ADVERTISEMENT

ಸಿ.ಎಂ ಪುತ್ರನ ಸಾವಿನ ಬಗ್ಗೆ ತನಿಖೆ ನಡೆಯಿತೇ?: ಎಚ್‌ಡಿಕೆ ಪ್ರಶ್ನೆ

'ಆತನ ಜೊತೆ ಹೋದವರು ಸಾಧುಗಳೇ"

​ಪ್ರಜಾವಾಣಿ ವಾರ್ತೆ
Published 27 ಮೇ 2024, 12:26 IST
Last Updated 27 ಮೇ 2024, 12:26 IST
   

ಕೋಲಾರ: ‘ಪ್ರಜ್ವಲ್‌ ರೇವಣ್ಣ ಅವರನ್ನು ದೇವೇಗೌಡರೇ ವಿದೇಶಕ್ಕೆ ಕಳುಹಿಸಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದು, ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅವರ ಪುತ್ರ ಅಲ್ಲೆಲ್ಲೋ ಹೋಗಿ ಮೃತಪಟ್ಟಿದ್ದರ ಬಗ್ಗೆ ತನಿಖೆ ನಡೆಸಿದರೆ? ಆ ಬಗ್ಗೆ ನಾವೇನು ಒತ್ತಾಯಿಸಿದ್ದೇವೆಯೇ? ಆತ ಹೋಗಿದ್ದೆಲ್ಲಿಗೆ? ಯಾವ ಕಾರ್ಯಕ್ರಮ? ಆತನನ್ನು ಕರೆದುಕೊಂಡು ಹೋದವರು ಸಾಧುಗಳೇ’ ಎಂದು ಜೆಡಿಎಸ್‌ ರಾಜ್ಯ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಯೊಬ್ಬರು ಸಚಿವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಮಾರು ₹ 187 ಕೋಟಿ ದುರ್ಬಳಕೆಯಾಗಿದ್ದು, ಡೆತ್‌ ನೋಟ್‌ನಲ್ಲಿ ಸಚಿವರ ಮೌಖಿಕ ಆದೇಶದ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಇದು ಸರ್ಕಾರದ ಭ್ರಷ್ಟಾಚಾರಕ್ಕೆ ಸಾಕ್ಷಿ’ ಎಂದು ವಾಗ್ದಾಳಿ ನಡೆಸಿದರು.

‘ದುಡ್ಡು ಹೊಡೆಯುವ ಉದ್ದೇಶದಿಂದ ಸೆಕ್ಯೂರಿಟಿ ಏಜೆನ್ಸಿ ಮೂಲಕ ಬಿಬಿಎಂಪಿ ಶಾಲೆಗಳಿಗೆ ಶಿಕ್ಷಕರನ್ನು ನಿಯೋಜಿಸಲು ರಾಜ್ಯ ಸರ್ಕಾರ ಹೊರಟಿದೆ. ಹೀಗಾದರೆ, ಸರ್ಕಾರ ಏಕಿರಬೇಕು? ಶಿಕ್ಷಣ ಸಚಿವರ ಅಗತ್ಯವೇನಿದೆ? ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವ ಬಗ್ಗೆ ಯೋಚಿಸದೆ ಅದರಲ್ಲೂ ಎಷ್ಟು ಹಣ ದೋಚಬಹುದು ಎಂಬುದರ ಬಗ್ಗೆ ಚಿಂತಿಸುತ್ತಿದೆ’ ಎಂದು ಹರಿಹಾಯ್ದರು.

ADVERTISEMENT

‘ಚನ್ನಗಿರಿಯಲ್ಲಿನ ಲಾಕಪ್‌ ಡೆತ್‌ ಪ್ರಕರಣ ಮುಚ್ಚಿ ಹಾಕಲು ಸರ್ಕಾರ ಹೊರಟಿದೆ. ಪತಿಯು ಮಟ್ಕಾ ದಂಧೆಯ ಚಟುವಟಿಕೆಗಳಿಗೆ ಪ್ರತಿ ತಿಂಗಳು ಪೊಲೀಸ್‌ ಇಲಾಖೆಗೆ ₹ 4.5 ಲಕ್ಷ ಹಫ್ತಾ ನೀಡುತ್ತಿದ್ದರು, ಈ ಬಾರಿ ನೀಡದ ಕಾರಣ ಈ ಕೃತ್ಯ ನಡೆದಿರುವ ವಿಚಾರವನ್ನು ಪತ್ನಿಯೇ ಹೇಳಿಕೊಂಡಿದ್ದಾರೆ. ವಿರೋಧ ಪಕ್ಷಗಳು ಗಾಳಿಯಲ್ಲಿ ಗುಂಡು ಹಾರಿಸುತ್ತಿವೆ ಎಂಬುದಾಗಿ ಗೃಹ ಸಚಿವರು ಲಘುವಾದ ಹೇಳಿಕೆ ನೀಡಿದ್ದಾರೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ’ ಎಂದು ಪ್ರಶ್ನಿಸಿದರು.

‘ಜೂನ್‌ 4ರಂದು ಲೋಕಸಭೆ ಚುನಾವಣಾ ಫಲಿತಾಂಶ ಬಂದ ನಂತರ ರಾಜ್ಯ ಸರ್ಕಾರದ ವೈಫಲ್ಯದ ವಿರುದ್ಧ ಹೋರಾಟ ರೂಪಿಸುತ್ತೇವೆ. ಈ ಸಂಬಂಧ ಮೈತ್ರಿ ಪಕ್ಷ ಬಿಜೆಪಿ ಜೊತೆ ಚರ್ಚಿಸುತ್ತೇವೆ’ ಎಂದರು.

‘ರಾಜ್ಯ ಕಾಂಗ್ರೆಸ್‌ ಸರ್ಕಾರ ತನ್ನ ಜವಾಬ್ದಾರಿ ನಿರ್ವಹಣೆಯಲ್ಲಿ ಸಂಪೂರ್ಣ ವೈಫಲ್ಯ ಕಂಡಿದೆ. ಅಭಿವೃದ್ಧಿ ಕುಂಠಿತಗೊಂಡಿದ್ದು, ಸಾಲದ ಹೊರೆ ಹೇರುತ್ತಿದೆ. ಸರ್ಕಾರದ ರಚನೆಯ ಆರಂಭದಲ್ಲೇ ವರ್ಗಾವಣೆ ದಂಧೆ ಯಥೇಚ್ಛವಾಗಿ ನಡೆಯಿತು. ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದು, ಆಡಳಿತ ಯಂತ್ರ ಕುಸಿದೆ. ರಾಜ್ಯದಲ್ಲಿ ನಡೆದಿರುವ ಕಾನೂನು ಬಾಹಿರ ಕೃತ್ಯಗಳೇ ಅದಕ್ಕೆ ಸಾಕ್ಷಿ’ ಎಂದು ಟೀಕಿಸಿದರು.

‘ಮಳೆ ಪ್ರಾರಂಭವಾಗಿದ್ದು, ಬಿತ್ತನೆ ಬೀಜದ ಬೆಲೆಯನ್ನು ಶೇ 70ರಷ್ಟು ಏರಿಸಿದೆ. ಹಲವು ಕಡೆ ಗೊಬ್ಬರದ ಕೊರತೆ ಇದೆ. ಕಾಂಗ್ರೆಸ್‌ನ ಒಂದು ವರ್ಷ ಆಡಳಿತ ರಾಜ್ಯವನ್ನು 5 ವರ್ಷ ಹಿಂದಕ್ಕೆ ಕೊಂಡೊಯ್ದಿದೆ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.