ಕೋಲಾರ: ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ರಾಷ್ಟ್ರಧ್ವಜಕ್ಕೆ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲಾಯಿತು.
ಆದರೆ, ಈ ಪುಷ್ಪಾರ್ಚನೆಯನ್ನು ಕಣ್ತುಂಬಿಕೊಳ್ಳಲು ಹೆಚ್ಚಿನವರಿಗೆ ಸಾಧ್ಯವಾಗಲಿಲ್ಲ. ಏಕೆಂದರೆ ಆ ಹೆಲಿಕಾಪ್ಟರ್ ದೂಳೆಬ್ಬಿಸಿತು. ಸನಿಹದಲ್ಲಿ ಹಾರಾಟ ನಡೆಸಿದ್ದರಿಂದ ಎದ್ದ ದೂಳಿನ ಭರಾಟೆಗೆ ಜನರು ಕಣ್ಣು ಮುಚ್ಚಿಕೊಂಡರು. ಇಲ್ಲವೇ ಬೆನ್ನು ತಿರುಗಿಸಿ ದೂಳಿನಿಂದ ಪಾರಾಗಲು ಪ್ರಯತ್ನಿಸಿದರು. ಬಿಳಿ ಉಡುಪು ಕೆಂಪಾಯಿತು. ಆ ಮಟ್ಟಿಗೆ ದೂಳು ಹಾಗೂ ಗಾಳಿ ಬೀಸಿತು. ಪಥಸಂಚಲನ ಮಾಡಲು ಸಜ್ಜಾಗಿದ್ದ ಪೊಲೀಸರು, ಶಾಲಾ ಮಕ್ಕಳು ದೂಳಿನಿಂದ ಪಾರಾಗಲು ಪರದಾಡಿದರು.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ‘ಹೆಲಿಕಾಪ್ಟರ್ ನನ್ನದೇ. ಈ ಬಾರಿ ಸ್ವಾತಂತ್ರ್ಯೋತ್ಸವಕ್ಕೆ ಮತ್ತಷ್ಟು ಮೆರುಗು ಸಿಗಲಿ ಎಂಬ ಉದ್ದೇಶದಿಂದ ಪುಷ್ಪಾರ್ಚನೆ ಮಾಡಲು ಹೆಲಿಕಾಪ್ಟರ್ ತರಲಾಯಿತು. ಮಕ್ಕಳಿಗೂ ಖುಷಿ ಆಗುತ್ತದೆ ಅಲ್ಲವೇ? ಆದರೆ, ದೂಳು ಏಳದಂತೆ ನೆಲಕ್ಕೆ ನೀರು ಹಾಕಿದ್ದರೆ ಸರಿ ಹೋಗುತಿತ್ತು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.