ಕೋಲಾರ: ‘ನನಗಿನ್ನೂ 27 ವರ್ಷ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಈ ಗೌರವ ಒಲಿದಿದೆ. ನನಗೆ ಲಭಿಸಿದ ಮೊದಲ ಪ್ರಶಸ್ತಿ ಕೂಡ. ಮುಂದಿನ ಗುರಿ ಸಾಧನೆಗೆ ಮತ್ತಷ್ಟು ಸ್ಫೂರ್ತಿ ತುಂಬಿದೆ’ ಎಂದು ಶೂಟಿಂಗ್ ಸ್ಪರ್ಧಿ ದಿವ್ಯಾ ಟಿ.ಎಸ್. ತಿಳಿಸಿದರು.
ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಾಗಿ 2023ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾಗಿರುವ ಅವರು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ತಾಡಿಗೋಳ್ ಗ್ರಾಮದವರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಚೀನಾದ ಹಾಂಗ್‌ಝೌನಲ್ಲಿ ಈಚೆಗೆ ಕೊನೆಗೊಂಡ ಏಷ್ಯನ್ ಕ್ರೀಡಾಕೂಟದಲ್ಲಿ ಅವರು ಬೆಳ್ಳಿ ಪದಕ ಗೆದ್ದಿದ್ದರು. ಮಿಕ್ಸೆಡ್ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಜೊತೆಗೂಡಿ ಈ ಸಾಧನೆ ಮಾಡಿದ್ದರು.
‘ಕ್ರೀಡಾಪಟುಗಳ ಸಣ್ಣ ಸಾಧನೆ ಗುರುತಿಸುವುದು ಮುಖ್ಯ. ಏಕೆಂದರೆ ಯಾವುದೇ ಕ್ರೀಡಾಪಟುವಿನ ಸಾಧನೆ ಹಿಂದೆ ಬಹಳ ವರ್ಷಗಳ ಶ್ರಮವಿರುತ್ತದೆ.ಏಕಾಏಕಿ ಪದಕ ಗೆಲ್ಲಲು ಸಾಧ್ಯವಾಗುವುದಿಲ್ಲ. ಈ ಪ್ರಶಸ್ತಿಗೆ ನಾನು ಅರ್ಜಿ ಸಲ್ಲಿಸಿರಲಿಲ್ಲ. ಸರ್ಕಾರವೇ ನನ್ನ ಸಾಧನೆ ಗುರುತಿಸಿದ್ದು ಖುಷಿ ನೀಡಿದೆ’ ಎಂದು ‘ಪ್ರಜಾವಾಣಿ’ ಜೊತೆ ಸಂತಸ ಹಂಚಿಕೊಂಡರು.
ಮೇ ನಲ್ಲಿ ಬಾಕುವಿನಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್‌ನ ಮಿಕ್ಸೆಡ್ 10 ಮೀ.ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. 65ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್ ಚಿನ್ನದ ಪದಕ ಹಾಗೂ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕಂಚಿನ ಪದಕ ಜಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.