ಕೋಲಾರ: ‘ಬೆಂಗಳೂರಿನಿಂದ ಕೋಲಾರಕ್ಕೆ ಉಚಿತ ಪ್ರಯಾಣದಿಂದ ಉಳಿಯುವ ಹಣದಲ್ಲಿ ಮಹಿಳೆಯರು ಮನೆಗೆ ತರಕಾರಿ ತೆಗೆದುಕೊಂಡು ಹೋಗುತ್ತಾರೆ. ಅದೇ ಕಾಸು ಉಳಿದರೆ ಪುರುಷರು ಏನು ಮಾಡುತ್ತಾರೆ? ಬಾರ್‌ಗೆ ಹೋಗುತ್ತಾರೆ. ಹಾಗಂತ ಎಲ್ಲಾ ಪುರುಷರು ಕೆಟ್ಟವರಲ್ಲ’ ಎಂದು ಜನವಾದಿ ಮಹಿಳಾ ಸಂಘಟನೆ ರಾಜ್ಯ ಮುಖಂಡರಾದ ವಿ.ಗೀತಾ ಹೇಳಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಸಂಘಟನೆಯ ಜಿಲ್ಲಾ ಸಮಿತಿಯಿಂದ ಸೋಮವಾರ ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ, ಬಡ್ಡಿ ರಹಿತ ₹ 1ಲಕ್ಷ ದವರೆಗೆ ಸಾಲ ನೀಡುವಂತೆ ಒತ್ತಾಯಿಸಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಬಸ್ಸಿನಲ್ಲಿ ಉಚಿತ ಪ್ರಯಾಣ ಶುರುವಾದ ಮೇಲೆ ಪತ್ನಿ ತನ್ನ ಕೈಗೆ ಸಿಗುತ್ತಿಲ್ಲವೆಂದು ವ್ಯಕ್ತಿಯೊಬ್ಬರು ಹೇಳುತ್ತಿದ್ದರು. ದೇಶದಲ್ಲಿ ಶೇ 80 ಕುಟುಂಬಗಳು ಮಹಿಳೆಯರಿಂದಲೇ ನಡೆಯುತ್ತಿವೆ ಎಂಬುದನ್ನು ಅಂಥವರು ನೆನಪಿನಲ್ಲಿಟ್ಟುಕೊಳ್ಳಬೇಕು’ ಎಂದರು.
‘ಶೇ 80ರಷ್ಟು ಮಂದಿ ಪುರುಷರು ಬಾರ್‌ಗೆ ಹೋಗುತ್ತಾರೆ. ಅದನ್ನು ಮಾಧ್ಯಮಗಳು ತೋರಿಸುತ್ತವೆಯೇ? ಆದರೆ, ಮಹಿಳೆಯರಿಗೆ ಬಸ್ಸಿನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಸಿಕ್ಕಿರುವುದನ್ನು ಗೇಲಿ ಮಾಡಲಾಗುತ್ತಿದೆ. ದಿನ ಬಸ್ಸಿಗೆ ಹೋಗುತ್ತಿದ್ದಾರೆ ಎಂಬುದನ್ನು ತೋರಿಸುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಬೆಳಿಗ್ಗೆ ಎದ್ದು ಹಸು, ಕುರಿ ಮೇಯಿಸುವುದು ನಾವು. ಈ ಸಮಾವೇಶಕ್ಕೆ ಶೇ 80 ಮಹಿಳೆಯರು ಮನೆಯ ಎಲ್ಲಾ ಕೆಲಸ ಮುಗಿಸಿ ಬಂದಿದ್ದಾರೆ. ಮತ್ತೆ ಕಾರ್ಯಕ್ರಮ ಮುಗಿಸಿ ಹೋಗಿ ಮನೆ ಕೆಲಸ ಮಾಡಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.