ಕೋಲಾರ: ‘ಬಾಲ್ಯದಲ್ಲಿ ಅಜ್ಜಿ ಮನೆಯಲ್ಲಿ ನವಿಲು ಮುಖವಾಡ ಹಾಕಿಕೊಂಡು ನೃತ್ಯ ಮಾಡುತ್ತಿದ್ದೆ, ಮಾವನ ಜೊತೆ ಕಾರ್ಯಕ್ರಮಗಳಿಗೆ ಹೋಗುತ್ತಿದ್ದೆ. 15ನೇ ವಯಸ್ಸಿನಲ್ಲಿ ಕೀಲುಕುದುರೆ ಕುಣಿತ ಕಲೆಯಲ್ಲಿ ತೊಡಗಿಸಿಕೊಂಡೆ. ಅಲ್ಲಿಂದ ನಿರಂತರವಾಗಿ ಈ ಕಲೆಯನ್ನು ಮುಂದುವರಿಸಿಕೊಂಡು ಬಂದಿದ್ದೇನೆ. ಈ ಕಲೆಯೇ ನನ್ನ ಉಸಿರಾಗಿದೆ, ಬದುಕಾಗಿದೆ...‘
–ಕರ್ನಾಟಕ ಜಾನಪದ ಅಕಾಡೆಮಿ ಕೊಡಮಾಡುವ ವಾರ್ಷಿಕ ಗೌರವ ಪ್ರಶಸ್ತಿಗೆ ಪಾತ್ರರಾಗಿರುವ ಜಿಲ್ಲೆಯ ಕೀಲುಕುದುರೆ ಕುಣಿತ ಕಲಾವಿದ ಎಂ.ತೋಪಣ್ಣ ಅವರು ಮನದಾಳದ ಮಾತಿದು.
ತಾಲ್ಲೂಕಿನ ವೇಮಗಲ್ ಹೋಬಳಿಯ ಮಂಚಂಡಹಳ್ಳಿಯ ಕುರುಗಲ್‌ನ ಅವರಿಗೆ 2023ನೇ ಸಾಲಿನ ಪ್ರತಿಷ್ಠಿತ ಈ ಗೌರವ ಹುಡುಕಿಕೊಂಡು ಬಂದಿದೆ.
‘ವಾರ್ಷಿಕ ಗೌರವ ಪ್ರಶಸ್ತಿಯು ₹ 25 ಸಾವಿರ ನಗದು, ಫಲಕ ಹಾಗೂ ಪ್ರಮಾಣಪತ್ರ ಹೊಂದಿದೆ’ ಎಂದು ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಸೋಮವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಶೀಘ್ರದಲ್ಲಿಯೇ ದಿನಾಂಕ ಮತ್ತು ಸ್ಥಳ ನಿಗದಿ ಮಾಡಲಾಗುವುದು. ಬೆಂಗಳೂರಿನಿಂದ ಹೊರಗೆ ಕಾರ್ಯಕ್ರಮ ಹಮ್ಮಿಕೊಳ್ಳುವ ಉದ್ದೇಶವಿದೆ ಎಂದರು.
ತೋಪಣ್ಣ ಅವರಿಗೆ ಈಗ 63 ವರ್ಷ. ಅವರು ಸುಮಾರು 50 ವರ್ಷಗಳಿಂದ ಕೀಲುಕುದುರೆ ಕುಣಿತ ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ತೋಪಣ್ಣ ನೇತೃತ್ವದ ವಿನಾಯಕ ಕೀಲುಕುದುರೆ ನೃತ್ಯ ಯುವಕರ ಕ್ಷೇಮಾಭಿವೃದ್ಧಿ ಸಂಘದ ತಂಡ ಮೈಸೂರು ದಸರಾ ಮಹೋತ್ಸವ ಸೇರಿದಂತೆ ವಿವಿಧ ಉತ್ಸವಗಳಲ್ಲಿ ಪಾಲ್ಗೊಂಡ ಹೆಗ್ಗಳಿಕೆ ಹೊಂದಿದೆ. ಕೀಲುಕುದುರೆ ಜೊತೆ ಗಾರುಡಿಗೊಂಬೆ, ಕಾವಡಿ ಕುಣಿತಗಳನ್ನು ಪ್ರದರ್ಶಿಸುತ್ತಾರೆ. ಗೊಂಬೆ ತಯಾರಿಸುವುದರಲ್ಲೂ ಎತ್ತಿದ ಕೈ. ಇವರ ಕಲೆಯನ್ನು ಗುರುತಿಸಿ ಈಚೆಗೆ ಕರ್ನಾಟಕ ಜಾನಪದ ಪರಿಷತ್ ಜಾನಪದ ಲೋಕಕ್ಕೆ ಆಹ್ವಾನಿಸಿ ಲೋಕಸಿರಿ–97ರ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಗೌರವಿಸಿದೆ.
‘ತಾಯಿಯ ಅಣ್ಣ (ಮಾವ) ಜಂಗಮಕೋಟೆಯ ದಿವಂಗತ ಕೆ.ಎಸ್.ಮುನಿಯಪ್ಪ ಅವರಿಂದ ನನಗೆ ಈ ಕಲೆ ಒಲಿಯಿತು. ಅವರು ಕೂಡ ರಾಜ್ಯ ಪ್ರಶಸ್ತಿ ಪುರಸ್ಕೃತರು. ಅವರು ಕೀಲುಕುದುರೆ, ಗಾರುಡಿಗೊಂಬೆ, ನವಿಲು, ಹಾಸ್ಯ ಮುಖವಾಡಗಳು, ಭುಜಕಿರೀಟಗಳನ್ನು ಪೇಪರ್ ಮತ್ತು ಹುಣಸೆಪುಡಿ ಪೇಸ್ಟಿನಿಂದ ಮಾಡುತ್ತಿದ್ದರು. ಅವರಿಂದ ನಾನೂ ಕಲಿತ. ಗುರು ಇಲ್ಲದೆ ಜಾನಪದ ಕಲೆ ಒಲಿಯುವುದಿಲ್ಲ. ಈ ಕಲೆಯಿಂದಲೇ ನಾನು ಮತ್ತು ನನ್ನ ಬಳಗ ಬದುಕು ಕಟ್ಟಿಕೊಂಡಿದ್ದೇವೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಮೈಸೂರು ದಸರಾ, ಹಂಪಿ ಉತ್ಸವ, ಕೇರಳ, ಆಂಧ್ರಪ್ರದೇಶ, ನವದೆಹಲಿ ಸೇರಿದಂತೆ ಹಳ್ಳಿಯಿಂದ ದೂರದ ನಗರಗಳಲ್ಲಿ ಕಾರ್ಯಕ್ರಮ ನೀಡಿದ್ದೇನೆ. ಆಸಕ್ತರಿಗೆ ಉಚಿತವಾಗಿ ಹೇಳಿಕೊಡುತ್ತಿದ್ದೇನೆ. ಆದರೆ, ಯುವಕರಲ್ಲಿ ಈ ಕಲೆ ಬಗ್ಗೆ ಆಸಕ್ತಿ ಇಲ್ಲ’ ಎಂದರು.
ಕೀಲುಕುದುರೆ ಕುಣಿತ ರಾಜ್ಯದ ಜನಪ್ರಿಯ ಜನಪದ ಕಲೆಯಾಗಿದೆ. ಮರದಿಂದ ಮಾಡಿದ ಕೀಲುಗಳಿಂದ ರಚಿತವಾದ ಕುದುರೆಯನ್ನು ಸೊಂಟಕ್ಕೆ ಕಟ್ಟಿಕೊಂಡು ಕುಣಿಯುವ ಕಲೆ ಇದಾಗಿದೆ. ಕೀಲುಕುದುರೆ ಆಡಿಸುವವರು ಕಾಲಿಗೆ ಎರಡು ಅಡಿ ಉದ್ದದ ಮರಗಾಲು ಕಟ್ಟಿಕೊಂಡಿರುತ್ತಾರೆ. ಈ ಮರದ ಕಾಲುಗಳನ್ನು ಹಗುರದ ಹಾಗೂ ಗಟ್ಟಿಯಾದ ಮರದಿಂದ ಮಾಡಿ ಅದರ ಮೇಲೆ ಕಾಲು ಕೂರಿಸಲು ಅನುಕೂಲವಾಗುವಂತೆ ಮಾಡಿರುತ್ತಾರೆ. ಅದಕ್ಕೆ ಸಿಂಗಾರ ಮಾಡಿರುತ್ತಾರೆ.
ಹತ್ತಾರು ಪ್ರಶಸ್ತಿಗಳು ನನಗೆ ಬಂದಿವೆ. ಆದರೆ ಅಕಾಡೆಮಿಯಿಂದ ರಾಜ್ಯ ಪ್ರಶಸ್ತಿ ಬಂದಿರುವುದು ತುಂಬಾ ಖುಷಿ ನೀಡಿದೆ. ಅರ್ಜಿ ಹಾಕಿರಲಿಲ್ಲ. ಪ್ರಶಸ್ತಿ ನನ್ನನ್ನು ಹುಡುಕಿಕೊಂಡು ಬಂದಿದೆಎಂ.ತೋಪಣ್ಣ ಕೀಲು ಕುದುರೆ ಕುಣಿತ ಕಲಾವಿದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.