ಕೋಲಾರ: ‘ಮನಸ್ಸು ಶುದ್ಧವಾಗಿದ್ದರೆ ಭಗವಂತ ಮನಸ್ಸಿಗೆ ಬರುತ್ತಾನೆ. ಆ ಮೂಲಕ ಭಗವಂತನ ಅನುಗ್ರಹಕ್ಕೆ ಭಾಜನರಾಗಬೇಕು’ ಎಂದು ತಂಬಿಹಳ್ಳಿಯ ಮನ್ಮಾಧವತೀರ್ಥ ಸಂಸ್ಥಾನದ ಪೀಠಾಧಿಪತಿ ವಿದ್ಯಾಸಾಗರ ಮಾಧವ ತೀರ್ಥ ಸ್ವಾಮೀಜಿ ನುಡಿದರು.
ಪ್ರಥಮ ಏಕಾದಶಿ ಪ್ರಯುಕ್ತ ಇಲ್ಲಿನ ರಾಘವೇಂದ್ರ ಮಠದಲ್ಲಿ ಶನಿವಾರ ತಪ್ತಮುದ್ರ ಧಾರಣೆ ಮಾಡಿ ಆಶೀರ್ವಚನ ನೀಡಿದ ಅವರು, ‘ಭಕ್ತಿ ಮಾರ್ಗದ ಮೂಲಕ ಭಗವಂತನ ಅನುಗ್ರಹ ಸಂಪಾದಿಸಬಹುದು’ ಎಂದರು.
‘ಪ್ರಾಪಂಚಿಕ ಜೀವನದಲ್ಲಿ ಎಲ್ಲರೂ ಸುಖ ಬಯಸುತ್ತಾರೆ. ಆದರೆ, ಎಷ್ಟು ಕಾಲ ಸುಖ ಬೇಕು ಎಂಬುದಕ್ಕೆ ಉತ್ತರವಿಲ್ಲ. ಶುದ್ಧವಾದ ಹಾಗೂ ಶಾಶ್ವತವಾದ ಸುಖ ಪಡೆಯಲು ಮೋಕ್ಷ ಹೊಂದಬೇಕು. ಮಾರುಕಟ್ಟೆಯಲ್ಲಿ ಮೋಕ್ಷ ಸಿಗುವುದಿಲ್ಲ. ಇದನ್ನು ಕೊಡುವವನು ವಿಷ್ಣು ಒಬ್ಬನೇ. ವಿಷ್ಣುವಿನ ಅನುಗ್ರಹಕ್ಕೆ ಪಾತ್ರರಾಗಲು ಪ್ರಯತ್ನಿಸಬೇಕು’ ಎಂದು ಹೇಳಿದರು.
‘ವಿಷ್ಣುವಿನಲ್ಲಿ ಭಕ್ತಿ ಮೂಡಬೇಕಾದರೆ ಶರೀರ ಶುದ್ಧಿ ಹಾಗೂ ಮಾನಸಿಕ ಶುದ್ಧಿ ಬೇಕು. ಶರೀರ ಶುದ್ಧಿಗಾಗಿ ತಪ್ತಮುದ್ರ ಧಾರಣೆ ಮಾಡಬೇಕು. ಪ್ರತಿ ವೈಷ್ಣವರು ತಪ್ತಮುದ್ರ ಧಾರಣೆ ಮಾಡಲೇಬೇಕು. ಅಜ್ಞಾನ ತೊಡೆದು ಭಗವಂತನ ಜ್ಞಾನ ನೀಡುವ, ಪಾಪಗಳನ್ನು ನಾಶ ಮಾಡುವ ವಿಷ್ಣುವಿನ ಚಿಹ್ನೆ ಸುದರ್ಶನ ಚಕ್ರ. ಪಾಂಚಜನ್ಯವನ್ನು ಶರೀರದಲ್ಲಿ ಧರಿಸಿಕೊಂಡು ಭಗವಂತನ ಧ್ಯಾನ, ಸನ್ಮಾರ್ಗದಲ್ಲಿ ನಡೆಯುವ ಮೂಲಕ ಮೋಕ್ಷವನ್ನು ಪಡೆಯಬೇಕು’ ಎಂದು ಸಲಹೆ ನೀಡಿದರು.
‘ಸನ್ಯಾಸಿಗಳು ಪ್ರಥಮ ಏಕಾದಶಿಯಿಂದ ಚಾತುರ್‍ಮಾಸ್ಯ ವ್ರತಾಚರಣೆ ಆರಂಭಿಸುತ್ತಾರೆ. ಆಷಾಢ, ಶ್ರಾವಣ, ಬಾದ್ರಪದ, ಕಾರ್ತಿಕ ಶುದ್ಧ ದ್ವಾದಶಿಯಂದು ವ್ರತಾಚರಣೆ ಅಂತ್ಯಗೊಳ್ಳುತ್ತದೆ. ಈ 4 ತಿಂಗಳು ಸನ್ಯಾಸಿಗಳು ತಾವು ಇರುವ ಪ್ರಾಂತ್ಯದಲ್ಲಿನ ಗ್ರಾಮಗಳಿಗೆ ತೆರಳಿ ಎಲ್ಲಾ ಜನರಿಗೂ ಸದಾಚಾರ ತಿಳಿಸಿ ಮುಕ್ತಿಗೆ ಯೋಗ್ಯವಾದ ಆಚಾರ, ಧರ್ಮ ತಿಳಿಸಿ ಕೊಡಬೇಕು’ ಎಂದು ಹೇಳಿದರು.
ರಾಘವೇಂದ್ರ ಸ್ವಾಮಿ ಮಠದ ಟ್ರಸ್ಟ್ ಅಧ್ಯಕ್ಷ ಸುಬ್ರಮಣ್ಯಂ, ಕಾರ್ಯದರ್ಶಿ ಎನ್.ಕೆ.ಅಚ್ಯುತ, ಸದಸ್ಯರಾದ ಬಿಂದು ಮಾಧವರಾವ್, ಗುರುಪ್ರಸಾದ್, ಸುರೇಶ್, ವಿಶ್ವನಾಥ್, ರಮೇಶ್, ಸಿ.ಎಸ್.ರಘುನಾಥ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.