಿಸಿಕೊಂಡಿದ್ದರು.

‘ಜಾಲಪ್ಪ ಅವರು ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಗುರುವಾರ ರಾತ್ರಿ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಯಿತು. ಶುಕ್ರವಾರ ಅವರಿಗೆ ಡಯಾಲಿಸಿಸ್‌ ಮಾಡಲಾಗಿದ್ದು, ಆರೋಗ್ಯದಲ್ಲಿ ಸುಧಾರಣೆಯಾಗಿದೆ’ ಎಂದು ಸಂಬಂಧಿ ಜಿ.ಎಚ್.ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಜಾಲಪ್ಪ ಅವರ ಆರೋಗ್ಯ ಸ್ಥಿರವಾಗಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಆರೋಗ್ಯ ವಿಚಾರಿಸಲು ಐಸಿಯುಗೆ ಹೋಗಿದ್ದ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರನ್ನು ಜಾಲಪ್ಪ ಗುರುತು ಹಿಡಿದರು’ ಎಂದು ಹೇಳಿದರು.

ಶಾಸಕ ಕೆ.ಆರ್.ರಮೇಶ್‌ಕುಮಾರ್‌, ವಿಧಾನ ಪರಿಷತ್‌ ಸದಸ್ಯ ನಜೀರ್‌ ಅಹಮ್ಮದ್‌, ಮಾಜಿ ಸಚಿವರಾದ ಪಿ.ಜಿ.ಆರ್‌ ಸಿಂಧ್ಯಾ, ಎಂ.ಆರ್.ಸೀತಾರಾಮ್ ಸೇರಿದಂತೆ ಅನೇಕ ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಜಾಲಪ್ಪರ ಆರೋಗ್ಯ ವಿಚಾರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.