ಕೋಲಾರ: ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಮಾದರಿಯಲ್ಲೇ ಕೋಲಾರದಲ್ಲೊಂದು ಪ್ರಕರಣ ನಡೆದಿದ್ದು, ಪತ್ನಿ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಗೆಳೆಯನನ್ನು ಬರ್ಬರವಾಗಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಹತ್ಯೆಯನ್ನು ಅಪಘಾತ ಎಂದು ಬಿಂಬಿಸಲು ಪ್ರಯತ್ನಿಸಿದ ಆರೋಪಿ, ಆಂಧ್ರಪ್ರದೇಶದ ಗಂಧರ್ವಮಾಕನಪಲ್ಲಿ ಗ್ರಾಮದ ಆನಂದ್ ಎಂಬಾತನನ್ನು ಕೋಲಾರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಕೆಜಿಎಫ್ ತಾಲ್ಲೂಕಿನ ಜೇಡ ಮಾಕನಪಲ್ಲಿ ಗ್ರಾಮದ ಶಂಕರ್ ಮೃತ ವ್ಯಕ್ತಿ. ಅವರ ಸಂಬಂಧಿ ಆಂಧ್ರಪ್ರದೇಶದ ಗಂದಾರಮಾಕನಪಲ್ಲಿ ಶಂಕರ್ ಅಲಿಯಾಸ್ ಶೇಖರ್ ಹಲ್ಲೆಗೊಳಾಗಿದ್ದು, ತೀವ್ರ ಗಾಯಗೊಂಡಿದ್ದಾರೆ.
ಘಟನೆ ಹಿನ್ನೆಲೆ: ‘ಶಂಕರ್ ಹಾಗೂ ಶಂಕರ್ ಅಲಿಯಾಸ್ ಶೇಖರ್ ಸಂಬಂಧಿಗಳು. ಇವರಿಬ್ಬರಿಗೂ ಆನಂದ್ ಸ್ನೇಹಿತನಾಗಿದ್ದ. ಇವರು ಬೆಂಗಳೂರಿನಲ್ಲಿ ವಿವಿಧ ಕೆಲಸ ಮಾಡಿಕೊಂಡಿದ್ದರು.
‘ಮೂವರು ಜೊತೆಗೂಡಿ ಜೂನ್ 7ರಂದು ರಾತ್ರಿ ಆಂಧ್ರಪ್ರದೇಶದ ಗಂಧರ್ವಮಾಕನಪಲ್ಲಿಗೆ ಕಾರಿನಲ್ಲಿ ತೆರಳಲು ನಿರ್ಧರಿಸಿದ್ದಾರೆ. ಈ ಹಾದಿಯಲ್ಲಿ ಹೊಸಕೋಟೆ ಬಾರೊಂದರಲ್ಲಿ ಮದ್ಯಪಾನ ಮಾಡಿದ್ದಾರೆ.
‘ಈ ಸಂದರ್ಭದಲ್ಲಿ ಪತ್ನಿ ಜೊತಗಿನ ಸಮಸ್ಯೆಯನ್ನು ಆರೋಪಿ ಆನಂದ್ ಗೆಳೆಯರ ಬಳಿ ಹೇಳಿಕೊಂಡಿದ್ದಾನೆ. ಆಗ ಆತನ ಪತ್ನಿಯನ್ನು ಶಂಕರ್ ಅಲಿಯಾಸ್ ಶೇಖರ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದರಿಂದ ಆಕ್ರೋಶಭರಿತನಾದ ಆನಂದ್ ಕೊಲೆ ಮಾಡುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ–75ರ ಚುಂಚದೇನಹಳ್ಳಿ ಗೇಟ್ ಬಳಿ ಕಾರು ನಿಲ್ಲಿಸಿದ್ದಾನೆ. ಜಾಕ್ ರಾಡ್‌ನಿಂದ ಶಂಕರ್ ಅಲಿಯಾಸ್ ಶೇಖರ್‌ಗೆ ಬೀಸಿದ್ದಾನೆ. ಆತ ತಪ್ಪಿಸಿಕೊಂಡಿದ್ದರಿಂದ ಆ ರಾಡಿನ ಏಟು ಕೆಜಿಎಫ್ ತಾಲ್ಲೂಕಿನ ಶಂಕರ್ ತಲೆಗೆ ಬಿದ್ದಿದೆ. ಮತ್ತೆ ಅದೇ ರಾಡ್‌ನಿಂದ ಶಂಕರ್ ಅಲಿಯಾಸ್ ಶೇಖರ್‌ಗೂ ಹೊಡೆದಿದ್ದಾನೆ. ಅದರಲ್ಲಿ ಕೆಜಿಎಫ್‌ನ ಶಂಕರ್ ಮೃತಪಟ್ಟಿದ್ದಾನೆ. ಕೊಲೆ ಮಾಡಿದ ಆನಂದ್ ಪರಾರಿಯಾಗಿದ್ದ. ಪ್ರಕರಣದ ತನಿಖೆ ಕೈಗೊಂಡು 24 ಗಂಟೆಯಲ್ಲಿ ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ತಿಳಿಸಿದರು.
ಆರೋಪಿ ಆನಂದ್ ಪ್ರಕರಣವನ್ನು ಅಪಘಾತವೆಂದು ಬಿಂಬಿಸಲು ಪ್ರಯತ್ನಿಸಿರುವುದು ತನಿಖೆಯಿಂದ ಗೊತ್ತಾಗಿದೆ. ಘಟನೆಯ ದಿನವೇ ಆ್ಯಂಬುಲೆನ್ಸ್‌ಗೆ ಕರೆ ಮಾಡಿ ಅಪಘಾತವಾಗಿದೆ ಎಂಬುದಾಗಿ ಹೇಳಿರುವುದು ತಿಳಿದುಬಂದಿದೆ. ಕಾರಿನಲ್ಲಿದ್ದ ಒಬ್ಬ ಮೃತಪಟ್ಟು, ಇನ್ನೊಬ್ಬ ಗಾಯಗೊಂಡು ಆಸ್ಪತ್ರೆ ಸೇರಿದ್ದರೆ, ಮತ್ತೊಬ್ಬರು ತಲೆಮರೆಸಿಕೊಂಡಿದ್ದು, ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದ ಬಗ್ಗೆ ಹಾಗೂ ಘಟನೆ ನಡೆದ ಸ್ಥಳದಲ್ಲಿನ ಪರಿಸ್ಥಿತಿ ಬಗ್ಗೆ ಅನುಮಾನ ಬಂದಿದ್ದರಿಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಜೊತೆಗೆ ಮೃತ ಶಂಕರ್ ಸಂಬಂಧಿಕರು ಪೊಲೀಸರಿಗೆ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದರು. ಆಗ ಆನಂದ್‌ನನ್ನು ಆಂಧ್ರಪ್ರದೇಶದ ವಿ.ಕೋಟಾ ಬಳಿ ಬಂಧಿಸಿ ವಿಚಾರಿಸಿದಾಗ ಪ್ರಕರಣ ಬಯಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಡಿವೈಎಸ್ಪಿ ಎಚ್.ಎಂ.ನಾಗ್ತೆ ಮಾರ್ಗದರ್ಶನದಲ್ಲಿ ಕೋಲಾರ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಕೆ.ಕಾಂತರಾಜ್ ತಂಡದ ಸದಸ್ಯರಾದ ಪಿಎಸ್‌ಐ ವಿ.ಭಾರತಿ ಸಿಬ್ಬಂದಿ ಮುರಳಿ ಶೇಕ್ ಸಾಧಿಕ್ ಪಾಷಾ ಮಂಜುನಾಥ್ ರವಿಕುಮಾರ್ ರಾಜೇಶ್ ವಿನಾಯಕ ಜಿಲ್ಲಾ ಪೊಲೀಸ್ ತಾಂತ್ರಿಕ ವಿಭಾಗದ ನಾಗರಾಜ ಮುರಳಿ ಜಿಲ್ಲಾ ಅಪರಾಧ ವಿಭಾಗದ ರಾಘವೇಂದ್ರ ಆಂಜಿನಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಯಶಸ್ವಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವರನ್ನು ಕೇಂದ್ರ ವಲಯ ಐಜಿಪಿ ಬಿ.ಆರ್.ರವಿಕಾಂತೇಗೌಡ ಎಸ್ಪಿ ಎಂ.ನಾರಾಯಣ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ರವಿಶಂಕರ್ ಹಾಗೂ ಜಗದೀಶ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.