ಕೋಲಾರ: ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳತ್ತ ಮಂಗಳವಾರ ಚುನಾವಣಾ ಸಿಬ್ಬಂದಿ ತೆರಳಿದ್ದು, ಕಣದಲ್ಲಿರುವ 72 ಅಭ್ಯರ್ಥಿಗಳ ಭವಿಷ್ಯವನ್ನು 12.70 ಲಕ್ಷ ಮತದಾರರು ಬುಧವಾರ ನಿರ್ಧರಿಸಲಿದ್ದಾರೆ.
ಆರು ವಿಧಾನಸಭಾ ಕ್ಷೇತ್ರಗಳ ಮಸ್ಟರಿಂಗ್ ಕೇಂದ್ರಗಳಿಂದ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿ ವಿದ್ಯುನ್ಮಾನ ಮತಯಂತ್ರ (ಇವಿಎಂ) ಮತ್ತು ವಿವಿ ಪ್ಯಾಟ್‍ಗಳೊಂದಿಗೆ ತಾವು ನಿಯೋಜಿತಗೊಂಡಿರುವ ಮತಗಟ್ಟೆಗೆ ಬಸ್ಸಿನಲ್ಲಿ ಪ್ರಯಾಣ ಬೆಳೆಸಿದರು.
ಮತಯಂತ್ರಗಳ ಹಂಚಿಕೆ ಹಾಗೂ ಮತಗಟ್ಟೆಗೆ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯು ಸುಗಮವಾಗಿ ನಡೆಯಲು ಅನುಕೂಲವಾಗುವಂತೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿತ್ತು.
ಪ್ರತಿ ಮತಗಟ್ಟೆಗೆ ಒಬ್ಬ ಮತಗಟ್ಟೆ ಅಧಿಕಾರಿಯೊಂದಿಗೆ ನಾಲ್ವರು ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
ಮತಗಟ್ಟೆ ಸಿಬ್ಬಂದಿಗೆ ಊಟ ಹಾಗೂ ಇತರ ವ್ಯವಸ್ಥೆಯನ್ನು ಈ ಬಾರಿ ಅಚ್ಚುಕಟ್ಟಾಗಿ ಮಾಡಿದ್ದರಿಂದ ಯಾವುದೇ ದೊಡ್ಡ ಮಟ್ಟದ ದೂರು ಕೇಳಿ ಬಂದಿಲ್ಲ.
ಜಿಲ್ಲಾ ಕೇಂದ್ರದಲ್ಲಿ ಮಸ್ಟರಿಂಗ್ ಕೇಂದ್ರದ ಮೇಲ್ವಿಚಾರಣೆ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್‍ರಾಜಾ, ‘ಜಿಲ್ಲೆಯಲ್ಲಿ ಮತಗಟ್ಟೆಗಳಿಗೆ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಕಳುಹಿಸುವ ಪ್ರಕ್ರಿಯೆ ಸುಗಮವಾಗಿ ಸಾಗುತ್ತಿದೆ’ ಎಂದರು.
ಮತಗಟ್ಟೆಗಳಿಗೆ 137 ಸೆಕ್ಟರ್ ಅಧಿಕಾರಿಗಳನ್ನು ಹಾಗೂ 471 ಮೈಕ್ರೊ ಅಬ್ಸರ್‌ವರ್‌ಗಳನ್ನು ನೇಮಿಸಲಾಗಿದೆ ಎಂದು ಹೇಳಿದರು.
ಕೋಲಾರ ಕ್ಷೇತ್ರದಲ್ಲಿ 18, ಮುಳಬಾಗಿಲು ಮೀಸಲು ಕ್ಷೇತ್ರದಲ್ಲಿ 12, ಶ್ರೀನಿವಾಸಪುರ ಕ್ಷೇತ್ರದಲ್ಲಿ 9, ಕೆಜಿಎಫ್ ಮೀಸಲು ಕ್ಷೇತ್ರದಲ್ಲಿ 10, ಬಂಗಾರಪೇಟೆ ಮೀಸಲು ಕ್ಷೇತ್ರದಲ್ಲಿ 8 ಹಾಗೂ ಮಾಲೂರು ಕ್ಷೇತ್ರದಲ್ಲಿ 15 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮತಗಟ್ಟೆಯನ್ನು ಬೆಳಿಗ್ಗೆ 6 ಗಂಟೆಗೆ ಸಜ್ಜುಗೊಳಿಸಿ ಮಾದರಿ ಮತದಾನ ಪ್ರಕ್ರಿಯೆಯನ್ನು ನಡೆಸಿ ನಂತರ ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಎರಡು ಗಂಟೆಯೊಮ್ಮೆ ಶೇಕಡವಾರು ಮತದಾನವಾಗಿರುವ ಕುರಿತು ಮಾಹಿತಿಯನ್ನು ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಬಾಲಕರ ಸರ್ಕಾರಿ ಕಾಲೇಜಿನಲ್ಲಿ ಮೇ 13ರಂದು (ಶನಿವಾರ) ಮತ ಎಣಿಕೆ ನಡೆಯಲಿದೆ.
ನಿಷೇಧಾಜ್ಞೆ ಜಾರಿ
ಜಿಲ್ಲೆಯಾದ್ಯಂತ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಮತಗಟ್ಟೆಯ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ಐವರಿಗಿಂತ ಹೆಚ್ಚು ಜನಜಂಗುಳಿ ಸೇರುವುದು, ಮಾರಕಾಸ್ತ್ರಗಳನ್ನು ಬಳಸುವುದು, ಚುನಾವಣಾ ಚಿಹ್ನೆಗಳನ್ನು ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ.
ಗುರುತಿನ ಚೀಟಿ ಕಡ್ಡಾಯ
ಮತದಾನ ಮಾಡಲು ಮತಗಟ್ಟೆಗೆ ಹೋಗುವ ಮತದಾರರ ಬಳಿ ಚುನಾವಣಾ ಆಯೋಗ ನೀಡಿರುವ ಗುರುತಿನ ಚೀಟಿ ಅಥವಾ ಈ ಕೆಳಗಿನ ಯಾವುದಾದರೊಂದು ಗುರುತಿನ ಚೀಟಿ ಕಡ್ಡಾಯವಾಗಿ ಇರಲೇಬೇಕು. ಆಧಾರ್ ಕಾರ್ಡ್ ನರೇಗಾ ಜಾಬ್ ಕಾರ್ಡ್ ಬ್ಯಾಂಕ್ ಪೋಸ್ಟ್ ಆಫೀಸ್ ಭಾವಚಿತ್ರವಿರುವ ಪಾಸ್ ಪುಸ್ತಕ ಆರೋಗ್ಯ ವಿಮೆ ಕಾರ್ಡ್ ಡ್ರೈವಿಂಗ್ ಲೈಸೆನ್ಸ್ ಪಾನ್ ಕಾರ್ಡ್ ಆರ್.ಜಿ.ಐ. ಅಡಿಯಲ್ಲಿನ ಎನ್.ಪಿ.ಆರ್. ನೀಡಿರುವ ಸ್ಮಾರ್ಟ್ ಕಾರ್ಡ್ ಇಂಡಿಯನ್ ಪಾಸ್‍ಪೋರ್ಟ್ ಭಾವವಿತ್ರವಿರುವ ನಿವೃತ್ತಿ ವೇತನ ದಾಖಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೇವೆಯ ಭಾವಚಿತ್ರ ಹೊಂದಿರುವ ಸೇವಾ ಗುರುತಿನ ಚೀಟಿ ಎಂ.ಪಿ. ಎಂ.ಎಲ್.ಎ. ಎಂ.ಎಲ್.ಸಿ.ಗಳಿಗೆ ನೀಡಿರುವ ಗುರುತಿನ ಚೀಟಿ ಹಾಗೂ ಅಂಗವಿಕಲರ ಯುಡಿಐಡಿ ಕಾರ್ಡ್ ಗುರುತಿನ ಚೀಟಿಯಾಗಿ ಬಳಸಬಹುದು.
ಕಣದಲ್ಲಿರುವವರು
ಶ್ರೀನಿವಾಸಪುರ ಕ್ಷೇತ್ರ (9): ಜಿ.ಆರ್.ಶ್ರೀನಿವಾಸರೆಡ್ಡಿ (ಬಿಜೆಪಿ) ವೈ.ವಿ.ವೆಂಕಟಾಚಲ (ಆಮ್ ಆದ್ಮಿ ಪಕ್ಷ) ಕೆ.ಆರ್.ರಮೇಶ್ ಕುಮಾರ್ (ಕಾಂಗ್ರೆಸ್) ಜಿ.ಕೆ.ವೆಂಕಟಶಿವಾರೆಡ್ಡಿ (ಜೆಡಿಎಸ್) ಆನಂದ ಜಿ.ಕೆ (ಕೆಆರ್‌ಎಸ್). ಪಕ್ಷೇತರ ಅಭ್ಯರ್ಥಿಗಳಾದ ಎನ್.ಎಸ್.ರಮೇಶ್ ಕುಮಾರ್ ಎಸ್.ರಮೇಶ್ ಕುಮಾರ್ ವೆಂಕಟಶಿವಾರೆಡ್ಡಿ ಟಿ.ಎನ್.ವೆಂಕಟಶಿವಾರೆಡ್ಡಿ.
ಮುಳಬಾಗಿಲು ಕ್ಷೇತ್ರ (12): ಸುಂದರ್ ರಾಜ್ ಕೆ. (ಬಿಜೆಪಿ) ವಿಜಯಕುಮಾರ್ ಎನ್ (ಆಮ್ ಆದ್ಮಿ ಪಕ್ಷ) ಆದಿನಾರಾಯಣ ವಿ (ಕಾಂಗ್ರೆಸ್) ಮಂಜುನಾಥ್ (ಜೆಡಿಎಸ್) ಆನಂದ ಕುಮಾರ್ ಎಂ (ಕೆಆರ್‌ಎಸ್) ಮೂರ್ತಿ ಕೆ.ವಿ (ಸಾರ್ವಜನಿಕ ಆದರ್ಶ ಸೇನಾ). ಪಕ್ಷೇತರ ಅಭ್ಯರ್ಥಿಗಳಾದ ಗೋವಿಂದಪ್ಪ ಜಿ.ಎಂ ಗೋವಿಂದು ಆರ್ ನಾಗರಾಜ್.ಕೆ ರಾಮಪ್ಪ ಜಿ.ಸಿ ವೆಂಕಟೇಶಪ್ಪ ಶ್ರೀಧರ್ ಆರ್.
ಕೆಜಿಎಫ್ ಕ್ಷೇತ್ರ (10): ಅಶ್ವಿನಿ ಸಂಪಂಗಿ (ಬಿಜೆಪಿ) ಗಗ್ಗನ ಸುಕನ್ಯ ಆರ್ (ಆಮ್ ಆದ್ಮಿ ಪಕ್ಷ) ರೂಪಕಲಾ ಎಂ (ಕಾಂಗ್ರೆಸ್) ಡಾ.ರಮೇಶಬಾಬು ವಿ.ಎಂ (ಜೆಡಿಎಸ್) ಕೋದಂಡ ಆರ್ (ಬಿಎಸ್‌ಪಿ) ತಂಗರಾಜ್ ಪಿ (ಸಿಪಿಎಂ) ಜೋತಿಬಾಸು ಆರ್ (ಸಿಪಿಐ) ರಾಜೇಂದ್ರನ್.ಎಸ್ (ಆರ್‌ಪಿಐ). ಪಕ್ಷೇತರ ಅಭ್ಯರ್ಥಿಗಳಾದ ಕಲಾವತಿ ವಿ. ಡಾ.ಜೋಶ್ವ ಎಂ.ಇ ರಾಜನ್.
ಬಂಗಾರಪೇಟೆ ಕ್ಷೇತ್ರ (8): ಎಂ.ನಾರಾಯಣಸ್ವಾಮಿ (ಬಿಜೆಪಿ) ಹರಿಕೃಷ್ಣ ಆರ್ (ಆಮ್ ಆದ್ಮಿ ಪಕ್ಷ) ಎಸ್.ಎನ್.ನಾರಾಯಣಸ್ವಾಮಿ ಕೆ.ಎಂ(ಕಾಂಗ್ರೆಸ್) ಎಂ.ಮಲ್ಲೇಶಬಾಬು (ಜೆಡಿಎಸ್) ರಾಜಾ ಎಂ (ಕೆಆರ್‌ಎಸ್) ಕೆ.ಎನ್.ನಾರಾಯಣಸ್ವಾಮಿ (ಬಿಎಸ್‌ಪಿ) ಪಕ್ಷೇತರ ಅಭ್ಯರ್ಥಿಗಳಾದ ಜ್ಯೋತೀಶ ಕೋಲಾರ ಎಸ್.ಎನ್ ನಾರಾಯಣಸ್ವಾಮಿ ವಿ.
ಕೋಲಾರ ಕ್ಷೇತ್ರ (18): ಆರ್.ವರ್ತೂರು ಪ್ರಕಾಶ್ (ಬಿಜೆಪಿ) ಜಮೀಲ್ ಅಹಮದ್ ಎನ್ (ಆಮ್ ಆದ್ಮಿ ಪಕ್ಷ) ಜಿ.ಮಂಜುನಾಥ (ಕಾಂಗ್ರೆಸ್) ಸಿ.ಆರ್.ಶ್ರೀನಾಥ್ (ಜೆಡಿಎಸ್) ಇಂದಿರಾ ಎ (ಕೆಆರ್‌ಎಸ್) ಸುರೇಶ ಎಸ್.ಬಿ (ಬಿಎಸ್‌ಪಿ) ಸಿ.ತಮ್ಮಪ್ಪ(ಸಮಾಜವಾದಿ ಪಕ್ಷ) ಎಂ.ಎಸ್.ಬದ್ರಿನಾರಾಯಣ (ಆರ್‌ಪಿಐ) ಪಕ್ಷೇತರ ಅಭ್ಯರ್ಥಿಗಳಾದ ಅರವಿಂದ್ ಜಿ.ಆರ್ ಕೆ.ಎಸ್.ಆರಿಫ್ ಅಮ್ಜದ್ ಪಾಷಾ ದೇವಕುಮಾರ್ ಎಚ್.ಎ ಪ್ರಕಾಶ ಬೈರೆಡ್ಡಿ ಟಿ ಡಿ.ವಿ.ಮಂಜುನಾಥ ಎಂ.ರಮೇಶ ಜಿ.ವೆಂಕಟಾಚಲಪತಿ ಎಸ್.ಸತೀಶ.
ಮಾಲೂರು ಕ್ಷೇತ್ರ (15): ಕೆ.ಎಸ್.ಮಂಜುನಾಥ ಗೌಡ (ಬಿಜೆಪಿ) ರವಿಶಂಕರ್ ಎಂ (ಆಮ್ ಆದ್ಮಿ ಪಕ್ಷ) ಕೆ.ವೈ.ನಂಜೇಗೌಡ (ಕಾಂಗ್ರೆಸ್) ಜಿ.ಈ.ರಾಮೇಗೌಡ (ಜೆಡಿಎಸ್) ಮಹೇಶ.ಎ.ವಿ (ಕೆಆರ್‌ಎಸ್) ಎನ್.ರಮೇಶ (ಬಿಎಸ್‌ಪಿ) ವೆಂಕಟೇಶಗೌಡ ಬಿ.ಜಿ (ಸನ್‌ಯುಕ್ತ್ ವಿಕಾಸ್ ಪಕ್ಷ) ಪಕ್ಷೇತರ ಅಭ್ಯರ್ಥಿಗಳಾದ ಜಯಮ್ಮ ಎನ್.ದೇವಾನಂದಬಾಬು ಕೆ.ನಾಗೇಶ್ ನಾರಾಯಣಮ್ಮ ಎಚ್.ಆರ್.ರಾಮೇಗೌಡ ಎಚ್.ಎಂ.ವಿಜಯಕುಮಾರ್ ಎಂ.ವಿಜಯಕುಮಾರ್ ಮತ್ತು ಸುರೇಶ್.ಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.