ಕೋಲಾರ: ನಗರದ ಬಂಬೂ ಬಜಾರ್‌ನ ಮಾಂಸ ಮಾರಾಟ ಮಳಿಗೆಯೊಂದರ ಮಾಲೀಕರು ತನ್ನ ಅಣ್ಣನ ಮಗನ ಕಾಲಿಗೆ ಸರಪಳಿ ಹಾಕಿ ಜೀತದಾಳಾಗಿ ದುಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಗಲ್‌ಪೇಟೆ ಪೊಲೀಸರು ಭಾನುವಾರ ಆ ಮಳಿಗೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಾಂಸದಂಗಡಿ ಮಾಲೀಕ ಜಾಖೀರ್ ಎಂಬುವರು ತನ್ನ ಅಣ್ಣನ ಮಗನಾದ 14 ವರ್ಷದ ಬಾಲಕನನ್ನು ಹಲವು ದಿನಗಳಿಂದ ಜೀತದಾಳಾಗಿ ದುಡಿಸಿಕೊಳ್ಳುತ್ತಿದ್ದಾರೆ. ಬಾಲಕನು ಅಂಗಡಿಯಿಂದ ತಪ್ಪಿಸಿಕೊಂಡು ಹೋಗದಂತೆ ಆತನ ಕಾಲುಗಳಿಗೆ ಸರಪಳಿ ಹಾಕಿ ಕಟ್ಟಲಾಗಿದೆ ಎಂದು ಸ್ಥಳೀಯರೊಬ್ಬರು ಪೊಲೀಸ್ ಠಾಣೆಗೆ ಕರೆ ಮಾಡಿ ದೂರು ನೀಡಿದರು.
ಈ ದೂರು ಆಧರಿಸಿ ಪೊಲೀಸರು ಅಂಗಡಿಗೆ ಬಂದಾಗ ಬಾಲಕನನ್ನು ಸರಪಳಿಯಿಂದ ಕಟ್ಟಿ ಹಾಕಲಾಗಿತ್ತು. ಬಳಿಕ ಪೊಲೀಸರು ಬಾಲಕನನ್ನು ರಕ್ಷಿಸಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಸದಸ್ಯರ ವಶಕ್ಕೆ ಒಪ್ಪಿಸಿದರು. ನಂತರ ಸಿಡಬ್ಲ್ಯೂಸಿ ಸದಸ್ಯರು ಬಾಲಕ ಮತ್ತು ಆತನ ತಾಯಿಯ ವಿಚಾರಣೆ ನಡೆಸಿದರು.
ವಿಚಾರಣೆ ವೇಳೆ ಬಾಲಕನ ತಾಯಿಯು, ‘ಪತಿ ಮೃತಪಟ್ಟಿದ್ದರಿಂದ ಮಗನನ್ನು ಆತನ ಚಿಕ್ಕಪ್ಪ ಸಾಕುತ್ತಿದ್ದಾರೆ. ಮಗ ಸ್ನೇಹಿತರ ಜತೆ ಆಗಾಗ್ಗೆ ಮನೆ ಬಿಟ್ಟು ಹೋಗುತ್ತಾನೆ. 3 ದಿನಗಳ ಹಿಂದೆ ಸಹ ಸ್ನೇಹಿತರ ಜತೆ ಹೋಗಿದ್ದ ಆತ ಮನೆಗೆ ವಾಪಸ್ ಬಂದಿರಲಿಲ್ಲ. ಶನಿವಾರ ರಾತ್ರಿ ಪತ್ತೆಯಾಗಿದ್ದ ಮಗ ಮತ್ತೆ ಮನೆಯಿಂದ ಹೋದರೆ ಲಾಕ್‌ಡೌನ್ ವೇಳೆ ಹುಡುಕುವುದು ಕಷ್ಟವಾಗುತ್ತದೆ ಎಂದು ಆತನನ್ನು ಅಂಗಡಿಯಲ್ಲಿ ಕಟ್ಟಿ ಹಾಕುವಂತೆ ಜಾಖೀರ್‌ಗೆ ತಿಳಿಸಿದ್ದೆ’ ಎಂದು ಸಿಡಬ್ಲ್ಯೂಸಿ ಸದಸ್ಯರಿಗೆ ಹೇಳಿಕೆ ನೀಡಿದ್ದಾರೆ.
‘ಜಾಖೀರ್, ಮಗನನ್ನು ಜೀತದಾಳಾಗಿ ದುಡಿಸಿಕೊಳ್ಳುತ್ತಿಲ್ಲ. ಬದಲಿಗೆ ಮಗ ತಪ್ಪಿಸಿಕೊಂಡು ಹೋಗಬಾರದೆಂಬ ಕಾಳಜಿಯಿಂದ ಭಾನುವಾರ ವಹಿವಾಟು ಮುಗಿಯುವವರೆಗೂ ಅಂಗಡಿಯಲ್ಲೇ ಇರುವಂತೆ ಆತನಿಗೆ ಸರಪಳಿ ಹಾಕಿ ಕಟ್ಟಿದ್ದರು’ ಎಂದು ಬಾಲಕನ ತಾಯಿ ಸ್ಪಷ್ಟಪಡಿಸಿದ್ದಾರೆ. ಬಾಲಕ ಸಹ ಪೊಲೀಸರ ವಿಚಾರಣೆ ವೇಳೆ ಇದೇ ರೀತಿ ಹೇಳಿಕೆ ನೀಡಿದ್ದಾನೆ.
ಹೀಗಾಗಿ ಸಿಡಬ್ಲ್ಯೂಸಿ ಸದಸ್ಯರು ಹಾಗೂ ಪೊಲೀಸರು ಯಾವುದೇ ಪ್ರಕರಣ ದಾಖಲಿಸದೆ ಬಾಲಕ ಮತ್ತು ಜಾಖೀರ್ ಅವರನ್ನು ಬಿಟ್ಟು ಕಳುಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.