ADVERTISEMENT

ಸಾಲ–ಬಡ್ಡಿ ಮನ್ನಾಕ್ಕೆ ಒತ್ತಾಯ: ಕಾರ್ಮಿಕ ಸಚಿವರಿಗೆ ಜೆಎಂಎಸ್‌ ಸದಸ್ಯರ ಮನವಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2020, 15:48 IST
Last Updated 6 ಜುಲೈ 2020, 15:48 IST
ಕ್ಷೌರಿಕರು ಮತ್ತು ಅಗಸರ ಸಹಾಯಧನ ಕುರಿತು ಕೋಲಾರದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌ ಮಾತನಾಡಿದರು.
ಕ್ಷೌರಿಕರು ಮತ್ತು ಅಗಸರ ಸಹಾಯಧನ ಕುರಿತು ಕೋಲಾರದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌ ಮಾತನಾಡಿದರು.   

ಕೋಲಾರ: ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ರಾಷ್ಟ್ರೀಕೃತ ಮತ್ತು ಸರ್ಕಾರಿ ಬ್ಯಾಂಕ್‌ಗಳು ಸೇರಿದಂತೆ ಧರ್ಮಸ್ಥಳ ಸಹಕಾರ ಸಂಘದಲ್ಲಿ ಪಡೆದಿರುವ ಸಾಲವನ್ನು ಬಡ್ಡಿ ಸಮೇತ ಮನ್ನಾ ಮಾಡುವಂತೆ ಜನವಾದಿ ಮಹಿಳಾ ಸಂಘಟನೆ ಸದಸ್ಯರು ಇಲ್ಲಿ ಸೋಮವಾರ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರಿಗೆ ಮನವಿ ಸಲ್ಲಿಸಿದರು.

‘ರಾಜ್ಯದಲ್ಲಿ ಲಕ್ಷಾಂತರ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ಸ್ವಉದ್ಯೋಗ, ಕೃಷಿ ಚಟುವಟಿಕೆ, ಶಿಕ್ಷಣ, ಕುಟುಂಬ ಆರೋಗ್ಯ ನಿರ್ವಹಣೆಗೆ ಸಾಲ ಪಡೆದಿವೆ. ಆದರೆ, ಕೋವಿಡ್‌–19 ಸಂದರ್ಭದಲ್ಲಿ ಸಂಘಗಳಿಗೆ ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ’ ಎಂದು ಸಂಘಟನೆ ಸದಸ್ಯರು ಹೇಳಿದರು.

‘ಲಾಕ್‌ಡೌನ್‌ನಿಂದ ಎಲ್ಲಾ ಕ್ಷೇತ್ರದಲ್ಲಿ ಆರ್ಥಿಕ ಚಟುವಟಿಕೆಗಳು ನೆಲಕಚ್ಚಿವೆ. ದುಡಿದು ತಿನ್ನುವ ಬಡ ಕೂಲಿಕಾರರಿಗೆ ಊಟ ಇಲ್ಲದಿರುವಾಗ ಬ್ಯಾಂಕ್‌ಗಳಿಗೆ ಸಾಲ ಕಟ್ಟಲು ಸಾಧ್ಯವಾಗುತ್ತಿಲ್ಲ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸಾಲಕ್ಕೆ ಪ್ರತಿಯಾಗಿ ಚಕ್ರ ಬಡ್ಡಿ ವಿಧಿಸಿ ಜನರನ್ನು ಶೋಷಿಸಲಾಗುತ್ತಿದೆ’ ಎಂದು ಜೆಎಂಎಸ್‌ ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷೆ ವಿ.ಗೀತಾ ದೂರಿದರು.

ADVERTISEMENT

‘ಭಾರತೀಯ ರೀಸರ್ವ್‌ ಬ್ಯಾಂಕ್‌ ಹಾಗೂ ಕೇಂದ್ರ ಸರ್ಕಾರ ಕೋವಿಡ್‌–19 ಹಿನ್ನೆಲೆಯಲ್ಲಿ ಸಾಲ ವಸೂಲಿ ಮಾಡದಂತೆ ಆದೇಶಿಸಿವೆ. ಆದರೆ, ಬ್ಯಾಂಕ್‌ ಅಧಿಕಾರಿಗಳು ಈ ಆದೇಶ ಗಾಳಿಗೆ ತೂರಿ ಸಾಲದ ಕಂತು ಕಟ್ಟುವಂತೆ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸದಸ್ಯರಿಗೆ ನೋಟಿಸ್‌ ಜಾರಿ ಮಾಡಿ ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

ನೆರವಿಗೆ ಧಾವಿಸಬೇಕು: ‘ಕೇಂದ್ರ ಸರ್ಕಾರ ದೊಡ್ಡ ಉದ್ದಿಮೆದಾರರಿಗೆ ಎಲ್ಲಾ ರೀತಿಯ ಸೌಲಭ್ಯ ನೀಡಿದೆ. ಆದರೆ, ಬಡ ಕೂಲಿಕಾರರು, ದಿನವಿಡೀ ದುಡಿದು ತಿನ್ನುವವರಿಗೆ ಸೌಲಭ್ಯ ನೀಡಲು ಹಿಂದೇಟು ಹಾಕುತ್ತಿದೆ. ಮಾನವೀಯ ದೃಷ್ಟಿಯಿಂದ ಸರ್ಕಾರಗಳು ದುಡಿಯುವ ವರ್ಗದ ಜನರ ನೆರವಿಗೆ ಧಾವಿಸಬೇಕು’ ಎಂದು ಒತ್ತಾಯಿಸಿದರು.

‘ಸರ್ಕಾರ ಮಧ್ಯ ಪ್ರವೇಶಿಸಿ ಸಾಲ ವಸೂಲಿ ಮಾಡದಂತೆ ಬ್ಯಾಂಕ್‌ಗಳಿಗೆ ಸ್ಪಷ್ಟ ನಿರ್ದೇಶನ ನೀಡಬೇಕು. ಕೋವಿಡ್‌–19 ಹಿನ್ನೆಲೆಯಲ್ಲಿ ಘೋಷಿಸಲಾಗಿರುವ ₹ 20 ಲಕ್ಷ ಕೋಟಿಯ ವಿಶೇಷ ಪ್ಯಾಕೇಜ್‌ನಲ್ಲಿ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸಾಲ ಹಾಗೂ ಬಡ್ಡಿ ಮನ್ನಾ ಮಾಡಲು ಹಣಕಾಸು ನೆರವು ನೀಡಬೇಕು. ಶೂನ್ಯ ಬಡ್ಡಿ ದರದಲ್ಲಿ ಮರು ಸಾಲ ನೀಡಬೇಕು’ ಎಂದು ಸಂಘಟನೆ ಸದಸ್ಯರು ಕೋರಿದರು.

ಜೆಎಂಎಸ್‌ ಜಿಲ್ಲಾ ಘಟಕದ ಅಧ್ಯಕ್ಷೆ ಸೌಭಾಗ್ಯಮ್ಮ, ಕಾರ್ಯದರ್ಶಿ ವಿಜಯಕುಮಾರಿ, ಸದಸ್ಯರಾದ ಮಂಜುಳಾ, ಸುಜಾತಾ, ಶಿಲ್ಪಾ, ರೇಣುಕಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.