ಶ್ರೀನಿವಾಸಪುರ: ಮೃತಪಟ್ಟ ರಾಸುಗಳ ವಿಮಾ ಪರಿಹಾರದ ಚೆಕ್ ಪಡೆದ ಹಾಲು ಉತ್ಪಾದಕರು ಕಡ್ಡಾಯವಾಗಿ ರಾಸು ಖರೀದಿ ಮಾಡಬೇಕು. ಹಾಲನ್ನು ಕೋಚಿಮುಲ್ ಡೇರಿಗಳಿಗೆ ಹಾಕುವುದರ ಮೂಲಕ ಬದುಕು ಕಟ್ಟಿಕೊಳ್ಳಬೇಕು ಎಂದು ಕೋಚಿಮುಲ್ ನಿರ್ದೇಶಕ ಎನ್. ಹನುಮೇಶ್ ಹೇಳಿದರು.
ಪಟ್ಟಣದ ಕೋಚಿಮುಲ್ ಶಿಬಿರ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸಭೆಯಲ್ಲಿ 42 ಹಾಲು ಉತ್ಪಾದಕರಿಗೆ ₹ 23.45 ಲಕ್ಷ ಮೌಲ್ಯದ ಪರಿಹಾರ ಚೆಕ್ ವಿತರಿಸಿ ಅವರು ಮಾತನಾಡಿದರು.
ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಉತ್ತಮ ಗುಣಮಟ್ಟದ ಹಾಲು ಸರಬರಾಜು ಮಾಡಬೇಕು. ಆ ಮೂಲಕ ಒಕ್ಕೂಟದಿಂದ ನೀಡುತ್ತಿರುವ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಹೇಳಿದರು.
ಶಿಬಿರ ಕಚೇರಿ ವ್ಯವಸ್ಥಾಪಕ ಕೆ.ಎಸ್. ನರಸಿಂಹಯ್ಯ ಮಾತನಾಡಿ, ಉತ್ಪಾದಕರು ಹಾಲಿನ ಗುಣಮಟ್ಟ ಹೆಚ್ಚಲು ಹಸುಗಳಿಗೆ ಹಸಿರು ಹಾಗೂ ಒಣ ಮೇವಿನ ಜತೆಗೆ ಪಶು ಆಹಾರ, ಖನಿಜ ಮಿಶ್ರಣ, ಗೋಧಾರ ಶಕ್ತಿ ಪುಡಿ ನೀಡಬೇಕು. ಕಾಲುಬಾಯಿ ಜ್ವರ ಹರಡದಂತೆ ಎಚ್ಚರವಹಿಸಬೇಕು. ಸಾಫ್ಟ್ ಕಿಟ್ ಬಳಸಬೇಕು ಎಂದು ಹೇಳಿದರು.
ಈಗ ಬೇಸಿಗೆ ಪ್ರಾರಂಭವಾಗಿದ್ದು, ಬಿಸಿಲಿ ಝಳ ಹೆಚ್ಚಿದೆ. ಸೀಮೆ ಹಸುಗಳು ಸೂಕ್ಷ್ಮವಾಗಿದ್ದು, ಅವುಗಳನ್ನು ನರಳುಳ್ಳ ಮರಗಳ ಕೆಳಗೆ ಕಟ್ಟಬೇಕು. ಬಿಸಿಲಿನಲ್ಲಿ ಬಿಡುವುದರಿಂದ ಹಲವು ಸಮಸ್ಯೆಗಳು ತಲೆದೋರುವ ಸಂಭವ ಇರುತ್ತದೆ. ಹಸು ಆರೋಗ್ಯವಾಗಿದ್ದರೆ ಮಾತ್ರ ಗುಣಮಟ್ಟದ ಹಾಲು ಸಿಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಭೆಯಲ್ಲಿ ಉಪ ಕಚೇರಿ ವಿಸ್ತರಣಾಧಿಕಾರಿಗಳಾದ ಎಂ.ಜಿ. ಶ್ರೀನಿವಾಸ್, ಎನ್. ಶಂಕರ್, ಪಿ.ಕೆ. ನರಸಿಂಹರಾಜು, ಎಸ್. ವಿನಾಯಕ, ಕೆ.ಪಿ. ಶ್ವೇತಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.