ADVERTISEMENT

ಮುಳಬಾಗಿಲು: ಮಳೆ ಬಂದರೆ ವಿದ್ಯಾರ್ಥಿಗಳಿಗೆ ರಜೆ

ಕೆ.ತ್ಯಾಗರಾಜ್ ಎನ್.ಕೊತ್ತೂರು.
Published 26 ಜೂನ್ 2024, 7:14 IST
Last Updated 26 ಜೂನ್ 2024, 7:14 IST
   

ಮುಳಬಾಗಿಲು: ಸಾಮಾನ್ಯವಾಗಿ ಸರ್ಕಾರಿ ರಜೆ ಹಾಗೂ ಭಾನುವಾರ ದಿನದಂದು ವಿದ್ಯಾರ್ಥಿಗಳಿಗೆ ರಜೆ ನೀಡುವುದು ಸಾಮಾನ್ಯ. ಆದರೆ, ಮುಳಬಾಗಿಲು ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಮಳೆ ಬಂದರೆ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಜೆ ಪಡೆಯುವಂತಾಗಿದೆ.

ಕರ್ನಾಟಕದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರಿಂದ 1949ರಲ್ಲಿ ಉದ್ಘಾಟನೆಗೊಂಡಿರುವ ಮುಳಬಾಗಿಲು ಸರ್ಕಾರಿ ಬಾಲಕರ ಪ್ರೌಢಶಾಲೆ ಕಟ್ಟಡ ಬಹುತೇಕ ಬೀಳುವ ಸ್ಥಿತಿಯಲ್ಲಿದ್ದು, ವಿದ್ಯಾರ್ಥಿಗಳು ಆತಂಕದಲ್ಲಿಯೇ ಪಾಠ ಕೇಳುವಂತಾಗಿದೆ.

ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಬಾಲಕರ ಪ್ರೌಢಶಾಲೆ ಪ್ರಾರಂಭದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಯನ್ನು ಒಳಗೊಂಡಿತ್ತು. ಆದರೆ, ಈಚೆಗೆ ಸುಮಾರು ಹತ್ತು ವರ್ಷಗಳ ಹಿಂದೆ ಕಾಲೇಜು ಪ್ರತ್ಯೇಕವಾಗಿ ನೂತನ ಕಟ್ಟಡಕ್ಕೆ ಸ್ಥಳಾಂತರವಾಗಿದೆ. ಆದರೆ, ಪ್ರೌಢಶಾಲೆ ಮಾತ್ರ ಹಳೆಯ ಕಟ್ಟಡದಲ್ಲಿಯೇ ಮುಂದುವರೆದಿದೆ. ಕಟ್ಟಡದ ಬಹುತೇಕ ಕೊಠಡಿಗಳ ಚಾವಣಿ ಹಾಗೂ ಗೋಡೆಗಳ ಸಿಮೆಂಟ್ ಉದುರುತ್ತಿದ್ದರೆ, ಕೆಲವು ಕೊಠಡಿಗಳಿಗೆ ಕಿಟಕಿ ಬಾಗಿಲುಗಳೇ ಇಲ್ಲ. ಇನ್ನೂ ಕೆಲವು ಕೋಣೆಗಳ ಕಿಟಕಿ ಬಾಗಿಲುಗಳು ಗೆದ್ದಲು ತಿಂದು ನಾಶಪಡಿಸಿವೆ.

ADVERTISEMENT

ಮುಳಬಾಗಿಲು ನಗರದಲ್ಲಿಯೇ ಮೊಟ್ಟಮೊದಲ ಮೊದಲ ಪ್ರೌಢಶಾಲೆಯಾದ ಈ ಶಾಲೆ 19 ಕೊಠಡಿಗಳನ್ನು ಹೊಂದಿದ್ದು, ಇವುಗಳಲ್ಲಿ ಐದು ಕೊಠಡಿಗಳು ಬಳಕೆಗೆ ಬಾರದಂತಹ ಸ್ಥಿತಿಯಲ್ಲಿವೆ. 450 ಮಂದಿ ವಿದ್ಯಾರ್ಥಿಗಳು 8 ರಿಂದ 10ನೇ ತರಗತಿವರೆಗೂ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಇನ್ನೂ ಕೆಲವರು ನೂತನವಾಗಿ ದಾಖಲಾಗುತ್ತಲೇ ಇದ್ದಾರೆ. ಶಾಲೆಯಲ್ಲಿ ಒಟ್ಟು 22 ಮಂದಿ ಬೋಧಕರು, ಇಬ್ಬರು ಅತಿಥಿ ಶಿಕ್ಷಕರಿದ್ದಾರೆ. ಹಿಂದಿ, ಸಮಾಜ ವಿಜ್ಞಾನ, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ 2 ಡಿಗ್ರೂಪ್ ಹುದ್ದೆಗಳು ಖಾಲಿ ಇವೆ.

ಇನ್ನು ಬಹುತೇಕ ಕೊಠಡಿಗಳ ಚಾವಣಿ ಅಲ್ಲಲ್ಲಿ ಕಿತ್ತು ಬಂದಿದ್ದು ಕಬ್ಬಿಣದ ಸಲಾಕೆಗಳು ತೇಲಿಕೊಂಡಿವೆ. ಮಳೆಗೆ ನೆನೆದು ಕಬ್ಬಿಣದ ಸಲಾಕೆಗಳೂ ಸಹ ತುಕ್ಕು ಹಿಡಿದಿವೆ. ಕೆಲವು ಕೊಠಡಿಗಳಲ್ಲಿ ಚಾವಣಿ ಬಿರುಕು ಬಿಟ್ಟು ಬೀಳುವ ಹಂತಕ್ಕೆ ತಲುಪಿದೆ. ಕೊಠಡಿಗಳ ಒಳಗೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕಾಲಿಡಲೂ ಭಯ ಪಡುವಂತಹ ವಾತಾವರಣ ಇದೆ. ಆದರೂ ವಿಧಿ ಇಲ್ಲದೆ ವಿದ್ಯಾರ್ಥಿಗಳು ಸಿಮೆಂಟ್ ಸದಾ ಉರುಳಿ ಬೀಳುವ ಕೋಣೆಗಳಲ್ಲಿಯೇ ಪಾಠ ಕೇಳುತ್ತಿದ್ದಾರೆ.

ಇನ್ನು ಕಟ್ಟಡದ ಸಿಮೆಂಟ್ ಒಳಗಿನ ಆಧಾರ ತೊಲೆಗಳು ಅಲ್ಲಲ್ಲಿ ಸಿಮೆಂಟೇ ಇಲ್ಲದೆ ಕೇವಲ ಕಬ್ಬಿಣದಲ್ಲಿ ಮಾತ್ರ ನಿಂತಿದೆ.ಅವುಗಳ ಕೆಳಗೆ ಹಾದು ಹೋಗಲು ಹಾಗೂ ನಿಂತುಕೊಳ್ಳಲೂ ಸಹ ವಿದ್ಯಾರ್ಥಿಗಳು ಭಯ ಪಡುವಂತಿದೆ.

ಗೋಡೆಗಳ ಮೇಲೆ ಮಳೆಯ ನೀರು: ಕಟ್ಟಡ ತೀರಾ ಹಳೆಯದಾಗಿದ್ದು, ಮಳೆಯಿಂದಾಗಿ ಎಲ್ಲಾ ಗೋಡೆಗಳು ನೆನೆದು ಗೋಡೆಗಳ ಮೇಲೆ ನೀರು ಇಳಿದಿವೆ. ಇನ್ನೂ ಕೆಲವು ಗೋಡೆಗಳು ನೆನೆದು ಪ್ಲಾಸ್ಟಿಂಗ್ ಕಿತ್ತು ಹೋಗಿವೆ. ಹೀಗಿದ್ದರೂ ವಿದ್ಯಾರ್ಥಿಗಳಿಗೆ ನೆನೆದ ಕೊಠಡಿಗಳಲ್ಲಿಯೇ ಕೂರುವ ಸ್ಥಿತಿ ಇದೆ. ಇನ್ನು ಕೆಲವು ಕೊಠಡಿಗಳಲ್ಲಿ ಈಚೆಗೆ ಬಿದ್ದ ಸಣ್ಣ ಪುಟ್ಟ ಮಳೆಯಿಂದಲೂ ನೀರು ಸೋರಿಕೆಯಾಗಿದೆ.

ಐದು ಕೊಠಡಿಗಳು ಸಂಪೂರ್ಣ ನಾಶ: ಐದು ಕೊಠಡಿಗಳಲ್ಲಿ ಚಾವಣಿಯ ಸಿಮೆಂಟ್ ಉದುರಿ,ಕಿಟಕಿ ಬಾಗಿಲುಗಳು ಮುರಿದು ಹೋಗಿ, ಕಬ್ಬಿಣದ ಸಲಾಕೆಗಳು ಮುರಿದು ಅಲ್ಲಲ್ಲಿ ಗೋಡೆಗಳೇ ಬಿರುಕು ಬಿಟ್ಟಿವೆ. ಇದರಿಂದ ಮೊದಲ ಅಂತಸ್ತಿನಲ್ಲಿರುವ ಮೂರು ಹಾಗೂ ಕೆಳಗೆ ಇರುವ ಎರಡು ಕೊಠಡಿಗಳು ಸಂಪೂರ್ಣವಾಗಿ ನಾಶವಾಗಿವೆ.

ಇದ್ದೂ ಇಲ್ಲದ ಶೌಚಾಲಯ: 450 ಮಂದಿ ವಿದ್ಯಾರ್ಥಿಗಳು ಇರುವ ಶಾಲೆಯಲ್ಲಿ ಮೇಲ್ನೋಟಕ್ಕೆ ಶೌಚಾಲಯ ಕಟ್ಟಡ ಕಾಣಿಸಿದರೂ ಒಳಗೆ ಶೌಚಾಲಯ ಬೇಸನ್‌, ಪಿಟ್ ವ್ಯವಸ್ಥೆ ಹಾಗೂ ನೀರಿನ ಸಂಪರ್ಕವಿಲ್ಲದೆ ಶೌಚಾಲಯ ಗಬ್ಬು ನಾರುತ್ತಿದೆ. 30 ಮಂದಿ ಶಿಕ್ಷಕರಿಗೂ ಶೌಚಾಲಯದ ಸಮಸ್ಯೆ ಕಾಡುತ್ತಿದೆ.

ಕುಡಿಯುವ ನೀರನ್ನು ಕೊಂಡು ಕುಡಿಯುವ ಪರಸ್ಥಿತಿ: ಇನ್ನು ಶಾಲೆಯಲ್ಲಿ ಒಂದು ಕೊಳವೆ ಬಾವಿ ಇದ್ದರೂ ಅಲ್ಪಸ್ವಲ್ಪ ಮಾತ್ರ ನೀರು ಬರುತ್ತದೆ. ಅದರಲ್ಲಿ ವಿದ್ಯಾರ್ಥಿಗಳು ಕೈ ಸ್ವಚ್ಛತೆಗೆ ಮಾತ್ರ ಆಗುತ್ತದೆ. ಅದಕ್ಕೆ ಶೌಚಾಲಯಕ್ಕೂ ನೀರಿಲ್ಲ. ಕುಡಿಯುವ ನೀರಿಗೆ ಪ್ರತಿದಿನ ಒಂದು ಕ್ಯಾನ್‌ ₹25ರಂತೆ 10 ಕ್ಯಾನ್ ಖರೀದಿಸಿ ಬಳಸುತ್ತೇವೆ ಎಂಬುದು ಶಿಕ್ಷಕ ಕಾಮ್ರೆಡ್ ಎಂ. ಶಂಕರ್ ಮಾತಾಗಿದೆ.

‘ದಿನ ಕಳೆಯುವುದೇ ಕಷ್ಟ’

ಶಾಲೆಯ ಕಟ್ಟಡವನ್ನು ನಿರ್ಮಾಣ ಮಾಡಿ ದಶಕಗಳೇ ಕಳೆದಿವೆ. ಎಷ್ಟೋ ಕೊಠಡಿಗಳು ಬೀಳುವ ಸ್ಥಿತಿಗೆ ತಲುಪಿವೆ. ಮಳೆ ಬಂದರೆ ಎಲ್ಲಾ ಕೊಠಡಿಗಳು ಸೋರುವ ಕಾರಣದಿಂದ ವಿದ್ಯಾರ್ಥಿಗಳಿಗೆ ರಜೆ ನೀಡುವ ಸ್ಥಿತಿ ಏರ್ಪಟ್ಟಿದೆ. ಶಾಲೆಯಲ್ಲಿ ಕುಡಿಯಲೂ ನೀರಿಲ್ಲ, ಶೌಚಕ್ಕೂ ನೀರಿಲ್ಲ. ಕಿಟಕಿ ಬಾಗಿಲುಗಳ ವ್ಯವಸ್ಥೆಯೂ ಇಲ್ಲ. ಹಾಗಾಗಿ ಬೀಳುವ ಹಂತಕ್ಕೆ ತಲುಪಿರುವ ಶಾಲೆಯಲ್ಲಿ ದಿನ ಕಳೆದರೆ ಸಾಕು ಎನ್ನುವಂತಾಗಿದೆ – ಬಿ.ಎಂ.ಗೋಪಾಲ್, ಶಿಕ್ಷಕ

‘ಶಾಸಕರೊಂದಿಗೆ ದುರಸ್ತಿಗೆ ಚರ್ಚೆ’

ಶಾಲೆಯ ಸ್ಥಿತಿಯನ್ನು ಕಂಡು ಏನು ಮಾಡಬೇಕೆಂದು ತಿಳಿಯದಾಗಿದೆ. ಶಾಸಕರ ಗಮನಕ್ಕೆ ತಂದು ದುರಸ್ತಿಗೊಳಿಸಲು ಚರ್ಚಿಸಲಾಗುವುದು – ಕೆ.ಆರ್.ಗಂಗರಾಮಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.