ADVERTISEMENT

ಸಿ.ಎಂ ಬದಲಿಸಿದರೆ ತೀವ್ರ ಹೋರಾಟ: ಮಠಾಧೀಶರ ಸಭೆಯಲ್ಲಿ ಎಚ್ಚರಿಕೆ ಸಂದೇಶ

ಯಡಿಯೂರಪ್ಪ ಪರ ವೀರಶೈವ ಲಿಂಗಾಯತ ಸಮುದಾಯದ ಮಠಾಧೀಶರ ಸಭೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2021, 15:19 IST
Last Updated 20 ಜುಲೈ 2021, 15:19 IST
ಮುಖ್ಯಮಂತ್ರಿ ಯಡಿಯೂರಪ್ಪರ ಬದಲಾವಣೆ ಸುದ್ದಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಮಠಾಧೀಶರು ಹಾಗೂ ಮುಖಂಡರು ಕೋಲಾರ ತಾಲ್ಲೂಕಿನ ನಾಗಲಾಪುರದಲ್ಲಿ ಮಂಗಳವಾರ ಸಭೆ ನಡೆಸಿದರು
ಮುಖ್ಯಮಂತ್ರಿ ಯಡಿಯೂರಪ್ಪರ ಬದಲಾವಣೆ ಸುದ್ದಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಮಠಾಧೀಶರು ಹಾಗೂ ಮುಖಂಡರು ಕೋಲಾರ ತಾಲ್ಲೂಕಿನ ನಾಗಲಾಪುರದಲ್ಲಿ ಮಂಗಳವಾರ ಸಭೆ ನಡೆಸಿದರು   

ಕೋಲಾರ: ‘ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಬಿಜೆಪಿಗೆ ಭದ್ರ ನೆಲೆ ಕಲ್ಪಿಸಿ ಜನಪರ ಆಡಳಿತ ನಡೆಸುತ್ತಿರುವ ಬಿ.ಎಸ್‌.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಗಾದಿಯಿಂದ ಕೆಳಗಿಳಿಸಿದರೆ ರಾಜ್ಯದೆಲ್ಲೆಡೆ ತೀವ್ರ ಹೋರಾಟ ನಡೆಸುತ್ತೇವೆ’ ಎಂದು ವೀರಶೈವ ಲಿಂಗಾಯತ ಸಮುದಾಯದ ಮಠಾಧೀಶರು ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿ ಯಡಿಯೂರಪ್ಪರ ಬದಲಾವಣೆ ಸುದ್ದಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿತಾಲ್ಲೂಕಿನ ನಾಗಲಾಪುರದಲ್ಲಿ ಮಂಗಳವಾರ ನಾಗಲಾಪುರ ಮಹಾಸಂಸ್ಥಾನ ಮಠದ ತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವಿ ಮಠದ ಮಹಂತಲಿಂಗೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಠಾಧೀಶರು ಬಿಜೆಪಿ ವರಿಷ್ಠರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದರು.

‘ಯಡಿಯೂರಪ್ಪ ಅವರು ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ. ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿ ಮುಂದುವರಿಯಬೇಕು. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಸಿದರೆ ಭವಿಷ್ಯದಲ್ಲಿ ಬಿಜೆಪಿಗೆ ರಾಜ್ಯದಲ್ಲಿ ಉಳಿಗಾಲವಿಲ್ಲ’ ಎಂದು ಮಹಂತಲಿಂಗೇಶ್ವರ ಸ್ವಾಮೀಜಿ ಗುಡುಗಿದರು.

ADVERTISEMENT

‘ಯಡಿಯೂರಪ್ಪ ಲಿಂಗಾಯತ ಸಮುದಾಯದ ಪ್ರಭಾವಿ ಮುಖಂಡರು. ಅವರು ಜೀವಂತ ಇರುವವರೆಗೂ ಅವರೇ ಸಮಾಜದ ನಾಯಕರಾಗಿರುತ್ತಾರೆ. ಮುಖ್ಯಮಂತ್ರಿ ಆಗಬೇಕೆಂದು ಬಯಸುತ್ತಿರುವವರು ಮೊದಲು ರಾಜ್ಯ ಪ್ರವಾಸ ಮಾಡಿ ಜನರ ಮನಸ್ಸು ಗೆಲ್ಲಲಿ’ ಎಂದರು.

ಸರಿಯಲ್ಲ: ‘ಯುವ ನಾಯಕರಿಗೆ ಭವಿಷ್ಯದಲ್ಲಿ ಮುಖ್ಯಮಂತ್ರಿಯಾಗಲು ಸಾಕಷ್ಟು ಅವಕಾಶವಿದೆ. ಈಗ ಸಿ.ಎಂ ಆಗಲು ತುದಿಗಾಲಲ್ಲಿ ನಿಂತಿರುವವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪರ ಅನುಭವದ ನೆರವು ಪಡೆದು ಪಕ್ಷ ಗೆಲ್ಲಿಸಿ ಮುಖ್ಯಮಂತ್ರಿಯಾಗಲಿ. ಅದು ಬಿಟ್ಟು ಯಾರೋ ಶ್ರಮಪಟ್ಟು ತಂದ ಅಧಿಕಾರ ಕಿತ್ತುಕೊಳ್ಳಲು ಬರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಯಡಿಯೂರಪ್ಪ ಅವರು ಈ ಹಿಂದೆ ಬಿಜೆಪಿ ಬಿಟ್ಟು ಹೋದಾಗ ಉಳಿದ ನಾಯಕರಿಗೆ 104 ಸೀಟು ಗೆಲ್ಲಿಸಿಕೊಂಡು ಬರಲು ಸಾಧ್ಯವಾಗಲಿಲ್ಲ. ಸರ್ಕಾರ ನಡೆಸುವಾಗ ಸಣ್ಣಪುಟ್ಟ ಲೋಪ ಸಹಜ. ಆ ಲೋಪ ತಿದ್ದಿಕೊಳ್ಳಲು ಅವಕಾಶ ಕೊಡುವುದನ್ನು ಬಿಟ್ಟು ಅಧಿಕಾರದಿಂದಲೇ ಕೆಳಗಿಳಿಸಲು ಸಂಚು ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಕಿಡಿಕಾರಿದರು.

‘ಯಡಿಯೂರಪ್ಪರ ವಿರುದ್ಧ ಹಾದಿಬೀದಿಯಲ್ಲಿ ಹೇಳಿಕೆ ನೀಡುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಬುದ್ಧಿ ಹೇಳಲು 10 ಬಾರಿ ಕರೆ ಮಾಡಿದರೂ ಸ್ವೀಕರಿಸಿಲ್ಲ. ಇಂತಹ ನೂರು ಯತ್ನಾಳರನ್ನು ಸೃಷ್ಟಿಸುವ ಸಾಮರ್ಥ್ಯ ಯಡಿಯೂರಪ್ಪ ಅವರಿಗೆ ಇದೆ’ ಎಂದು ಕೆಂಡಾಮಂಡಲರಾದರು.

ಹೋರಾಟಕ್ಕೆ ಸಿದ್ಧ: ‘ಬಿ.ಎಲ್.ಸಂತೋಷ್ ಅವರು ಈ ಹಿಂದೆ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಯತ್ನಿಸಿದ್ದರು. ಆಗ ತಾವು ಕನಿಷ್ಠ 4 ಸೀಟು ಗೆಲ್ಲಿಸಿಕೊಂಡು ಬಂದರೆ ನಾನೇ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವಂತೆ ಯಡಿಯೂರಪ್ಪ ಅವರಿಗೆ ಹೇಳುತ್ತೇನೆ ಎಂದು ಸಂತೋಷ್‌ರಿಗೆ ತಿಳಿಸಿದ್ದೆ’ ಎಂದರು.

‘ಯಡಿಯೂರಪ್ಪ ಸಿ.ಎಂ ಹುದ್ದೆಯಲ್ಲೇ ಮುಂದುವರಿಸುವ ನಿಟ್ಟಿನಲ್ಲಿ ಹೋರಾಟ ಮಾಡಲು ಸಿದ್ಧವಿದ್ದೇವೆ. ಸಮುದಾಯದ ಎಲ್ಲಾ ಮುಖಂಡರು ಹೋರಾಟದ ರೂಪುರೇಷೆ ರೂಪಿಸುತ್ತಿದ್ದು, ತುರ್ತು ಸಭೆ ಕರೆದು ಚರ್ಚಿಸುತ್ತೇವೆ. ಅಗತ್ಯವಿದ್ದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡುತ್ತೇವೆ’ ಎಂದು ಹೇಳಿದರು.

‘ಪ್ರವಾಹ ಪರಿಸ್ಥಿತಿ, ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ಯಡಿಯೂರಪ್ಪ ಅವರಿ ರಾಜ್ಯದ ಜನರಿಗಾಗಿ ಹಗಲಿರುಳು ದುಡಿದಿದ್ದಾರೆ. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಹೋರಾಟ ಅನಿವಾರ್ಯ’ ಎಂದು ತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.