ಮುಳಬಾಗಿಲು: ಎಲ್ಲ ವರ್ಗದ ಜನರಿಗೆ ಕಡಿಮೆ ದರದಲ್ಲಿ ಆಹಾರ ಒದಗಿಸುವ ಸದುದ್ದೇಶದಿಂದ ನಗರದಲ್ಲಿ ಸುಸಜ್ಜಿತ ರೀತಿಯಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಿಸಲಾಗಿದೆ. ಆದರೆ, ಕಟ್ಟಡ ನಿರ್ಮಾಣ ಕಾಮಗಾರಿ ಮುಗಿದು 5 ತಿಂಗಳಾದರೂ, ಕಡಿಮೆ ದರದಲ್ಲಿ ಆಹಾರ ಒದಗಿಸುವ ಇಂದಿರಾ ಕ್ಯಾಂಟೀನ್ ಮಾತ್ರ ಇನ್ನೂ ಕಾರ್ಯಾರಂಭ ಮಾಡಿಲ್ಲ.
ಇದರಿಂದಾಗಿ ಕೂಲಿ ಕಾರ್ಮಿಕರು, ಶಾಲಾ–ಕಾಲೇಜು ವಿದ್ಯಾರ್ಥಿಗಳು ಕಡಿಮೆ ದರದಲ್ಲಿ ಆಹಾರ ಪೂರೈಸುವ ಇಂದಿರಾ ಕ್ಯಾಂಟೀನ್ ಯಾವಾಗ ಆರಂಭವಾಗಲಿದೆ ಎಂಬ ಕಾತುರದಲ್ಲಿದ್ದಾರೆ.
ನಗರದ ಆಂಜನೇಯ ಸ್ವಾಮಿ ದೇವಾಲಯದ ಮುಖ್ಯ ಬೀದಿ ಹಾಗೂ ಜಿಲ್ಲಾ ಪಂಚಾಯತಿ ಹಾಗೂ ಅಂಚೆ ಕಚೇರಿಗಳ ರಸ್ತೆಯಲ್ಲಿ ಇಂದಿರಾ ಕ್ಯಾಂಟೀನ್ ಅನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಕ್ಯಾಂಟೀನ್ ಕಾಮಗಾರಿ ಮುಗಿದು 5 ತಿಂಗಳು ಕಳೆದರೂ, ಕ್ಯಾಂಟೀನ್ ಆರಂಭವಾಗದ ಕಾರಣ ಕಟ್ಟಡದ ಆವರಣದಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಜೊತೆಗೆ ಕಟ್ಟಡದ ಮುಂಭಾಗವು ಕಾರು, ಬೈಕ್ ಸೇರಿದಂತೆ ಇನ್ನಿತರ ವಾಹನಗಳ ಪಾರ್ಕಿಂಗ್ ಸ್ಥಳವಾಗಿ ಮಾರ್ಪಟ್ಟಿದೆ.
ವಿವಿಧ ಸರ್ಕಾರಿ ಕೆಲಸ–ಕಾರ್ಯಗಳನ್ನು ಮಾಡಿಸಿಕೊಳ್ಳಲು ಬರುವ ಜನರು, ದಿನಗೂಲಿ ಸೇರಿದಂತೆ ಇನ್ನಿತರ ಕೆಲಸ ಮಾಡಲು ನಗರಕ್ಕೆ ಬರುವ ಜನ ದುಬಾರಿ ಹಣ ಕೊಟ್ಟು ಹೋಟೆಲ್‌ಗಳಲ್ಲಿ ಆಹಾರ ಸೇವಿಸಲಾಗುವುದಿಲ್ಲ. ನಗರಕ್ಕೆ ಬರುವ ಯಾರೂ ಸಹ ಯಾವುದೇ ಕಾರಣಕ್ಕೂ ಹಸಿವಿನಿಂದ ಸಂಕಷ್ಟ ಅನುಭವಿಸಬಾರದು ಎಂಬ ಸದುದ್ದೇಶದಿಂದ ಇಂದಿರಾ ಕ್ಯಾಂಟೀನ್ ಅನ್ನು ಆರಂಭಿಸಿದೆ. ತಾಲ್ಲೂಕು ಕೇಂದ್ರ ಭಾಗದಲ್ಲಿ ಕಟ್ಟಡ ನಿರ್ಮಾಣವಾಗಿದೆ. ಆದರೆ, ಕ್ಯಾಂಟೀನ್ ಮಾತ್ರ ಕಾರ್ಯಾರಂಭ ಮಾಡಿಲ್ಲ ಎಂಬುದು ಸಾರ್ವಜನಿಕರ ಅಸಮಾಧಾನ.
ರಾಜ್ಯದಲ್ಲಿ ಈ ಹಿಂದಿನ ಕಾಂಗ್ರೆಸ್ ಸರ್ಕಾರವಿದ್ದಾಗಲೇ ನಗರದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕಾಗಿ ಸ್ಥಳ ನಿಗದಿಪಡಿಸಲಾಗಿತ್ತು. ಆದರೆ, ಕಟ್ಟಡ ಕಾಮಗಾರಿ ನಡೆದಿರಲಿಲ್ಲ. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಕಟ್ಟಡದ ಹೊರನೋಟ, ಸುಸಜ್ಜಿತವಾದ ಗಾಜಿನ ಕಿಟಕಿ, ಬಾಗಿಲುಗಳನ್ನು ಇಡಲಾಗಿದೆ. ಜನ ಆಹಾರ ಸೇವಿಸಲು ಮೇಜುಗಳನ್ನು ಸಹ ನಿರ್ಮಿಸಲಾಗಿದ್ದು, ಉದ್ಘಾಟನೆಗೆ ಕಾಯುತ್ತಿದೆ.
ನಾನಾ ಸರ್ಕಾರಿ ಕೆಲಸಗಳನ್ನು ಮಾಡಿಸಿಕೊಳ್ಳಲು ಕಚೇರಿಗಳಿಗೆ ಬರುವ ಜನರು ಕ್ಯಾಂಟೀನ್ ಬಾಗಿಲುಗಳ ಮುಂಭಾಗ, ಆವರಣದ ನೆರಳಿನಲ್ಲಿ ಮಲಗುತ್ತಾರೆ. ಮತ್ತೆ ಕೆಲವರು ಗುಟ್ಕಾ ಜಗಿದು, ಅಲ್ಲಿಯೇ ಉಗಿಯುತ್ತಾರೆ. ಇದರಿಂದ ಕ್ಯಾಂಟೀನ್ ಆವರಣವು ಗಲೀಜಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸುತ್ತಾರೆ.
ನಗರದಲ್ಲಿ ಇಂದಿರಾ ಕ್ಯಾಂಟೀನ್‌ಗಾಗಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಆದರೆ ಉದ್ಘಾಟನೆಯಾಗಿಲ್ಲ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರ ಗಮನ ಸೆಳೆಯಲಾಗಿದೆ. ಶೀಘ್ರವೇ ಆರಂಭವಾಗುವ ನಿರೀಕ್ಷೆ ಇದೆಎಂ.ಸಿ.ನೀಲಕಂಠೇ ಗೌಡ ಆವಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಾಣ ಸಂಪೂರ್ಣವಾಗಿದೆ. ಆದರೆ ಕ್ಯಾಂಟೀನಲ್ಲಿ ಆಹಾರವನ್ನು ವಿತರಿಸಲು ರಾಜ್ಯ ಮಟ್ಟದಲ್ಲಿ ಟೆಂಡರ್ ನಡೆಯಬೇಕಿದೆ. ಹೀಗಾಗಿ ಕ್ಯಾಂಟೀನ್ ಕಾರ್ಯಾರಂಭ ಮಾಡಿಲ್ಲವಿ.ಶ್ರೀಧರ್ ನಗರಸಭೆ ಪೌರಾಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.