ಕೋಲಾರ: ನಗರ ಹಾಗೂ ಗ್ರಾಮಾಂತರ ಪ್ರದೇಶದ ವಿವಿಧೆಡೆ ಭಾನುವಾರ ಬಿರುಸಿನ ಮಳೆಯಾಯಿತು. ಬೆಳಿಗ್ಗೆಯಿಂದಲೇ ಮೋಡದ ವಾತಾವರಣವಿತ್ತು. ಮಧ್ಯಾಹ್ನದ ವೇಳೆಗೆ ಕತ್ತಲು ಆವರಿಸಿತು. ಮಧ್ಯಾಹ್ನ 2.30ರ ಸುಮಾರಿಗೆ ಸಿಡಿಲು ಗುಡುಗಿನಿಂದ ಕೂಡಿದ ಮಳೆ ಆರಂಭವಾಯಿತು.
ಜಿಲ್ಲೆಯ ವಿವಿಧೆಡೆ ವಿದ್ಯುತ್ ಅಡಚಣೆ ಉಂಟಾಯಿತು. ಜೋರು ಮಳೆ ಕಾರಣ ಹಲವೆಡೆ ಮರಗಳು ನೆಲಕ್ಕುರುಳಿದವು.
ಸಂಜೆ 5 ಗಂಟೆ ವೇಳೆಗೆ ಕೋಲಾರ ತಾಲ್ಲೂಕಿನ ವಕ್ಕಲೇರಿ ವ್ಯಾಪ್ತಿಯಲ್ಲಿ 6.8 ಸೆ.ಮೀ., ತೋರದೇವಂಡಹಳ್ಳಿ ವ್ಯಾಪ್ತಿಯಲ್ಲಿ 3 ಸೆ.ಮೀ., ಶ್ರೀನಿವಾಸಪುರ ತಾಲ್ಲೂಕಿನ ಲಕ್ಷ್ಮಿಪುರ ವ್ಯಾಪ್ತಿಯಲ್ಲಿ 5.7 ಸೆ.ಮೀ. ಹಾಗೂ ಮಾಲೂರು ತಾಲ್ಲೂಕಿನ ಅಬ್ಬೇನಹಳ್ಳಿ ವ್ಯಾಪ್ತಿಯಲ್ಲಿ 2.7 ಸೆ.ಮೀ. ಮಳೆ ದಾಖಲಾಗಿದೆ.
ಕೀಲುಕೋಟೆ ಬಳಿ ರೈಲ್ವೆ ಸೇತುವೆಯಡಿ ನೀರು ತುಂಬಿ ವಾಹನ ಸವಾರರು ಹಾಗೂ ಪಾದಚಾರಿಗಳು ಯಾತನೆ ಅನುಭವಿಸಿದರು. ದ್ವಿಚಕ್ರ ವಾಹನಗಳು ಮುಳುಗುವಷ್ಟು ನೀರು ತುಂಬಿಕೊಂಡಿತ್ತು. ಮಳೆ ಬಂದಾಗಲೆಲ್ಲಾ ಈ ಸಮಸ್ಯೆ ಉಂಟಾಗುತ್ತಿದೆ. ಬಹುತೇಕ ಕಡೆ ಚರಂಡಿ ತ್ಯಾಜ್ಯ ಹಾಗೂ ನೀರು ರಸ್ತೆಗೆ ಉಕ್ಕಿ ಹರಿದಿದೆ.
ರಸ್ತೆಗಳಲ್ಲಿ, ವೃತ್ತಗಳಲ್ಲಿ ನೀರು ನಿಂತುಕೊಂಡಿತ್ತು, ತ್ಯಾಜ್ಯ ಹರಡಿಕೊಂಡಿತ್ತು. ನಗರದ ಹಲವೆಡೆ ಚರಂಡಿಗಳು ಮುಚ್ಚಿ ಹೋಗಿವೆ, ಇಲ್ಲವೇ ತ್ಯಾಜ್ಯ ತುಂಬಿಕೊಂಡಿದೆ. ಇದರಿಂದ ಮಳೆ ನೀರು ಸರಾಗವಾಗಿ ಹರಿಯಲು ಜಾಗವೇ ಇಲ್ಲದಾಗಿದೆ. ನಗರದಲ್ಲಿನ ಚರಂಡಿ ಅವ್ಯವಸ್ಥೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾರದಿಂದ ಬಿಸಿಲ ಬೇಗೆಯಿಂದ ಬಳಲಿದ್ದ ಜನರಿಗೆ ಮಳೆ ತಂಪೆರೆಯಿತು. ಜಿಲ್ಲೆಯ ಹಲವೆಡೆ ಉತ್ತಮವಾದ ಮಳೆ ಆಗಿರುವ ಹಿನ್ನೆಲೆಯಲ್ಲಿ ರೈತರು ತಮ್ಮ ಕೃಷಿ ಭೂಮಿ ಹದ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.