ಶ್ರೀನಿವಾಸಪುರ: ತಾಲ್ಲೂಕು ಸರ್ಕಾರಿ ನೌಕರರ ಚುನಾವಣೆ ಸೋಮವಾರ ನಡೆದು ಫಲಿತಾಂಶ ಹೊರಬಿದ್ದಿದ್ದು, ಗೆದ್ದ ಅಭ್ಯರ್ಥಿಗಳ ನಗು ಬೀರಿದರು. ಸೋತ ಅಭ್ಯರ್ಥಿಗಳು ನಿರಾಸೆಯಲ್ಲಿ ಮುಳುಗಿದ್ದರು.
ತಾಲ್ಲೂಕಿನ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರ 32 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಇವರಲ್ಲಿ ವಿವಿಧ ಇಲಾಖೆಗಳಿಂದ 27 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಳಿದಂತೆ ಪ್ರಾಥಮಿಕ ಶಾಲಾ ಶಿಕ್ಷಕರ ವಿಭಾಗಕ್ಕೆ3 ಸ್ಥಾನಗಳು, ಪ್ರೌಢಶಾಲಾ ವಿಭಾಗಕ್ಕೆ ಒಂದು ಸ್ಥಾನ, ಬಿಇಒ. ಕಚೇರಿ ಒಳಗೊಂಡಂತೆ 5 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಅದರಲ್ಲಿ ಬಿಇಒ ಕಚೇರಿಯ ಸಿಬ್ಬಂದಿ ಶ್ರೀನವಾಸಗೌಡರಿಗೆ 8 ಮತ , ಇವರ ಪ್ರತಿಸ್ಪರ್ಧಿ ವಾಹನ ಚಾಲಕ ಜಕಾಉದ್ದೀನ್ ರವರಿಗೆ 6 ಮತಗಳು ಲಭಿಸಿದ್ದು, 2 ಮತಗಳ ಅಂತರದಲ್ಲಿ ಶ್ರೀನಿವಾಸಗೌಡ ಜಯಬೇರಿ ಬಾರಿಸಿದ್ದಾರೆ.
ಪ್ರೌಢಶಾಲಾ ವಿಭಾಗಕ್ಕೆ ಸಂಬಂಧಿಸಿದಂತೆ 160 ಮತಗಳ ಪೈಕಿ 143 ಮತಗಳು ಚಲಾವಣೆ ಆಗಿವೆ. ಅದರಲ್ಲಿ 1 ಮತ ಅನರ್ಹವಾಗಿದೆ. ಉಳಿದಂತೆ ಎಂ.ಬೈರೇಗೌಡ ಬೆಂಬಲಿಗರಾದ ಪ್ರೌಢಶಾಲಾ ವಿಭಾಗದಲ್ಲಿ ಎಸ್.ಮುನಿವೆಂಕಟಪ್ಪ 103 ಮತ ಗಳಿಸಿ ಜಯಶೀಲರಾಗಿದ್ದಾರೆ. ಇವರ ಪ್ರತಿಸ್ಪರ್ಧಿ ಲಕ್ಷ್ಮೀಪತಿ 39 ಮತ ಪಡೆದು ಪರಾಭವಗೊಂಡಿದ್ದಾರೆ.
ಬಾಲಕಿಯರ ಸರ್ಕಾರಿ ಕಾಲೇಜಿನ ಆವರಣದಲ್ಲಿನ ಪದವಿಪೂರ್ವ ಕಾಲೇಜಿನ ಕೊಠಡಿಯಲ್ಲಿ ಪ್ರಾಥಮಿಕ ಶಾಲಾ ವಿಭಾಗದ ಮತಗಟ್ಟೆ ಕೇಂದ್ರ ತೆರೆಯಲಾಗಿತ್ತು. ಪ್ರೌಢಶಾಲಾ ವಿಭಾಗಕ್ಕೆ ಬಿಇಒ ಕಚೇರಿ, ಬಿಇಒ ಕಚೇರಿ ಸಿಬ್ಬಂದಿಗೆ ಹಿರಿಯ ಮಾದರಿ ಪಾಠ ಶಾಲೆಯಲ್ಲಿ ಮತಗಟ್ಟೆ ಕೇಂದ್ರ ತೆರೆಯಲಾಗಿತ್ತು.
ತಾಲೂಕಿನಲ್ಲಿ ಪ್ರಾಥಮಿಕ, ಪ್ರೌಡಶಾಲಾ, ಬಿಇಒ ಕಚೇರಿ ಸಿಬ್ಬಂದಿ ಸೇರಿ ಒಟ್ಟು 851 ವಿವಿಧ ಇಲಾಖೆ ನೌಕರ ಮತದಾರರಿದ್ದರು, ಅವರಲ್ಲಿ 677 ಪ್ರಾಥಮಿಕ ಶಾಲಾ ಶಿಕ್ಷಕರು ಮತದಾರರಿದ್ದು, ಪ್ರೌಡಶಾಲಾ ವಿಭಾಗದಲ್ಲಿ 160 ಮತದಾರರಿದ್ದರು, ಬಿಇಒ ಕಚೇರಿಯಲ್ಲಿ 14 ಮತದಾರರಿದ್ದರು. ಪ್ರಾಥಮಿಕ ಶಾಲಾ ವಿಭಾಗದ ಸಂಘದಲ್ಲಿ 3 ಬಣಗಳಾಗಿ 3 ಸ್ಥಾನಗಳಿಗೆ 9 ಮಂದಿ ಕಣದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.