ಕೋಲಾರ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ಸಂಬಂಧ ಜಿಲ್ಲೆಯಲ್ಲಿ ವಾರದಲ್ಲಿ ನಾಲ್ಕು ಪ್ರಕರಣಗಳನ್ನು ಪೊಲೀಸರು ಬೇಧಿಸಿದ್ದು ಕೋಲಾರದ ಹಳೆಯ ಪಂಟರ್‌ಗಳು ಮುಂಬೈ, ಗೋವಾದ ವಿವಿಧೆಡೆ ಕುಳಿತು ಕಾರ್ಯಾಚರಣೆ ನಡೆಸುತ್ತಿರುವುದು ಗೊತ್ತಾಗಿದೆ.
ಐಪಿಎಲ್ ಕ್ರಿಕೆಟ್ ಟೂರ್ನಿ ಈಗ ಅಂತಿಮ ಹಂತ ತಲುಪಿದ್ದು, ದೇಶ ಹಾಗೂ ವಿದೇಶಗಳಲ್ಲಿ ಭಾರಿ ಮೊತ್ತದ ಬೆಟ್ಟಿಂಗ್ ನಡೆಯುತ್ತಿದೆ. ಅದರಲ್ಲೂ ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿ ಬಿ) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (ಸಿ ಎಸ್ ಕೆ) ನಡುವಿನ ಮಹತ್ವದ ಪಂದ್ಯದಲ್ಲಿ ಭಾರಿ ಬಾಜಿ ನಡೆದಿರುವುದು ಗೊತ್ತಾಗಿದೆ. ರಾಜ್ಯದಲ್ಲೂ ಜೂಜಾಟ ನಡೆಯುತ್ತಿದ್ದು, ಕೆಲ ಪ್ರಕರಣಗಳನ್ನು ಪೊಲೀಸರು ಬೇಧಿಸಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಕೆಲವರು ಬೆಟ್ಟಿಂಗ್‌ಗಾಗಿ ಸಾಲ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳೂ ನಡೆದಿವೆ.
ಕೋಲಾರದಲ್ಲೂ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ಜೋರಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಅವರು ವಿಶೇಷ ತಂಡ ರಚಿಸಿ ನಿಯಂತ್ರಣಕ್ಕೆ ಮುಂದಾಗಿದ್ದಾರೆ.
ವಾರದ ಹಿಂದೆ ಕೋಲಾರದ ಗಲ್‌ಪೇಟೆ ಠಾಣೆ ಪೊಲೀಸರು ಬೆಟ್ಟಿಂಗ್‌ನಲ್ಲಿ ತೊಡಗಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ಶನಿವಾರ ಮತ್ತೊಂದು ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ ನಡೆಸಿ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಶ್ರೀನಿವಾಸಪುರ ಠಾಣೆ ಪೊಲೀಸರು ಎರಡು ಪ್ರಕರಣಗಳಲ್ಲಿ ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಕೋಲಾರದಿಂದ ದುಬೈವರೆಗೆ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಜಾಲ ಥಳಕು ಹಾಕಿಕೊಂಡಿರುವ ಶಂಕೆಯನ್ನು ನಾರಾಯಣ ವ್ಯಕ್ತಪಡಿಸಿದ್ದಾರೆ. ಕೋಲಾರ, ಮುಳಬಾಗಿಲು, ಶ್ರೀನಿವಾಸಪುರ, ಮಾಲೂರಿನಲ್ಲಿ ಬೆಟ್ಟಿಂಗ್ ಪ್ರಕರಣಗಳು ನಡೆಯುತ್ತಿರುವ ಅನುಮಾನವಿದ್ದು, ನಿಗಾ ಇಟ್ಟಿದ್ದೇವೆ ಎಂದರು.
‘ಹಿಂದೆ ಪಂಟರ್‌ಗಳು ಕೋಲಾರದಲ್ಲಿಯೇ ಇದ್ದು ಕಾರ್ಯಾಚರಣೆ ನಡೆಸುತ್ತಿದ್ದರು. ಹಿಂದಿನ ಎಸ್ಪಿ ಡಿ.ದೇವರಾಜ್ ಇದ್ದಾಗ ಹಾಗೂ ನಾನು ಎಸ್ಪಿಯಾಗಿ ಬಂದ ನಂತರ ಕೈಗೊಂಡ ಕಠಿಣ ಕ್ರಮದಿಂದ ಸ್ಥಳೀಯ ಬೆಟ್ಟಿಂಗ್ ಪಂಟರ್ ಗಳು ಬೇರೆ ರಾಜ್ಯಗಳಿಗೆ ಪಲಾಯನ ಮಾಡಿದ್ದಾರೆ.
ಅವರೆಲ್ಲಾ ಅಲ್ಲಿಂದಲೇ ಇಲ್ಲಿನ ಜೂಜುಕೋರರಿಗೆ ಐಪಿಎಲ್ ಪಂದ್ಯ ಆರಂಭವಾಗುತ್ತಿದ್ದಂತೆ ಬೆಟ್ಟಿಂಗ್ ಆ್ಯಪ್ ಲಿಂಕ್ ಕಳಿಸುವುದು, ಆನ್‌ಲೈನ್ ಬೆಟ್ಟಿಂಗ್ ಐ.ಡಿ ಹಂಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಆನ್‌ಲೈನ್‌ನಲ್ಲೇ ಹಣದ ವಹಿವಾಟು ನಡೆಯುತ್ತಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ವಿಶೇಷ ತಂಡ ರಚಿಸಿದ್ದು, ಅನುಮಾನ ಬಂದವರ ಮೊಬೈಲ್‌ಗಳನ್ನು ಪರಿಶೀಲಿಸಲು ಸೂಚಿಸಿದ್ದೇನೆ. ಸೈಬರ್ ಕ್ರೈಂ ಪೊಲೀಸರಿಗೂ ನಿಗಾ ಇಡಲು ಹೇಳಿದ್ದೇನೆ’ ಎಂದರು.
ಪೊಲೀಸರ ಮೇಲೂ ನಿಗಾ: ಎಸ್ಪಿ
‘ಐಪಿಎಲ್ ಬೆಟ್ಟಿಂಗ್ ದಂಧೆಕೋರರ ಜೊತೆ ಪೊಲೀಸರು, ಸಿಬ್ಬಂದಿ ಕೈಜೋಡಿಸಿದ್ದಾರೆಯೇ ಎಂಬುದರ ಮೇಲೂ ನಿಗಾ ಇಡಲಾಗಿದೆ. ಈ ಸಂಬಂಧ ಆಂತರಿಕವಾಗಿಯು ತನಿಖೆಯೂ ನಡೆಯುತ್ತಿದೆ. ಅನುಮಾನ ಬಂದರೆ ಶಿಕ್ಷೆ ಖಚಿತ' ಎಂದು ನಾರಾಯಣ ಹೇಳಿದರು.
‘ಗಮನಕ್ಕೆ ಬಂದರೆ ಕರೆ ಮಾಡಿ’
‘ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಯುತ್ತಿರುವ ವಿಚಾರ ಗಮನಕ್ಕೆ ಬಂದರೆ ಅಥವಾ ಯಾರಾದರೂ ಅದಕ್ಕೆ ಪ್ರೋತ್ಸಾಹಿಸಿದರೆ ನನಗೆ ಕರೆ ಮಾಡಿ ಅಥವಾ ಕಚೇರಿಗೆ ಬಂದು ಮಾಹಿತಿ ಹಂಚಿಕೊಳ್ಳಿ. ಪೊಲೀಸರು ಭಾಗಿಯಾಗಿರುವ ವಿಚಾರವಿದ್ದರೂ ನನ್ನ ಗಮನಕ್ಕೆ ತನ್ನಿ’ ಎಂದು ಎಸ್ಪಿ ನಾರಾಯಣ ಮನವಿ ಮಾಡಿದರು.
ವಿಶೇಷ ತಂಡ ರಚಿಸಿ ಅನುಮಾನ ಬಂದವರ ಮೊಬೈಲ್ ಪರಿಶೀಲಿಸುತ್ತಿದ್ದು, ಕ್ರಿಕೆಟ್ ಬೆಟ್ಟಿಂಗ್ ಆ್ಯಪ್ ಗಳ ಮೇಲೆ ನಿಗಾ ಇಡಲಾಗಿದೆ. ಯಾರೇ ಭಾಗಿಯಾದರೂ ಬಿಡುವ ಪ್ರಶ್ನೆಯೇ ಇಲ್ಲಎಂ.ನಾರಾಯಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕೋಲಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.