ADVERTISEMENT

ಮುಳಬಾಗಿಲು | ಕಟ್ಟಕಡೆ ಗ್ರಾಮದಲ್ಲಿ ಸೌಲಭ್ಯ ಮರೀಚಿಕೆ; ನೀರಿಗಾಗಿ 6 ಕಿ.ಮೀ ಅಲೆದಾಟ

ಎನ್.ಯಲುವಹಳ್ಳಿ: ಮಳೆ ಬಂದರೆ ಕೆಸರುಗದ್ದೆ, ಬಿಸಿಲಿದ್ದರೆ ದೂಳಿನ ಕೇಂದ್ರವಾಗುವ ರಸ್ತೆಗಳು

ಕೆ.ತ್ಯಾಗರಾಜ್ ಎನ್.ಕೊತ್ತೂರು.
Published 27 ಆಗಸ್ಟ್ 2024, 5:14 IST
Last Updated 27 ಆಗಸ್ಟ್ 2024, 5:14 IST
<div class="paragraphs"><p>ಮುಳಬಾಗಿಲು ತಾಲ್ಲೂಕಿನ ಎನ್. ಯಲುವಹಳ್ಳಿಯಲ್ಲಿ ಗ್ರಾಮಸ್ಥರೊಬ್ಬರು ಕಬ್ಬಿಣದ ಶೀಟುಗಳಲ್ಲಿ ವಾಸ ಮಾಡುತ್ತಿರುವ ಮನೆ</p></div>

ಮುಳಬಾಗಿಲು ತಾಲ್ಲೂಕಿನ ಎನ್. ಯಲುವಹಳ್ಳಿಯಲ್ಲಿ ಗ್ರಾಮಸ್ಥರೊಬ್ಬರು ಕಬ್ಬಿಣದ ಶೀಟುಗಳಲ್ಲಿ ವಾಸ ಮಾಡುತ್ತಿರುವ ಮನೆ

   

ಮುಳಬಾಗಿಲು: ತಾಲ್ಲೂಕಿನ ಕಟ್ಟಕಡೆಯ ಹಾಗೂ ನೆರೆಯ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಎನ್.ಯಲುವಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರು, ಸಿ.ಸಿ. ರಸ್ತೆಗಳು ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳು ಮರೀಚಿಕೆಯಾಗಿವೆ. ಇದರಿಂದಾಗಿ ಇಲ್ಲಿನ ನಿವಾಸಿಗಳು ಪ್ರತಿನಿತ್ಯವೂ ಪರದಾಡುವಂತಾಗಿದೆ. 

ನಂಗಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎನ್.ಯಲುವಹಳ್ಳಿ ಗ್ರಾಮವು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇದೆ. ಆದಾಗ್ಯೂ, ಗ್ರಾಮದಲ್ಲಿ ಕುಡಿಯುವ ನೀರು, ಸಿ.ಸಿ ರಸ್ತೆಗಳು, ಚರಂಡಿ ವ್ಯವಸ್ಥೆ, ಅಂಗನವಾಡಿ, ವಸತಿ ಸಮಸ್ಯೆ ಸೇರಿದಂತೆ ಇನ್ನಿತರ ಸಮಸ್ಯೆಗಳು ಜನರನ್ನು ಪ್ರತಿನಿತ್ಯವೂ ಬಾಧಿಸುತ್ತಿವೆ. 

ADVERTISEMENT

ಹತ್ತಾರು ವರ್ಷಗಳಿಂದ ಇಲ್ಲಿನ ರಸ್ತೆಗಳಿಗೆ ಡಾಂಬರೀಕರಣ ಅಥವಾ ಕಾಂಕ್ರೀಟ್ ಹಾಕದ ಕಾರಣಕ್ಕೆ ರಸ್ತೆಗಳು ಬೇಸಿಗೆಯಲ್ಲಿ ದೂಳಿನಿಂದ ಆವೃತವಾದರೆ, ಮಳೆಗಾಲದಲ್ಲಿ ಕೆಸರು ಗದ್ದೆಯಂತಾಗುತ್ತವೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ. 140 ಮನೆಗಳಿರುವ ಈ ಗ್ರಾಮದಲ್ಲಿ 600 ಮಂದಿ ವಾಸಿಸುತ್ತಿದ್ದಾರೆ. ಗ್ರಾಮದ ಮುಖ್ಯ ಬೀದಿ ಅರ್ಧದಷ್ಟು ಮಾತ್ರ ಚೆನ್ನಾಗಿದ್ದು, ಉಳಿದ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದೆ. ಜೊತೆಗೆ ಚರಂಡಿ ವ್ಯವಸ್ಥೆಯೂ ಇಲ್ಲ. ಇದರಿಂದ ಮಳೆಗಾದಲ್ಲಿ ಬೀದಿಯ ನೀರು ಮನೆಗಳಿಗೆ ನುಗ್ಗುತ್ತದೆ. ಕೆಲವೆಡೆ ಮೊಣಕಾಲು ಉದ್ದದವರೆಗೆ ನೀರು ನಿಂತಿರುತ್ತದೆ. ಇದರ ಪರಿಣಾಮ ಯಾವುದು ರಸ್ತೆ ಅಥವಾ ಯಾವುದು ಗುಂಡಿ ಎಂಬುದು ತಿಳಿಯದಂತಾಗುತ್ತದೆ ಎಂದು ಗ್ರಾಮಸ್ಥರು ತಿಳಿಸಿದರು.

‘ಗ್ರಾಮದಲ್ಲಿರುವ ಚರಂಡಿಯಲ್ಲಿ ತ್ಯಾಜ್ಯ ತುಂಬಿದ್ದು, ಮಲಿನವಾದ ನೀರು ಚರಂಡಿಯಲ್ಲಿ ಸರಾಗವಾಗಿ ಹರಿಯದೆ ನಿಂತುಕೊಂಡಿದೆ. ಇದರಿಂದ ಚರಂಡಿಯು ದುರ್ನಾತ ಬೀರುತ್ತಿದ್ದು, ಜನರು ಮೂಗು ಮುಚ್ಚಿಕೊಂಡೇ ತಿರುಗಾಡುವ ಅನಿವಾರ್ಯತೆ ಎದುರಾಗಿದೆ. ಜೊತೆಗೆ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಮಲೇರಿಯಾ ಮತ್ತು ಸಾಂಕ್ರಾಮಿಕ ರೋಗಗಳು ವ್ಯಾಪಿಸುವ ಆತಂಕದಲ್ಲಿದ್ದಾರೆ ಗ್ರಾಮಸ್ಥರು’ – ಹೀಗೆಂದು ಗ್ರಾಮಸ್ಥ ವೆಂಕಟಮುನಿರೆಡ್ಡಿ ತಿಳಿಸಿದರು. 

ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ: ಗ್ರಾಮದಲ್ಲಿ ಹಳೆಯ ಅಂಗನವಾಡಿ ಕಟ್ಟಡ ಇದೆ. ಅದರ ಗೋಡೆಗಳು ಬಿರುಕು ಬಿಟ್ಟುಕೊಂಡಿದ್ದು, ಚಪ್ಪಡಿ ಕಲ್ಲುಗಳ ಚಾವಣಿ ಬೀಳುವ ಸ್ಥಿತಿಯಲ್ಲಿ ಇದೆ. ಕಟ್ಟಡದ ಮೇಲೆ ಗಿಡಗಂಟಿಗಳು ಬೆಳೆದಿದ್ದು, ಚಪ್ಪಡಿಗಳ ಬಿರುಕುಗಳಲ್ಲಿ ಬೇರುಗಳು ಹರಡಿಕೊಂಡಿವೆ. ಈ ವಿಚಾರವಾಗಿ ಅನೇಕ ಬಾರಿ ಪಂಚಾಯಿತಿ, ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಅರ್ಜಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮದ ಕೆಲವು ಮಹಿಳೆಯರು ದೂರಿದರು. 

ಶಿಥಿಲಾವಸ್ಥೆಯ ಹೆಂಚಿನ ಮನೆಗಳಲ್ಲೇ ಕೆಲವರ ವಾಸ: ಗ್ರಾಮದಲ್ಲಿ ವಸತಿ ಸಮಸ್ಯೆ ಇದ್ದು, ಆರು ಕುಟುಂಬಗಳು ಬಿಳುವ ಸ್ಥಿತಿಯಲ್ಲಿರುವ ಹೆಂಚಿನ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಇದರಿಂದ ಗ್ರಾಮಕ್ಕೆ ಸರ್ಕಾರ ಅಥವಾ ಪಂಚಾಯಿತಿ ಕನಿಷ್ಠ ಮನೆಗಳನ್ನು ಮಂಜೂರು ಮಾಡಿ ಎಲ್ಲರಿಗೂ ವಸತಿ ಸೌಕರ್ಯ ಕಲ್ಪಿಸಬೇಕು ಎಂದು ಹೆಂಚಿನ ಮನೆಗಳ ವಾಸಿಗಳು ಆಗ್ರಹಿಸಿದರು.

ನೀರಿಗಾಗಿ 6 ಕಿ. ಮೀ ಅಲೆದಾಟ

ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿಲ್ಲ. ಹೀಗಾಗಿ ಶುದ್ಧ ಕುಡಿಯುವ ನೀರಿನ ಘಟಕ ಇರುವ 6 ಕಿ.ಮೀ ಹೋಗಿಬರಬೇಕಿದ್ದು, ₹5 ಕ್ಯಾನಿನ ನೀರಿಗಾಗಿ ₹50 ಪೆಟ್ರೋಲ್ ವ್ಯಯಿಸಬೇಕಾಗಿದೆ. ಇನ್ನು ದ್ವಿಚಕ್ರ ವಾಹನ ಇಲ್ಲದವರು ಕೊಳವೆ ಬಾವಿಯ ನೀರನ್ನೇ ಅವಲಂಬಿಸಿದ್ದು, ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಆತಂಕ ಎದುರಿಸುತ್ತಿದ್ದಾರೆ. 

ಗ್ರಾಮಕ್ಕಿಲ್ಲ ಸ್ಮಶಾನ; ಕೆರೆಯೇ ಸ್ಮಶಾನ: ಗ್ರಾಮಕ್ಕೆ ಕಾಯಂ ಸ್ಮಶಾನ ಜಾಗವಿಲ್ಲ. ಹೀಗಾಗಿ ಗ್ರಾಮದ ಕೆರೆಯಲ್ಲೇ ಸತ್ತವರನ್ನು ಸಮಾಧಿ ಮಾಡಲಾಗುತ್ತಿದೆ. ಈ ಕುರಿತು ಸುಮಾರು ವರ್ಷಗಳಿಂದ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದರೆ, ಮಳೆಬಂದು ಕೆರೆ ತುಂಬಿದರೆ, ಸತ್ತವರನ್ನು ಅವರ ಜಮೀನಿನಲ್ಲೇ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ. ಹಾಗಾದರೆ, ಜಮೀನು ಹೊಂದಿಲ್ಲದವರ ಸ್ಥಿತಿಯೇನು ಎಂಬುದು ಗ್ರಾಮಸ್ಥರ ವಾದ. 

ಗ್ರಾಮದಲ್ಲಿ ಕುಡಿಯುವ ನೀರಿನ ಶುದ್ಧ ಘಟಕ, ಸುಸಜ್ಜಿತ ಸಿ.ಸಿ ರಸ್ತೆಗಳು, ಹೆದ್ದಾರಿಯಿಂದ ಡಾಂಬರೀಕರಣ ಅಥವಾ ಸಿಮೆಂಟ್ ರಸ್ತೆ, ಸ್ಮಶಾನ, ಅಂಗನವಾಡಿ ಸೇರಿದಂತೆ ಇನ್ನಿತರ ಸೌಕರ್ಯಗಳೇ ಇಲ್ಲ. ಈ ಎಲ್ಲ ಸಮಸ್ಯೆಗಳಿಂದಾಗಿ ಜನರು ಪ್ರತಿನಿತ್ಯವು ಹೈರಾಣಾಗುತ್ತಿದ್ದಾರೆ. ಈ ಕುರಿತು ಅನೇಕ ಬಾರಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಹಾಗೂ ಪಂಚಾಯಿತಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಮೂಲ‌ ಸೌಕರ್ಯಗಳನ್ನು ಒದಗಿಸಬೇಕಿದೆ.
-ಜೆ.ಎಂ.ಆರ್.ಹರಿನಾಥ ರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯ
ಗ್ರಾಮದಲ್ಲಿ ಈಚೆಗೆ ಚರಂಡಿಗಳನ್ನು ಸ್ವಚ್ಛಗೊಳಿಸಲಾಗಿದೆ. ಸ್ಮಶಾನಕ್ಕೆ ಸ್ಥಳ ಕಲ್ಪಿಸುವ ವಿಚಾರವು ಕಂದಾಯ ಇಲಾಖೆಗೆ ಸೇರಿದ್ದು, ಅಂಗನವಾಡಿ ಕಟ್ಟಡ ನಿರ್ಮಾಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೇರಿದೆ. ನರೇಗಾದಲ್ಲಿ ₹1 ಕೋಟಿಗೆ ಕ್ರಿಯಾ ಯೋಜನೆ ಆದರೆ ಸಿ.ಸಿ ರಸ್ತೆಗಳ ನಿರ್ಮಾಣಕ್ಕೆ ಕೇವಲ ಶೇ 10 ಮಿಸಲಿಡಲಾಗುತ್ತದೆ. ಹೀಗಾಗಿ ಸಿಸಿ ರಸ್ತೆಗಳೆಲ್ಲವನ್ನೂ ನಿರ್ಮಿಸಲಾಗದು.
- ಚಿಕ್ಕ ನರಸಿಂಹಯ್ಯ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.