ಕೋಲಾರ: ತಾಲ್ಲೂಕಿನ ತೊಟ್ಲಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡದ ಯುವಕನನ್ನು ಪ್ರೀತಿಸುತ್ತಿದ್ದ ಪುತ್ರಿಯನ್ನು ಕೊಂದ ತಂದೆಯು ಸದ್ದಿಲ್ಲದೇ ಆಕೆಯನ್ನು ಅಂತ್ಯಕ್ರಿಯೆ ನಡೆಸಿರುವ ಆರೋಪ ಕೇಳಿ ಬಂದಿದೆ.
ರಮ್ಯಾ (19) ಕೊಲೆಯಾದ ಯುವತಿ. ಎಷ್ಟೇ ಬುದ್ಧಿವಾದ ಹೇಳಿದರೂ ಕೇಳದಿದ್ದರಿಂದ ಒಕ್ಕಲಿಗ ಸಮುದಾಯದ ವೆಂಕಟೇಶಗೌಡ, ತನ್ನ ಮಗಳನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆ ಎಂದು ಹೇಳಿ ಆಗಸ್ಟ್ 25ರಂದು ಹೆತ್ತವರು ಆಕೆಯ ಅಂತ್ಯಸಂಸ್ಕಾರ ನಡೆಸಿದ್ದರು. ಬಳಿಕ ಯುವತಿಯನ್ನು ಕೊಲೆ ಮಾಡಿರುವ ವಿಚಾರ ಊರಿನಲ್ಲಿ ಹಬ್ಬಿದ್ದರಿಂದ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಆಕೆಯ ತಂದೆಯನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮರ್ಯಾದೆಗೇಡು ಹತ್ಯೆ ಎಂಬುದು ಗೊತ್ತಾಗಿದೆ. ವೆಂಕಟೇಶಗೌಡ ಹಾಗೂ ಸಹೋದರರಾದ ಮೋಹನ್ ಹಾಗೂ ಚೌಡೇಗೌಡ ಎಂಬುವರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಕೊಲೆಯಾದ ಯುವತಿಯ ಶವವನ್ನು ಭಾನುವಾರ ಬೆಳಿಗ್ಗೆ ತಹಶೀಲ್ದಾರ್ ಹರ್ಷವರ್ಧನ್ ಅವರ ಸಮ್ಮುಖದಲ್ಲಿ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸರ್ಕಲ್ ಇನ್‌ಸ್ಪೆಕ್ಟರ್ ಲೋಕೇಶ್ ಇದ್ದರು.
ಯುವಕನದ್ದು ತೊಟ್ಲಿ ಗ್ರಾಮ ಸಮೀಪದ ಆಲೇರಿ ಗ್ರಾಮ. ರಮ್ಯಾ ಮಧ್ಯ ರಾತ್ರಿ ಆ ಯುವಕನೊಂದಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದನ್ನು ತಂದೆ ಗಮನಿಸಿ ಈ ಕೃತ್ಯ ಎಸಗಿರುವುದು ಗೊತ್ತಾಗಿದೆ.
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.