ಕೋಲಾರ: ‘ರಾಜಪ್ರಭುತ್ವ ಹಾಗೂ ವಸಾಹತುಶಾಹಿಯ ಪ್ರತೀಕವಾಗಿರುವ ಬ್ರಿಟನ್ ರಾಣಿ 2ನೇ ಎಲಿಜಬೆತ್ ಮೃತರಾದಾಗ ತ್ರಿವರ್ಣ ಧ್ವಜವನ್ನು ಅರ್ಧಕ್ಕಿಳಿಸಿ ಶೋಕಾಚರಣೆ ಮಾಡುತ್ತೇವೆ. ಆದರೆ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರ ತ್ಯಾಗ ಬಲಿದಾನವನ್ನೇ ಸ್ಮರಿಸುವುದಿಲ್ಲ. ಆ ನೆನಪುಗಳನ್ನೇ ಅಳಿಸಿ ಹಾಕಿದ್ದೇವೆ. ಇತಿಹಾಸವನ್ನು ಮರೆತಿದ್ದು ಏಕೆ’ ಎಂದು ಪರಿಸರ ಮತ್ತು ಅಭಿವೃದ್ಧಿ ಪತ್ರಕರ್ತ ಪಿ.ಸಾಯಿನಾಥ್ ಪ್ರಶ್ನಿಸಿದರು.
ನಗರ ಹೊರವಲಯದ ನಂದಿನಿ ಪ್ಯಾಲೇಸ್‍ನಲ್ಲಿ ಮಂಗಳವಾರ ನಡೆದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ 3ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದರು.
‘ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸ್ವಾತಂತ್ರ್ಯ ಹೋರಾಟಗಾರರನ್ನು ಮಾದರಿಯಾಗಿಸಿಕೊಂಡು ನಾವೆಲ್ಲಾ ಬೆಳೆದೆವು. ನನ್ನ ಪಾಲಿಗೆ ಇತಿಹಾಸದ ಅದ್ಭುತ ಪುಟಗಳವು. ಆದರೆ, ಆ ಬಗ್ಗೆ ಯುವ ಪೀಳಿಗೆಗೆ ತಿಳಿಸಿಕೊಡಲೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದೆ. ಸಂಭ್ರಮದ ಜೊತೆಗೆ ಸ್ವಾತಂತ್ರ್ಯದ ಹೋರಾಟದ ಅವಲೋಕನವೂ ನಡೆಯಬೇಕಿದೆ. ಇನ್ನು ಐದಾರು ವರ್ಷಗಳಲ್ಲಿ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿರುವ ಒಬ್ಬರೂ ನಮ್ಮ ನಡುವೆ ಇರುವುದಿಲ್ಲ. ಇದು ನೋವಿನ ವಿಚಾರ. ಹೋರಾಟದಲ್ಲಿ ಪಾಲ್ಗೊಂಡ ಅತಿರಥರು ಕರ್ನಾಟಕದಲ್ಲೂ ಇದ್ದಾರೆ. ಕಳೆದ ವರ್ಷವಷ್ಟೇ ಎಚ್.ಎಸ್.ದೊರೆಸ್ವಾಮಿ ಕೊನೆಯುಸಿರೆಳೆದರು. ಅಂಥ ಹೋರಾಟಗಾರರನ್ನು ನೋಡಲು, ಅವರ ಮಾತು ಕೇಳಲು ಯುವ ಪೀಳಿಗೆಗೆ ಸಾಧ್ಯವಿಲ್ಲ’ ಎಂದರು.
‘ದೇಶಕ್ಕಾಗಿ ಲಕ್ಷಾಂತರ ಮಂದಿ ಪ್ರಾಣತ್ಯಾಗ ಮಾಡಿದ್ದಾರೆ. ಆದರೆ, ಸಾಮಾನ್ಯ ಲೆಕ್ಕಕ್ಕಿಂತ ಅಧಿಕ ಜನ ಮೃತರಾಗಿದ್ದಾರೆ. ಬ್ರಿಟನ್‌ನವರೇ ಈಚೆಗೆ ನಡೆಸಿರುವ ಸಂಶೋಧನೆ ಪ್ರಕಾರ ಬ್ರಿಟಿಷರ ಆಡಳಿತಾವಧಿಯಲ್ಲಿ 16.8 ಕೋಟಿ ಜನ ಮೃತರಾಗಿದ್ದಾರೆ. 1881 ಹಾಗೂ 1931ರ ನಡುವೆ ಸಾಮಾನ್ಯ ಲೆಕ್ಕಕ್ಕಿಂತ 1.5 ಕೋಟಿ ಅಧಿಕ ಮಂದಿ ಮೃತರಾಗಿದ್ದಾರೆ. ಆದರೆ, ನಮಗೆ ಆ ಬಗ್ಗೆ ಮಾಹಿತಿ ಇಲ್ಲ, ಅವರ ತ್ಯಾಗವನ್ನು ಸ್ಮರಿಸುತ್ತಿಲ್ಲ. ನಮಗಾಗಿ, ಮುಂದಿನ ಪೀಳಿಗಾಗಿ ತಮ್ಮ ಜೀವನ ಮುಡಿಪಾಗಿಟ್ಟಿವರಿಗೆ ನಾವು ಸಲ್ಲಿಸುವ ಗೌರವ ಇದೇನಾ’ ಎಂದು ಪ್ರಶ್ನಿಸಿದರು.
‘ಹೋರಾಟಗಳಲ್ಲಿ ಗೆದ್ದವರಷ್ಟೇ ಇತಿಹಾಸ ಬರೆದಿದ್ದಾರೆ. ಸ್ವಾತ್ರಂತ್ರ್ಯ ಹೋರಾಟ ಸೇರಿದಂತೆ ಎಲ್ಲಾ ಹೋರಾಟಗಳಿಗೆ ಭದ್ರ ಬುನಾದಿ ಹಾಕಿದ್ದು ಸಾಮಾನ್ಯ ಜನರು. ಪ್ರಪ್ರಥಮವಾಗಿ ಸ್ವಾತಂತ್ರ್ಯ ಹೋರಾಟಕ್ಕಿಳಿದದ್ದು ಆದಿವಾಸಿಗಳು. ಆದರೆ, ಸೌಲಭ್ಯ ಪಡೆಯುವುದರಲ್ಲಿ ಕೊನೆಗುಳಿದರು. ಅಂಥವರನ್ನು ನಾವು ನೆನಪಿಸಿಕೊಳ್ಳಬೇಕಿದೆ. ಹೋರಾಟಗಾರರ ಬಗ್ಗೆ ವಿದ್ಯಾರ್ಥಿಗಳು ತಿಳಿಯಬೇಕಿದೆ. ತಾತ, ಮುತ್ತಾತನ ಬಳಿ ಮಾತನಾಡಿ, ಆಗ ಹೋರಾಟಗಾರರ ತ್ಯಾಗ ಬಲಿದಾನ ಗೊತ್ತಾಗುತ್ತದೆ’ ಎಂದು ಸಲಹೆ ನೀಡಿದರು.
‘ದೇಶಕ್ಕೆ ಸ್ವಾತಂತ್ರ್ಯವೇನೋ ಸಿಕ್ಕಿದೆ. ಆದರೆ, ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗಬೇಕಿದೆ. ಸಂವಿಧಾನದ ಆಶಯ ಪಾಲನೆಯಾದರೆ ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗುತ್ತದೆ’ ಎಂದು ಅಭಿಪ್ರಾಯಪಟ್ಟರು.
ಸರ್ಕಾರದಿಂದ ಪತ್ರಕರ್ತರು ಪ್ರಶಸ್ತಿ ಪಡೆಯಬಾರದು. ಪದ್ಮ ಪುರಸ್ಕಾರ ಒಲಿದಿದ್ದರೂ ಅದನ್ನು ನಯವಾಗಿ ತಿರಸ್ಕರಿಸಿದೆ. ಈ ಕಾರಣ ಪದ್ಮ ಪ್ರಶಸ್ತಿ ಪುರಸ್ಕೃತ ಎಂಬ ಪದ ಬಳಸಬೇಡಿ.ಪಿ.ಸಾಯಿನಾಥ್, ಪರಿಸರ ಮತ್ತು ಅಭಿವೃದ್ಧಿ ಪತ್ರಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.