ADVERTISEMENT

ಕೋಲಾರ: ಎಚ್ಚರ, ಜಿಲ್ಲೆಯಲ್ಲಿದ್ದಾರೆ ನಕಲಿ ಡಾಕ್ಟರ್‌ಗಳು!

ರಾಜ್ಯದಲ್ಲಿ ಕೋಲಾರ ಜಿಲ್ಲೆಯಲ್ಲೇ ಅತ್ಯಧಿಕ ನಕಲಿ ವೈದ್ಯರು, ಅಕ್ರಮ ಕ್ಲಿನಿಕ್‌ –ಕಾನೂನು ಬಾಹಿರ 115 ಕ್ಲಿನಿಕ್‌ ಪತ್ತೆ

ಕೆ.ಓಂಕಾರ ಮೂರ್ತಿ
Published 14 ಸೆಪ್ಟೆಂಬರ್ 2024, 6:41 IST
Last Updated 14 ಸೆಪ್ಟೆಂಬರ್ 2024, 6:41 IST
ಕೋಲಾರದಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಆರೋಪದ ಮೇಲೆ ಈಚೆಗೆ ಕ್ಲಿನಿಕ್‌ವೊಂದನ್ನು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದರು
ಕೋಲಾರದಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಆರೋಪದ ಮೇಲೆ ಈಚೆಗೆ ಕ್ಲಿನಿಕ್‌ವೊಂದನ್ನು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದರು   

ಕೋಲಾರ: ಜಿಲ್ಲೆಯಲ್ಲಿ ನಕಲಿ ವೈದ್ಯರು, ನಕಲಿ ಕ್ಲಿನಿಕ್‌ಗಳ ಹಾವಳಿ ಮಿತಿಮೀರಿದ್ದು, ಬಗೆದಷ್ಟೂ ಪತ್ತೆ ಆಗುತ್ತಲೇ ಇವೆ. ಇದು ಜನರಲ್ಲಿ ಆತಂಕ ಉಂಟು ಮಾಡಿದೆ.

ಎಂಬಿಬಿಎಸ್‌ ಓದದೆ, ಸ್ಟೆಥಸ್ಕೋಪ್‌‌ ಕೊರಳಿಗೆ ಹಾಕಿಕೊಂಡು ಕ್ಲಿನಿಕ್‌ ನಡೆಸುತ್ತಿರುವ ಹಲವು ನಕಲಿ ವೈದ್ಯರ ಬಗ್ಗೆ ದೂರುಗಳು ದಾಖಲಾಗುತ್ತಿವೆ. ನಕಲಿ ಪ್ರಮಾಣಪತ್ರ ಸೃಷ್ಟಿಸಿಕೊಂಡು ಜನರ ಜೊತೆ ಚೆಲ್ಲಾಟವಾಡುತ್ತಿದ್ದಾರೆ.

ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಪದೇಪದೇ ಅನಧಿಕೃತ ಕ್ಲಿನಿಕ್‌ಗಳ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸುತ್ತಲೇ ಇದೆ.

ADVERTISEMENT

ಈಚೆಗೆ ನಗರದಲ್ಲಿ ಬಿ.ಕಾಂ ಮಾಡಿದ ವ್ಯಕ್ತಿಯೊಬ್ಬರು ಕ್ಲಿನಿಕ್‌ ನಡೆಸುತ್ತಿದ್ದದ್ದು ಪತ್ತೆಯಾಗಿತ್ತು. ಮತ್ತೊಂದು ಕಡೆ ಕ್ಲಿನಿಕ್‌ ಎಂಬಿಬಿಎಸ್‌ ವೈದ್ಯರದ್ದು, ನಡೆಸುತ್ತಿದ್ದದ್ದು ಮಾತ್ರ ನಕಲಿ ಡಾಕ್ಟರ್‌. ಹೀಗೆ, ಜಿಲ್ಲೆಯಲ್ಲಿ ಈವರೆಗೆ 115 ನಕಲಿ ಕ್ಲಿನಿಕ್‌ಗಳನ್ನು, ವೈದ್ಯರನ್ನು ಪತ್ತೆ ಮಾಡಲಾಗಿದೆ. ಕೆಲವರು ಎಲ್ಲಿಂದಲೋ ದಾಳಿ ವಿಚಾರ ತಿಳಿದು ರಾತ್ರೋರಾತ್ರಿ ಕ್ಲಿನಿಕ್‌ ಮುಚ್ಚಿ ಪರಾರಿಯಾದ ಪ್ರಕರಣಗಳೂ ಇವೆ. ನೋಟಿಸ್‌ ಬಂದ ಮೇಲೆ ಏಳೆಂಟು ಕ್ಲಿನಿಕ್‌ಗಳು ನೋಂದಣಿ ಮಾಡಿಕೊಂಡಿವೆ. 

‘ಹಣದ ಆಸೆ ಸೇರಿದಂತೆ ನಾನಾ ಕಾರಣಗಳಿಂದ ನಕಲಿ ವೈದ್ಯರ ವೇಷ ಧರಿಸಿ ಜನರ ಜೀವನದ ಜೊತೆ ಆಟವಾಡುತ್ತಿದ್ದಾರೆ. ಮಾಹಿತಿ ಗೊತ್ತಾಗುತ್ತಿದ್ದಂತೆ ದಾಳಿ ನಡೆಸಿ ಕಾನೂನು ಕ್ರಮ ಕೈಗೊಳ್ಳುತ್ತಿದ್ದೇವೆ. ಕೆಲವರು ಮನೆಯಿಂದಲೇ ನಕಲಿ ಕ್ಲಿನಿಕ್‌ ನಡೆಸುತ್ತಿರುವುದು ಕಂಡುಬಂದಿದೆ. ಇನ್ನು ಕೆಲವರು ಬ್ಯಾಗ್‌ ಹಾಗೂ ಸ್ಟೆಥಸ್ಕೋಪ್‌ ಇಟ್ಟುಕೊಂಡು ಮನೆಮನೆಗೆ ಹೋಗಿ ಚಿಕಿತ್ಸೆ ನೀಡುತ್ತಿರುವುದು ಪತ್ತೆಯಾಗಿದೆ. ಇನ್ನು ಕೆಲವರು ಮೊಬೈಲ್‌ ಕ್ಲಿನಿಕ್‌ ನಡೆಸುತ್ತಿದ್ದಾರೆ. ಸಾಕ್ಷಿ ಸಂಗ್ರಹಿಸಿ ಕ್ರಮ ಕೈಗೊಳ್ಳುತ್ತಿದ್ದೇವೆ’ ಎಂದು ಜಿಲ್ಲಾ ಕೆಪಿಎಂಇ ಸಕ್ಷಮ ಪ್ರಾಧಿಕಾರದ ನೋಡೆಲ್‌ ಅಧಿಕಾರಿ ಹಾಗೂ ಆರೋಗ್ಯಾಧಿಕಾರಿ ಡಾ.ಚಂದನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಈಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಕೂಡ ನಕಲಿ ವೈದ್ಯರ ವಿಚಾರ ಪ್ರಸ್ತಾಪಿಸಿದ್ದರು. ಕೋಲಾರ ಜಿಲ್ಲೆಯಲ್ಲಿ ಅತ್ಯಧಿಕ ನಕಲಿ ವೈದ್ಯರು, ಕ್ಲಿನಿಕ್‌ಗಳು ಪತ್ತೆಯಾಗಿರುವ ಬಗ್ಗೆ ಹೇಳಿದ್ದರು. ಅಲ್ಲದೇ, ನಕಲಿ ವೈದ್ಯರ ವಿರುದ್ಧ ಕ್ರಮಕೈಗೊಳ್ಳಲು ಸರ್ಕಾರ ಜಾರಿಗೊಳಿಸಿರುವ ಹೊಸ ಮಸೂದೆಗೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ. ಅದರಂತೆ ಮುಂದಿನ ದಿನಗಳಲ್ಲಿ ನಕಲಿ ವೈದ್ಯರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಅವಕಾಶವಿದೆ ಎಂದಿದ್ದರು.

ನೋಟಿಸ್‌ ನೀಡಿದ ಮೇಲೆ ಕೆಲವರು ಕ್ಲಿನಿಕ್‌ ಮುಚ್ಚಿಕೊಂಡು ಊರು ಖಾಲಿ ಮಾಡಿದ್ದಾರೆ. ಇನ್ನು ಕೆಲವರು ಹೊಸದಾಗಿ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಕಳ್ಳಾಟ ಮುಂದುವರಿಸಿದ್ದಾರೆ.

‘ರಾಜ್ಯದ ಎಲ್ಲಾ ಕಡೆ ನಕಲಿ ವೈದ್ಯರಿದ್ದಾರೆ, ಅಕ್ರಮ ಕ್ಲಿನಿಕ್‌ಗಳು ಇವೆ. ಆದರೆ, ಕೋಲಾರ ಜಿಲ್ಲೆಯಲ್ಲಿ ಪತ್ತೆ ಕಾರ್ಯ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ಇನ್ನೂ ಹಲವಾರು ಇಂಥ ಕಾನೂನು ಬಾಹಿರ ಕ್ಲಿನಿಕ್‌ಗಳು ಇವೆ. ದಾಳಿ ಮೂಲಕ ಜನರಲ್ಲಿ ಅರಿವು ಮೂಡಿಸುವುದು, ಭಯ ಹೋಗಲಾಡುವುದು ನಮ್ಮ ಉದ್ದೇಶವಾಗಿದೆ’ ಎಂದು ಡಾ.ಚಂದನ್‌ ಹೇಳಿದರು.

ಜಿಲ್ಲಾಧಿಕಾರಿಯು ಜಿಲ್ಲಾ ಸಕ್ಷಮ ಪ್ರಾಧಿಕಾರದ ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಆರೋಗ್ಯಾಧಿಕಾರಿಯು ಸದಸ್ಯ ಕಾರ್ಯದರ್ಶಿ ಆಗಿಯೂ, ಜಿಲ್ಲಾ ಆಯುಷ್‌ ಅಧಿಕಾರಿ, ಜಿಲ್ಲಾ ಐಎಂಎ ಅಧ್ಯಕ್ಷರು, ಸ್ವಯಂ ಸೇವಾ ಸಂಸ್ಥೆಯವರು (ಎನ್‌ಜಿಒ) ಸದಸ್ಯರಾಗಿರುತ್ತಾರೆ. ಈ ಪ್ರಾಧಿಕಾರವು ಆಗಿಂದಾಗ್ಗೆ ಸಭೆ ಸೇರಿ ಕ್ರಮಕ್ಕೆ ಶಿಫಾರಸ್ಸು ಮಾಡುತ್ತದೆ.

‘ನಕಲಿ ಕ್ಲಿನಿಕ್‌ಗಳು ಹಾಗೂ ನಕಲಿ ವೈದ್ಯರ ಹಿಡಿತದಿಂದ ಜಿಲ್ಲೆಯನ್ನು ಆದಷ್ಟು ಬೇಗ ಮುಕ್ತಗೊಳಿಸಲಾಗುವುದು. ಸಾರ್ವಜನಿಕರ ಜೀವಗಳ ಸಂರಕ್ಷಣೆಗಾಗಿ ಜಿಲ್ಲಾಡಳಿತವು ಸದಾ ಬದ್ಧ’ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಈಚೆಗೆ ಸಕ್ಷಮ ಪ್ರಾಧಿಕಾರದ ಸಭೆಯಲ್ಲಿ ಹೇಳಿದ್ದರು.

ನೋಟಿಸ್‌ ನೀಡಿದರೆ ಕ್ಲಿನಿಕ್‌ ಮುಚ್ಚಿ ಪರಾರಿ ಬಿ.ಕಾಂ ಓದಿದ್ದ ವ್ಯಕ್ತಿ ಕ್ಲಿನಿಕ್‌ ನಡೆಸುತ್ತಿದ್ದದ್ದು ಪತ್ತೆ ನಕಲಿ ಪ್ರಮಾಣಪತ್ರ ಸೃಷ್ಟಿಸಿಕೊಂಡು ಕೆಲಸ
ವೈದ್ಯರ ಪ್ರಮಾಣ ಪತ್ರ ಆಸ್ಪತ್ರೆಗಳ ನೋಂದಣಿ ಪತ್ರ ಗಮನಿಸಿದೇ ಚಿಕಿತ್ಸೆ ಪಡೆದು ಸಮಸ್ಯೆಗೆ ಒಳಗಾಗಬೇಡಿ. ನೋಂದಾಯಿತ ವೈದ್ಯರ ಬಳಿ ಚಿಕಿತ್ಸೆ ಪಡೆಯಿರಿ. ಫಲಕ ಪ್ರದರ್ಶನ ಕಡ್ಡಾಯ
ಡಾ.ಚಂದನ್‌ ಜಿಲ್ಲಾ ಕೆಪಿಎಂಇ ಸಕ್ಷಮ ಪ್ರಾಧಿಕಾರದ ನೋಡೆಲ್‌ ಅಧಿಕಾರಿ ಕೋಲಾರ
ಜಿಲ್ಲೆಯಲ್ಲಿ ನೋಂದಣಿ ಮಾಡಿಸಿಕೊಳ್ಳದ ಕ್ಲಿನಿಕ್‌ಗಳು
ತಾಲ್ಲೂಕು;ಸಂಖ್ಯೆ ಕೋಲಾರ;31 ಬಂಗಾರಪೇಟೆ;11 ಕೆಜಿಎಫ್‌;15 ಮಾಲೂರು;02 ಶ್ರೀನಿವಾಸಪುರ;21 ಮುಳಬಾಗಿಲು;35 ಒಟ್ಟು; 115
ನೋಂದಣಿ ಸಂಖ್ಯೆ ಪ್ರದರ್ಶನ ಕಡ್ಡಾಯ
ರಾಜ್ಯ ಆರೋಗ್ಯ ಇಲಾಖೆ ರೂಪಿಸಿರುವ ನಿಯಮದಂತೆ ಖಾಸಗಿ ಆಸ್ಪತ್ರೆಗಳು ಕ್ಲಿನಿಕ್‌ಗಳು ತಮ್ಮ ಕೆಪಿಎಂಇ ನೋಂದಣಿ ಸಂಖ್ಯೆ ಆಸ್ಪತ್ರೆ ಮತ್ತು ಮಾಲೀಕರ ಹೆಸರನ್ನು ಕಟ್ಟಡದ ಮುಂಭಾಗದಲ್ಲಿ ಪ್ರದರ್ಶಿಸಬೇಕು. ಅಲೋಪತಿ ಆಸ್ಪತ್ರೆಗಳಲ್ಲಿ ನೀಲಿ ಬಣ್ಣ ಹಾಗೂ ಆಯುರ್ವೇದಿಕ್‌ ಆಸ್ಪತ್ರೆಗಳಲ್ಲಿ ಹಸಿರು ಬಣ್ಣದ ಬೋರ್ಡ್‌ ಬಳಸಬೇಕು. ಕರ್ನಾಟಕ ಖಾಸಗಿ ವೈದ್ಯಕೀಯ ಅಧಿನಿಯಮ 2007 ಹಾಗೂ ತಿದ್ದುಪಡಿ ನಿಯಮ 2017 ರಂತೆ ಖಾಸಗಿ ಆರೋಗ್ಯ ಸಂಸ್ಥೆಗಳು ಕಡ್ಡಾಯವಾಗಿ ಕೆಪಿಎಂಇ ನಿಯಮಾನುಸಾರ ನೋಂದಣಿ ಆಗಿರಬೇಕಾಗುತ್ತದೆ.
ಕೇವಲ ಮೂರು ಎಫ್‌ಐಆರ್‌!
ಕೋಲಾರ ಜಿಲ್ಲೆಯಲ್ಲಿ ಈವರೆಗೆ ನೂರಾರು ನಕಲಿ ಕ್ಲಿನಿಕ್‌ಗಳು ಪತ್ತೆಯಾಗಿವೆ. ಇವರನ್ನು ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾ ಕೆಪಿಎಂಇ ಸಕ್ಷಮ ಪ್ರಾಧಿಕಾರದ ಮುಂದೆ ಕರೆಯಿಸಿ ವಿಚಾರಣೆ ಕೂಡ ಮಾಡಲಾಗಿದೆ. ಆದರೆ ಕೇವಲ ಮೂರು ಕ್ಲಿನಿಕ್‌ಗಳ ವೈದ್ಯರ ಮೇಲಷ್ಟೇ ಎಫ್‌ಐಆರ್‌ ದಾಖಲಾಗಿದೆ. ಇನ್ನು 30 ಪ್ರಕರಣಗಳ ನ್ಯಾಯಾಲಯದ ಮುಂದಿವೆ. ನಕಲಿ ವೈದ್ಯರು ಕ್ಲಿನಿಕ್‌ಗಳ ವಿರುದ್ಧ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ ಕಾಯ್ದೆ (ಕೆಪಿಎಂಇ) ಅನ್ವಯ ಕ್ರಮ ಕೈಗೊಳ್ಳಬೇಕು. ಆದರೆ ನೋಟಿಸ್‌ ನೀಡಿರುವುದು ಬಿಟ್ಟರೆ ಕ್ರಮ ಆಗಿದ್ದು ಕಡಿಮೆ. ನೂರಾರು ನಕಲಿ ವೈದ್ಯರ ಪೈಕಿ ಬೆರಳೆಣಿಕೆ ಮಂದಿ ಮೇಲಷ್ಟೇ ಎಫ್‌ಐಆರ್‌ ಆಗಿದೆ. ಪರಿಣಾಮಕಾರಿಯಾಗಿ ಕಾನೂನು ಜಾರಿಯಾಗದ ಕಾರಣ ನಕಲಿ ವೈದ್ಯರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.