ಮುಳಬಾಗಿಲು: ನಗರದಿಂದ ರಾಮಸಮುದ್ರಂ ಕಡೆಗೆ ಹೋಗುವ ಮಾರ್ಗದಲ್ಲಿರುವ ಚೆಲುವನಾಯಕನಹಳ್ಳಿ ಸಮೀಪದ ಚಲ್ಲನ ಕೆರೆಯಲ್ಲಿ ರಾಜಾರೋಷವಾಗಿ ಮರಳು ಫಿಲ್ಟರ್ ದಂಧೆ ನಡೆಯುತ್ತಿದ್ದು, ಕೆರೆಯಲ್ಲಿ ಆಳೆತ್ತರದ ಗುಂಡಿ ಅಗೆದು ಕೆರೆ ನಾಶ ಮಾಡಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಸುಮಾರು ಆರು ತಿಂಗಳುಗಳಿಂದ ರಾತ್ರಿ ಸಮಯದಲ್ಲಿ ಮರಳು ತೆಗೆಯಲಾಗುತ್ತಿದೆ. ದಂಧೆಕಾರರು ಜೆಸಿಬಿ ಯಂತ್ರದಿಂದ ಕೆರೆಯಲ್ಲಿ ಗುಂಡಿ ತೆಗೆದು ಮಣ್ಣು ಮಿಶ್ರಿತ ಮರಳನ್ನು ಫಿಲ್ಟರ್ ಮಾಡಿ ರಾತ್ರಿಯ ಸಮಯದಲ್ಲಿ ಜೆಸಿಬಿಯ ಮೂಲಕ ಲೋಡ್ ಮಾಡಿ ಟ್ರ್ಯಾಕ್ಟರ್‌ಗಳಲ್ಲಿ ಸಾಗಣೆ ಮಾಡುತ್ತಿದ್ದಾರೆ.
ರಾತ್ರಿ ಸುಮಾರು 8-9 ಗಂಟೆಗೆ ಫಿಲ್ಟರ್ ಮಾಡಲು ಬರುವ ದಂಧೆ ಕೋರರು ಮುಂಜಾನೆ ಸುಮಾರು ಮೂರು ಗಂಟೆಯವರೆಗೂ ಮರಳನ್ನು ಟ್ರಾಕ್ಟರ್ ಮೂಲಕ ಸಾಗಿಸುತ್ತಾರೆ. ನಂತರ ಹಗಲಿನಲ್ಲಿ ಸುಮ್ಮನಿರುತ್ತಾರೆ.
ಇತ್ತೀಚಿಗೆ ಬಿದ್ದ ಮಳೆಯಿಂದ ಕೆರೆಯಲ್ಲಿ ನಿಂತಿರುವ ನೀರನ್ನು ಫಿಲ್ಟರ್ ಮಾಡಿ ಮರಳು ತೆಗೆಯಲಾಗುತ್ತಿದೆ. ಒಂದು ಗುಂಡಿಯಲ್ಲಿ ನೀರು ಖಾಲಿಯಾದ ನಂತರ ಮತ್ತೊಂದು ಗುಂಡಿಯಲ್ಲಿ ಮೋಟರು ಬಳಸಿ ಪಂಪುಗಳಿಂದ ಫಿಲ್ಟರ್ ಮಾಡುತ್ತಿದ್ದಾರೆ. ಇದರಿಂದ ಕೆರೆಯ ಅಂಗಳ ಒಂದು ಕಡೆ ನಾಶವಾಗುತ್ತಿದ್ದರೆ, ಮತ್ತೊಂದು ಕಡೆ ಕೆರೆಯ ನೀರು ಖಾಲಿ ಆಗುತ್ತಿದೆ. ಆದರೂ ಸಂಬಂಧಿಸಿದ ಅಧಿಕಾರಿಗಳು ಕಣ್ಮಚ್ಚಿ ಕುಳಿತ್ತಿದ್ದಾರೆ ಎನ್ನುವುದು ಸ್ಥಳೀಯರ ದೂರು.
ಮರುಳು ದಂಧೆ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದರಿಂದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸ್ಥಳದಲ್ಲಿ ದೊರೆತ ವಸ್ತುಗಳನ್ನು ಜಪ್ತಿ ಮಾಡಿದ್ದರು. ಬಳಿಕ ಫಿಲ್ಟರ್ ದಂಧೆ ಶುರುವಾಗಿದೆ. ವಿಚಾರ ಗೊತ್ತಿದ್ದರೂ ಅಧಿಕಾರಿಗಳು ದಂಧೆಯನ್ನು ತಡೆಯಲು ವಿಫಲರಾಗಿದ್ದಾರೆ ಎನ್ನುತ್ತಾರೆ ಸ್ಥಳೀಯರು.
ಫಿಲ್ಟರ್ ಮರಳು ದಂಧೆ ನಡೆಸುವವರ ವಿರುದ್ಧ ಕ್ರಮ ಕೈಗೊಂಡುಮ ದಂಧೆಕೋರರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಚೆಲ್ಲನಕೆರೆ ಫಿಲ್ಟರ್ ಮರಳು ದಂಧೆ ಮಾಡುವ ಸ್ಥಳಕ್ಕೆ ಕೂಡಲೇ ಅಧಿಕಾರಿಗಳನ್ನು ಕಳುಹಿಸಿ ದಂಧೆಕೋರರ ವಿರುದ್ಧ ಪ್ರಕರಣ ದಾಖಲಿಸಲಾಗುವುದು.ವೈ.ರವಿ ತಹಶೀಲ್ದಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.