ADVERTISEMENT

ಖಾಲಿ ಹುದ್ದೆಗಳ ಭರ್ತಿಗೆ ಒತ್ತಾಯ : ಎನ್.ಎಂ.ಮಮದಾಪುರ

ಸಹಕಾರ ಸಂಘದ ಸರ್ವಸದಸ್ಯರ ಸಭೆ, ಪ್ರತಿಭಾ ಪುಸ್ಕಾರ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2018, 17:04 IST
Last Updated 26 ಆಗಸ್ಟ್ 2018, 17:04 IST
ಕೋಲಾರದಲ್ಲಿ ನ್ಯಾಯಾಂಗ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘದಿಂದ ಭಾನುವಾರ ನಡೆದ ಸರ್ವಸದಸ್ಯರ ಸಭೆಯಲ್ಲಿ ನ್ಯಾಯಾಂಗ ಇಲಾಖೆ ನೌಕರರ ಪ್ರತಿಭಾನ್ವಿತ ಮಕ್ಕಳನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ಎಂ.ಮಮದಾಪುರ ಪುರಸ್ಕರಿಸಿದರು.
ಕೋಲಾರದಲ್ಲಿ ನ್ಯಾಯಾಂಗ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘದಿಂದ ಭಾನುವಾರ ನಡೆದ ಸರ್ವಸದಸ್ಯರ ಸಭೆಯಲ್ಲಿ ನ್ಯಾಯಾಂಗ ಇಲಾಖೆ ನೌಕರರ ಪ್ರತಿಭಾನ್ವಿತ ಮಕ್ಕಳನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ಎಂ.ಮಮದಾಪುರ ಪುರಸ್ಕರಿಸಿದರು.   

ಕೋಲಾರ: ‘ನ್ಯಾಯಾಂಗ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಮುಂದಾಗಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ಎಂ.ಮಮದಾಪುರ ಒತ್ತಾಯಿಸಿದರು.

ನಗರದಲ್ಲಿ ನ್ಯಾಯಾಂಗ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘದಿಂದ ಭಾನುವಾರ ನಡೆದ ಸರ್ವಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿ, ‘ಸಿಬ್ಬಂದಿ ಕೊರತೆಯ ಒತ್ತಡದ ನಡುವೆಯೂ ಇಲಾಖೆ ನೌಕರರು ಸಾಮಾಜಿಕ ಕಾಳಜಿಯಿಂದ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ’ ಎಂದು ಶ್ಲಾಘಿಸಿದರು.

‘ನ್ಯಾಯಾಂಗ ಇಲಾಖೆ ಆಡಳಿತಾತ್ಮಕ ನಿಯಂತ್ರಣ ಹೊಂದಿದೆ. 1971ರಲ್ಲಿ ಮಂಜೂರಾಗಿದ್ದ ಹುದ್ದೆಗಳೇ ಮುಂದುವರೆದಿವೆ. ಆದರೆ ನ್ಯಾಯಾಲಯದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಸಾಕಷ್ಟು ಸಿಬ್ಬಂದಿ ಕೊರತೆಯಿದ್ದರೂ ಅಷ್ಟೇ ಸಿಬ್ಬಂದಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದರು.

ADVERTISEMENT

‘ಪಾರದರ್ಶಕತೆಗೆ ಮತ್ತೊಂದು ಹೆಸರು ನ್ಯಾಯಾಂಗ ಇಲಾಖೆ. ಹಿಂದೆ ತಾವು ಕಾನೂನು ಇಲಾಖೆ ಹೆಚ್ಚುವರಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದು, ಅಲ್ಲಿನ ಸಿಬ್ಬಂದಿಯ ಸೇವೆಯನ್ನು ಗಮನಿಸಿದ್ದೇನೆ. ಅವರಿಗಿಂತ 100 ಪಟ್ಟು ಹೆಚ್ಚಿನ ಪರಿಶ್ರಮ, ಶ್ರದ್ಧೆ, ಪಾರದರ್ಶಕತೆಯಿಂದ ನೌಕರರು ಕೆಲಸ ಮಾಡುತ್ತಿದ್ದಾರೆ’ ಎಂದು ತಿಳಿಸಿದರು.

‘ಯಾವುದೇ ಸಹಕಾರ ಸಂಘದಲ್ಲಿ ಲೋಪಕಂಡು ಬುರುವುದು ಸಹಜ. ಅದನ್ನು ಚರ್ಚಿಸಿ ಪರಿಹರಿಸಿಕೊಳ್ಳಬೇಕೆ ಹೊರತು, ಬೀದಿಗೆ ತರುವ ಕೆಲಸ ಮಾಡಬಾರದು. ಪದಾಧಿಕಾರಿಗಳು ಎಚ್ಚರಿಕೆಯಿಂದ ಆಡಳಿತ ನಡೆಸಿಕೊಂಡು ಹೋಗಬೇಕು’ ಎಂದು ಸಲಹೆ ನೀಡಿದರು.

‘ನ್ಯಾಯಾಂಗ ಇಲಾಖೆ ನೌಕರರ ಸಹಕಾರ ಸಂಘ ಸ್ಥಾಪನೆಯಾದ 2ನೇ ವರ್ಷದಲ್ಲೇ ₹1 ಕೋಟಿ ಸಾಲ ವಿತರಣೆ ಮಾಡಿದೆ. 288 ಸದಸ್ಯಬಲ ಹೊಂದಿದ್ದು, ಇದೇ ಒಗ್ಗಟ್ಟಿನಿಂದ ಕೆಲಸ ಮಾಡಿಕೊಂಡುಹೋಗಬೇಕು’ ಎಂದು ಹೇಳಿದರು.

‘ಸಂಘದ ಆರ್ಥಿಕ ವಹಿವಾಟನ್ನು ಪಾರದರ್ಶಕವಾಗಿಡಲಾಗಿದೆ. ಯಾವುದೇ ಲೋಪಗಳು ಸದಸ್ಯರಿಗೆ ಕಂಡು ಬಂದರೆ ಗಮನಕ್ಕೆ ತಂದರೆ ಬಗೆರಹಿಸುತ್ತೇನೆ, ಸಂಘವನ್ನು ಮತ್ತಷ್ಟು ಬಲಗೊಳ್ಳಲು ಪ್ರತಿಯೊಬ್ಬರು ಸಹಕಾರ ನೀಡಬೇಕು’ ಎಂದು ನ್ಯಾಯಾಂಗ ಇಲಾಖೆ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಮಂಜುನಾಥ ಕೋರಿದರು.

‘ಸಂಘದಲ್ಲಿ ಈ ವರ್ಷ ₹ 2.2 ಕೋಟಿ ವಹಿವಾಟು ನಡೆದಿದ್ದು, ₹4 ಲಕ್ಷ ಲಾಭ ಗಳಿಸಿದೆ. ಸಂಘದಲ್ಲಿ ₹4.35 ಲಕ್ಷ ಶೇರು ಹಣ ಠೇವಣಿ ಇದೆ’ ಎಂದು ವಿವರಿಸಿದರು.

ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ನ್ಯಾಯಾಂಗ ಇಲಾಖೆ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ನ್ಯಾಯಾಧೀಶರಾದ ಬಿ.ಎಸ್.ರೇಖಾ, ಜಗದೀಶ್ವರ್, ಕೃಷ್ಣತಾರೀಮಣಿ, ಎಸ್.ಮೋಹನ್ ಕುಮಾರ್, ಅನುಪಮ, ಮಹಮದ್ ರೋಷನ್ ಷಾ, ಪುಷ್ಪಲತಾ, ಗಣಪತಿ ಪ್ರಶಾಂತ್, ಸಿದ್ದರಾಜು, ಗೀತಾಂಜಲಿ, ಸುಜಾತಾ ಸುವರ್ಣ, ಸಿ.ಎಲ್.ಕೃಪಾ, ಪಾರ್ವತಮ್ಮ, ಸೈಯದ್ ಮೊಹಿಸೀನ್, ರೂಪ, ಲೋಕೇಶ್, ಎ.ಸಿ.ದಯಾನಂದ್, ನ್ಯಾಯಾಂಗ ಇಲಾಖೆ ಆಡಳಿತಾಧಿಕಾರಿ ಅನ್ನಪೂರ್ಣಮ್ಮ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.