ADVERTISEMENT

ಕನಕದಾಸರು ಸಮಾಜಕ್ಕೆ ಆದರ್ಶ: ರೂಪಕಲಾ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2024, 16:23 IST
Last Updated 18 ನವೆಂಬರ್ 2024, 16:23 IST
ಕೆಜಿಎಫ್‌ ರಾಬರ್ಟಸನ್‌ಪೇಟೆಯಲ್ಲಿ ಸೋಮವಾರ ಕನಕ ಜಯಂತಿ ಸ್ತಬ್ದ ಚಿತ್ರದ ಮೆರವಣಿಗೆಗೆ ಶಾಸಕಿ ಎಂ.ರೂಪಕಲಾ ಟ್ರಾಕ್ಟರ್‌ ಚಾಲಿಸುವ ಮೂಲಕ ಚಾಲನೆ ನೀಡಿದರು.
ಕೆಜಿಎಫ್‌ ರಾಬರ್ಟಸನ್‌ಪೇಟೆಯಲ್ಲಿ ಸೋಮವಾರ ಕನಕ ಜಯಂತಿ ಸ್ತಬ್ದ ಚಿತ್ರದ ಮೆರವಣಿಗೆಗೆ ಶಾಸಕಿ ಎಂ.ರೂಪಕಲಾ ಟ್ರಾಕ್ಟರ್‌ ಚಾಲಿಸುವ ಮೂಲಕ ಚಾಲನೆ ನೀಡಿದರು.   

ಕೆಜಿಎಫ್‌: ಕನಕದಾಸರ ಸಾಧನೆ ಕುರುಬ ಸಮುದಾಯಕ್ಕೆ ಶ್ರದ್ಧಾಭಕ್ತಿಯ ಅಭಿಮಾನವಾದರೆ, ಇಡೀ ಸಮಾಜಕ್ಕೆ ದಾಸರು ಆದರ್ಶವಾಗಿದ್ದಾರೆ. ಕನಕ ಜಯಂತಿಯನ್ನು ನಾಡಹಬ್ಬವಾಗಿ ಆಚರಿಸಬೇಕು ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.

ರಾಬರ್ಟಸನ್‌ಪೇಟೆಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಮತ್ತು ಕುರುಬ ಸಮುದಾಯದವರು ಸೋಮವಾರ ಹಮ್ಮಿಕೊಂಡಿದ್ದ ಕನಕ ಜಯಂತಿಯಲ್ಲಿ ಮಾತನಾಡಿದರು. ಸಮಾಜದ ಅಂಕುಡೊಂಕುಗಳನ್ನು ತಿದ್ದಲು, ಅರ್ಥಗರ್ಭಿತ ಕೀರ್ತನೆಗಳನ್ನು ಕನಕದಾಸರು ರಚಿಸಿದ್ದಾರೆ. ಆ ಮೂಲಕ ಸಮಾಜ ಸುಧಾರಣೆಯ ಕನಸು ಕಂಡಿದ್ದರು. ಅವರ ಆದರ್ಶಗಳು ಇಡೀ ವಿಶ್ವಕ್ಕೆ ಮಾದರಿಯಾಗಿವೆ ಎಂದು ಹೇಳಿದರು.

ಕುರುಬ ಸಮುದಾಯ ಹೆಚ್ಚಾಗಿರುವ ಬಡಮಾಕನಹಳ್ಳಿಯಲ್ಲಿ ಹಿಂದುಳಿದ ವರ್ಗಗಳ ಹಾಸ್ಟೆಲ್‌ ಪ್ರಾರಂಭಿಸಲು ಸರ್ಕಾರದಿಂದ ಮಂಜೂರಾತಿ ಸಿಕ್ಕಿದೆ. ಕನಕ ಭವನ ನಿರ್ಮಾಣಕ್ಕೆ ಮೊದಲು ಗುರ್ತಿಸಿದ್ದ ಜಾಗ, ವಿವಾದದಲ್ಲಿ ಇರುವುದರಿಂದ ಬೇರೆ ಪ್ರದೇಶದಲ್ಲಿ ಒಂದು ಎಕರೆ ಹತ್ತುಗುಂಟೆ ಜಮೀನನ್ನು ನೀಡಲಾಗುತ್ತಿದೆ. ಒಂದು ತಿಂಗಳಲ್ಲಿ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ. ಕಂದಾಯ ಇಲಾಖೆಯ ಸಿಬ್ಬಂದಿ ಉತ್ತಮವಾಗಿ ಕೆಲಸ ಮಾಡುತ್ತಿರುವುದರಿಂದ ಕೈಗಾರಿಕೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಜಾಗ ನೀಡಲಾಗಿದೆ. ಎಪಿಎಂಸಿಗೆ ಜಾಗ ನೀಡಲಾಗಿದೆ. ಅದೇ ರೀತಿ ಕನಕ ಭವನಕ್ಕೆ ಕೂಡ ಜಾಗ ನೀಡುವಲ್ಲಿ ತಹಶೀಲ್ದಾರ್‌ ನಾಗವೇಣಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ADVERTISEMENT

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಹರ್ತಿ ಅವರನ್ನು ವೇದಿಕೆಯಲ್ಲಿಯೇ ತರಾಟೆಗೆ ತೆಗೆದುಕೊಂಡ ಶಾಸಕಿ, ಕನಕ ಜಯಂತಿ ಕಾರ್ಯಕ್ರಮ ಯೋಜನಾ ಬದ್ಧವಾಗಿ ನಡೆಯಬೇಕು. ನಿಮ್ಮ ಇಲಾಖೆಯ ಆಸಡ್ಡೆ ಕಾಣುತ್ತಿದೆ. ಇನ್ನು ಮುಂದೆ ಜಾಗರೂಕತೆ ವಹಿಸಿ ಎಂದು ಎಚ್ಚರಿಕೆ ನೀಡಿದರು.

ಸಮುದಾಯದ ಮುಖಂಡರಾದ ಆನಂದಮೂರ್ತಿ, ನಂಜುಂಡಗೌಡ ಮಾತನಾಡಿದರು. ಕನಕ ದಾಸರ ಸ್ತಬ್ಧ ಚಿತ್ರವಿದ್ದ ಟ್ರಾಕ್ಟರ್‌ ನ್ನು ಶಾಸಕಿ ಎಂ.ರೂಪಕಲಾ ಸ್ವಲ್ಪ ದೂರ ಚಾಲನೆ ಮಾಡಿ ಗಮನ ಸೆಳೆದರು. ವಿವಿಧ ಗ್ರಾಮಗಳಿಂದ ಬಂದ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ವಿವಿಧ ಸಾಂಸ್ಕೃತಿಕ ತಂಡಗಳು ಜನರನ್ನು ಆಕರ್ಷಿಸಿದವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.