ADVERTISEMENT

ಮಹಿಳೆ ವಿರುದ್ಧ ಅವಾಚ್ಯ ಶಬ್ದ ಬಳಸಿದ ಸಚಿವ ಮಾಧುಸ್ವಾಮಿ

​ಪ್ರಜಾವಾಣಿ ವಾರ್ತೆ
Published 20 ಮೇ 2020, 15:45 IST
Last Updated 20 ಮೇ 2020, 15:45 IST
ಕೋಲಾರ ತಾಲ್ಲೂಕಿನ ಎಸ್‌.ಅಗ್ರಹಾರದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮಹಿಳಾ ಸದಸ್ಯರು ಬುಧವಾರ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಘೇರಾವ್‌ ಹಾಕಿ ವಾಗ್ವಾದ ನಡೆಸಿದರು
ಕೋಲಾರ ತಾಲ್ಲೂಕಿನ ಎಸ್‌.ಅಗ್ರಹಾರದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮಹಿಳಾ ಸದಸ್ಯರು ಬುಧವಾರ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಘೇರಾವ್‌ ಹಾಕಿ ವಾಗ್ವಾದ ನಡೆಸಿದರು   

ಕೋಲಾರ: ತಾಲ್ಲೂಕಿನ ಎಸ್‌.ಅಗ್ರಹಾರದಲ್ಲಿ ಬುಧವಾರ ಕೆರೆಗಳ ಒತ್ತುವರಿ ತೆರವಿಗೆ ಮನವಿ ಮಾಡಿದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮಹಿಳಾ ಸದಸ್ಯರ ವಿರುದ್ಧ ಅವಾಚ್ಯ ಶಬ್ದ ಬಳಸಿದ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಸದಸ್ಯರು ಘೇರಾವ್‌ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಕೆ.ಸಿ ವ್ಯಾಲಿ ಯೋಜನೆ ವ್ಯಾಪ್ತಿಯ ಎಸ್‌.ಅಗ್ರಹಾರ ಗ್ರಾಮದ ಕೆರೆ ಪರಿಶೀಲಿಸಲು ಬಂದಿದ್ದ ಸಚಿವ ಮಾಧುಸ್ವಾಮಿ ಅವರಿಗೆ ಸಂಘಟನೆಯ ಮಹಿಳಾ ಸದಸ್ಯರು ಕೆರೆಗಳ ಒತ್ತುವರಿ ತೆರವು ಮಾಡುವಂತೆ ಮನವಿ ಸಲ್ಲಿಸಿ ಚರ್ಚೆಗೆ ಮುಂದಾದರು. ಈ ವೇಳೆ ಸಚಿವರು, ‘ಹೇ ರಾಸ್ಕಲ್‌, ಮುಚ್ಚು ಬಾಯಿ’ ಎಂದು ಗದರಿದರು.

ಇದರಿಂದ ಕೆರಳಿದ ಮಹಿಳಾ ಸದಸ್ಯರು, ‘ಏಕೆ ಆ ರೀತಿ ಮಾತನಾಡುತ್ತೀರಿ’ಎಂದು ಸಚಿವರ ವಿರುದ್ಧ ತಿರುಗಿಬಿದ್ದರು. ಇದರಿಂದ ಮತ್ತಷ್ಟು ಕೆಂಡಾಮಂಡಲರಾದ ಸಚಿವರು, ಸದಸ್ಯರನ್ನು ದೂರ ಕಳುಹಿಸುವಂತೆ ಪೊಲೀಸರಿಗೆ ಆದೇಶಿಸಿದರು.

ADVERTISEMENT

ಸಚಿವರ ಆದೇಶ ಪಾಲನೆಗೆ ಮುಂದಾದ ಪೊಲೀಸರ ಜತೆ ಸದಸ್ಯರು ವಾಗ್ವಾದಕ್ಕಿಳಿದರು. ಇದರಿಂದ ಸ್ಥಳದಲ್ಲಿ ಗೊಂದಲ ಸೃಷ್ಟಿಯಾಯಿತು. ಬಳಿಕ ಪೊಲೀಸರು ಸದಸ್ಯರನ್ನು ಎಳೆದೊಯ್ದು ಪರಿಸ್ಥಿತಿ ತಿಳಿಗೊಳಿಸಿದರು.

ಘಟನೆಯ ಕುರಿತು ವಿರೋಧ ‍ಪ‍ಕ್ಷದ ನಾಯಕ ಸಿದ್ದರಾಮಯ್ಯಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದು, ಮಾಧುಸ್ವಾಮಿ ಅವರನ್ನು ತಕ್ಷಣ ಮಹಿಳೆಯ ಕ್ಷಮೆಯಾಚಿಸುವಂತೆ ಮಾಡಿ ಎಂದು ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.

ಮಾಧುಸ್ವಾಮಿ ಅವರ ವಿರುದ್ಧ ಪ್ರಕರಣ ದಾಖಲಿಸಿರುವಂತೆಕರ್ನಾಟಕ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಒತ್ತಾಯಿಸಿ ಫೇಸ್‌ಬುಕ್‌ ಪ್ರಕಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.