ADVERTISEMENT

ಟೇಕಲ್‌: ಬೃಹತ್ ಬಂಡೆ ಉರುಳಿ ಹಿಟಾಚಿ ಚಾಲಕ ಸಾವು

ಟೇಕಲ್‌ ಸಮೀಪ ಹಳೇಪಾಳ್ಯ ಬೆಟ್ಟದಲ್ಲಿ ಕಲ್ಲು ಬಂಡೆ ಒಡೆಯುವಾಗ ಅವಘಡ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 23:30 IST
Last Updated 18 ಜೂನ್ 2024, 23:30 IST
ಅವಘಡ ನಡೆದ ಸ್ಥಳಕ್ಕೆಮಂಗಳವಾರ ‌ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ ಭೇಟಿ ನೀಡಿ ಪರಿಶೀಲಿಸಿದರು
ಅವಘಡ ನಡೆದ ಸ್ಥಳಕ್ಕೆಮಂಗಳವಾರ ‌ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ ಭೇಟಿ ನೀಡಿ ಪರಿಶೀಲಿಸಿದರು    

ಟೇಕಲ್‌ (ಮಾಲೂರು): ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಹಳೇಪಾಳ್ಯ ಗ್ರಾಮದ ಬಳಿ ಮಂಗಳವಾರ ಕಲ್ಲು ಬಂಡೆ ಒಡೆಯವ ಸಂದರ್ಭದಲ್ಲಿ ಹಿಟಾಚಿ ಮೇಲೆ ಬೃಹತ್‌ ಕಲ್ಲು ಬಂಡೆ ಬಿದ್ದು ಚಾಲಕ ಸ್ಥಳದಲ್ಲೇ
ಮೃತಪಟ್ಟಿದ್ದಾರೆ.

ಕೆಜಿಎಫ್‌ ತಾಲ್ಲೂಕಿನ ಕ್ಯಾಸಂಬಳ್ಳಿ ಗ್ರಾಮದ ಪ್ರವೀಣ್ (32) ಮೃತ ಚಾಲಕ ಎಂದು ಗುರುತಿಸಲಾಗಿದೆ. ಟ್ರ್ಯಾಕ್ಟರ್‌ ಮೇಲೂ ಬಂಡೆ ಉರುಳಿದ್ದು, ಇತರ ಕಾರ್ಮಿಕರು ಸಿಲುಕಿಕೊಂಡಿರಬಹುದೆಂಬ ಶಂಕೆಯಿಂದ ಜೆಸಿಬಿ ಬಳಸಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಬಂಡೆ ಕೆಳಗೆ ಸಿಲುಕಿರುವ ಪ್ರವೀಣ್‌ ಮೃತ ದೇಹ ತೆಗೆಯುವ ಕಾರ್ಯಾಚರಣೆಯೂ ನಡೆದಿದೆ.

ಟೇಕಲ್ ವ್ಯಾಪ್ತಿಯ ಕೆ.ಜಿ.ಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಹಳೇಪಾಳ್ಯ ಗ್ರಾಮಕ್ಕೆ ಸೇರಿದ ಭೂತಮ್ಮ ಬೆಟ್ಟಕ್ಕೆ ಹೊಂದಿಕೊಂಡಿರುವ ಸರ್ವೇ ನಂ 53 ರಲ್ಲಿ ಅದೇ ಗ್ರಾಮದ ಮಂಜುನಾಥ್‌ ಎಂಬುವವರು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದರು ಎಂಬುದು ಗೊತ್ತಾಗಿದೆ. ಗೋಮಾಳ ಜಾಗವಾಗಿದ್ದು, ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಗುತ್ತಿಗೆಗೆ ಮಂಜೂರು ಮಾಡಿತ್ತು ಎನ್ನಲಾಗಿದೆ.

ADVERTISEMENT

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ, ಮಾಸ್ತಿ
ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಸುನಿಲ್‌ ಕುಮಾರ್‌ ಹಾಗೂ ಆರ್‌ಐ ನಾರಾಯಣಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

‘ಹಳೇಪಾಳ್ಯ ಮಂಜುನಾಥ್‌ ಎಂಬುವರು ಗುತ್ತಿಗೆ ಪಡೆದು ಕಲ್ಲು ಬಂಡೆ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ರಾತ್ರಿ ಮಳೆ ಬಂದಿದ್ದರಿಂದ ಈ ಭಾಗದಲ್ಲಿ ನೆಲ ಕುಸಿದು ಈ ದುರ್ಘಟನೆ ನಡೆದಿದೆ. ಈ ಸ್ಥಳ ಅರಣ್ಯ ಇಲಾಖೆಯದ್ದೋ ಅಥವಾ ಕಂದಾಯ ಇಲಾಖೆಗೆ ಸೇರಿದೆಯೋ ಎಂಬುದನ್ನು ಪರಿಶೀಲಿಸಲಾಗುವುದು. ಗಣಿ ಹಾಗೂ ಭೂವಿಜ್ಞಾನ ಇಲಾಖೆಯಿಂದ ಮಾಹಿತಿ ಪಡೆಯಲಾಗುವುದು’ ಎಂದು ನಾರಾಯಣ ಸುದ್ದಿಗಾರರಿಗೆ ತಿಳಿಸಿದರು.

‘ಈ ಹಿಂದೆಯೂ ಇಲ್ಲಿ ಇಂತಹ ಘಟನೆಗಳು ನಡೆದಿದ್ದು ಸಾವು ನೋವುಗಳು ಸಂಭವಿಸಿವೆ. ಆಗ ಕಲ್ಲು ಗಣಿಗಾರಿಕೆ ನಿಲ್ಲಿಸಲಾಗಿತ್ತು. ಸಾಂಪ್ರದಾಯಿಕ ಕಲ್ಲು ಕುಟುಕರಿಗೆ ಮಾತ್ರ ತಾತ್ಕಾಲಿಕವಾಗಿ ಅನುಮತಿ ನೀಡಲಾಗಿರುತ್ತದೆ. ಬೃಹತ್ ಯಂತ್ರೋಪಕರಣ ಬಳಸುವುದು ಕಾನೂನು ಬಾಹಿರ. ಆದರೆ, ಇಲ್ಲಿ ಯಂತ್ರ ಬಳಸಿ ಕಾನೂನು ಬಾಹಿರವಾಗಿ ಕೆಲಸ ನಡೆಯುತ್ತಿರುವುದು ಕಂಡು ಬಂದಿದೆ. ಮಾಲೀಕರು ಮುಂಜಾಗ್ರತಾ ಕ್ರಮವನ್ನೂ ವಹಿಸಿಲ್ಲ, ಸ್ಫೋಟಕ ಬಳಸಿರುವ ಮಾಹಿತಿಯೂ ಇದೆ. ಪ್ರಕರಣ ದಾಖಲಿಸಿಕೊಂಡಿದ್ದು, ಈ ಬಗ್ಗೆ
ತನಿಖೆ ನಡೆಸಿ ಕ್ರಮ ವಹಿಸಲಾಗುವುದು’ ಎಂದರು.

ಕೋಲಾರ ಜಿಲ್ಲೆಯ ಟೇಕಲ್‌ ಸಮೀಪ ಹಳೇಪಾಳ್ಯಬೆಟ್ಟದಲ್ಲಿ ಬಂಡೆ ಉರುಳಿ ಬಿದ್ದು ಅವಘಡ ನಡೆದಿರುವ ಸ್ಥಳದಲ್ಲಿ ತೆರವು ಕಾರ್ಯಾಚರಣೆ (ಎಡಚಿತ್ರ) ಟ್ರ್ಯಾಕ್ಟರ್‌ ಮೇಲೆ ಬಂಡೆ ಉರುಳಿ ಬಿದ್ದಿರುವುದು
ಕೋಲಾರ ಜಿಲ್ಲೆಯ ಟೇಕಲ್‌ ಸಮೀಪ ಹಳೇಪಾಳ್ಯಬೆಟ್ಟದಲ್ಲಿ ಟ್ರ್ಯಾಕ್ಟರ್‌ ಮೇಲೆ ಬಂಡೆ ಉರುಳಿ ಬಿದ್ದಿರುವುದು
ಘಟನಾ ಪ್ರದೇಶವು ಮಂಜುನಾಥ್‌ ಎಂಬುವರು ಗುತ್ತಿಗೆ ಪಡೆದಿರುವುದಾಗಿ ಹೇಳುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು ಅಕ್ರಮವೋ ಸಕ್ರಮವೊ ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು.
-ಎಂ.ನಾರಾಯಣ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೋಲಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.